ನಗರಸಭೆ ಹಾಲಿ ಸದಸ್ಯರಿಗೆ ಗೆಲವು ಕಷ್ಟ
ಕೋಲಾರ: ಕೋಲಾರ ನಗರಸಭೆಯಲ್ಲಿ ಕಳೆದ ಐದು ವರ್ಷಗಳಲ್ಲಿನ ಆಡಳಿತ ವೈಫಲ್ಯಗಳಿಂದ ಮತದಾರರು ಬೇಸತ್ತಿರುವುದರಿಂದ ಈ ಬಾರಿಯ ಚುನಾವಣೆಗೆ ಮತ್ತೆ ಸ್ಪರ್ಧಿಸಲಿರುವ ಹಾಲಿ ಸದಸ್ಯರು ತಮ್ಮ ವಾರ್ಡುಗಳಲ್ಲಿ ಮತಯಾಚನೆ ಮಾಡುವಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ವೈ.ಎ.ನಾರಾಯಣಸ್ವಾಮಿ ಅಭಿಪ್ರಾಯಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೋಲಾರ ನಗರಸಭೆಯ ಚುನಾವಣೆಗೆ ಈ ಬಾರಿ ಪಕ್ಷದಿಂದ ಸ್ಪರ್ಧಿಸಲು ಸಾಕಷ್ಟು ಕಾರ್ಯಕರ್ತರು ಉತ್ಸಾಹ ತೋರಿದ್ದಾರೆ. ಕೋಲಾರದಲ್ಲಿ ಪಕ್ಷ ಸದೃಢವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಈ ಹಿಂದೆ ನಮ್ಮ ಕಾರ್ಯಕರ್ತರು ಯಾರೂ ಸಹ ಗೆದ್ದಿಲ್ಲ. ಹಾಗಾಗಿ, ಈ ಹಿಂದೆ ಚುನಾಯಿತರಾಗಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದ ಸದಸ್ಯರ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುವುದರ ಜತೆಗೆ ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕೆ ಉತ್ತಮ ಅವಕಾಶಗಳಿವೆ ಎಂದರು.
ನಗರಸಭೆಯಲ್ಲಿ ಜನಪರವಾಗಿ ಕೆಲಸ ಮಾಡಬಲ್ಲ ಉತ್ತರದಾಯತ್ವಯುಳ್ಳ ಸದಸ್ಯರ ಕೊರತೆಯಿಂದ ಮತದಾರರು ಬೇಸತ್ತಿದ್ದಾರೆ. ಈ ಬಾರಿ ನಮ್ಮ ಪಕ್ಷದಿಂದ ಸೂಕ್ತವಾದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ನಗರಸಭೆಯ ಆಡಳಿತವನ್ನು ಹಿಡಿಯುವಂತಾಗಬೇಕೆಂದರು.
ಕೆಜಿಎಫ್, ಬಂಗಾರಪೇಟೆ ಮತ್ತು ಮಾಲೂರಿನಲ್ಲಿ ನಮ್ಮದೇ ಪಕ್ಷದ ಶಾಸಕರು ಇರುವುದರಿಂದ ಈ ಮೂರು ಕ್ಷೇತ್ರಗಳ ವ್ಯಾಪ್ತಿಯ ನಗರಸಭೆ, ಪುರಸಭೆ ಬಿಜೆಪಿ ತೆಕ್ಕೆಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನುಳಿದಂತೆ ಕೋಲಾರ ನಗರಸಭೆ, ಶ್ರೀನಿವಾಸಪುರ ಹಾಗೂ ಮುಳಬಾಗಿಲು ಪುರಸಭೆಯಲ್ಲೂ ನಾವು ಅಧಿಕಾರಕ್ಕೆ ಬರುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಈ ಮೂರು ತಾಲೂಕುಗಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ವಹಿಸುವಂತಾಗಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ನಮ್ಮ ಪಕ್ಷದ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಕೋಲಾರ ಸೇರಿದಂತೆ ಜಿಲ್ಲೆಯ ಇನ್ನಿತರ ತಾಲೂಕುಗಳಿಗೆ ನೀಡಿರುವ ವಿಶೇಷ ಅನುದಾನ, ನೀರಿನ ಸಮಸ್ಯೆ ನಿವಾರಣೆಗೆ ಅದ್ಯತೆ, ಮೂಲ ಸೌಕರ್ಯಗಳ ಅನುಷ್ಟಾನದ ಸಮಗ್ರ ಮಾಹಿತಿಯನ್ನು ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗೆ ತಿಳಿಸಿ ಜಿಲ್ಲೆಯ ಎರಡು ನಗರಸಭೆ, ನಾಲ್ಕು ಪುರಸಭೆಗಳನ್ನು ಗೆಲ್ಲುವುದಕ್ಕೆ ಶ್ರಮಿಸಬೇಕು, ಪ್ರೀತಿ,ವಿಶ್ವಾಸದಿಂದ ಮತ ಕೇಳಬೇಕು, ದಬ್ಬಾಳಿಕೆಯಿಂದ ಚುನಾವಣೆ ನಡೆಸಿದರೆ ಮತದಾರರು ಜಗ್ಗಲ್ಲ ಎಂದು ವಿರೋಧ ಪಕ್ಷದವರ ಕುರಿತು ಮಾರ್ಮಿಕವಾಗಿ ನುಡಿದರು.
ಸಭೆಗೆ ತಡವಾಗಿ ಆಗಮಿಸಿದ ಕೆ.ಆರ್.ಪುರಂ ಶಾಸಕ ನಂದೀಶ್ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳ ಗೆಲುವಿಗೆ ಪಕ್ಷದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಗೆಲುವು ಸಾಧಿಸಬೇಕೆಂದು ತಿಳಿಸಿದರು.
ಪಕ್ಷದ ಹಿರಿಯ ಮುಖಂಡ ಹನುಮಪ್ಪ,ಕಾರ್ಯಕರ್ತರು ಇನ್ನು 10-12 ದಿನ ಸಮರೋಪಾಧಿಯಲ್ಲಿ ಕೆಲಸ ಮಾಡಿದಲ್ಲಿ ಈ ಬಾರಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಬಿಜೆಪಿ ಪಾಲಾಗುವುದರಲ್ಲಿ ಅನುಮಾನವಿಲ್ಲವೆಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಲಕ್ಷ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣೆಗೆ ಪಕ್ಷದಿಂದ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ, ಕೋರ್ಕ್ಮಿಟಿಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ತೀರ್ಮಾನಿಸಲಾಗಿದೆ. ಕೋಲಾರ ನಗರಸಭೆಯ ಎಲ್ಲಾ 35 ವಾರ್ಡುಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಬೇಕೆಂಬ ಉದ್ದೇಶವಿದೆಯಾದರೂ ಕನಿಷ್ಟ 15 ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಪಕ್ಷದ ಎಲ್ಲಾ ಕಾರ್ಯಕರ್ತರ ಪರಿಶ್ರಮವನ್ನು ಸದರಿ 15 ವಾರ್ಡುಗಳಿಗೆ ವಿನಿಯೋಗ ಮಾಡುವುದಕ್ಕೆ ಚಿಂತನೆ ನಡೆಸಿದೆ. ಪ್ರಸ್ತುತ ಪಕ್ಷದಿಂದ 28 ವಾರ್ಡುಗಳಿಗೆ ಅಭ್ಯರ್ಥಿಗಳು ಸಿಕ್ಕಿದ್ದು ಇನ್ನು 7 ವಾರ್ಡುಗಳಿಗೂ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ. ಈ ಬಾರಿ ನಮಗೆ ಪ್ರತಿ ವಾರ್ಡಿನಿಂದ ಕನಿಷ್ಠ 5 ಮಂದಿ ಆಕಾಂಕ್ಷಿಗಳು ಅರ್ಜಿ ಹಾಕಿರುವುದು ಪಕ್ಷದ ಸಂಘಟನೆಗೆ ಅನುಕೂಲವಾಗಿದೆ ಎಂದರು.
ನಗರ ಸಮಿತಿ ಅಧ್ಯಕ್ಷ ಡಿ.ಆರ್.ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕನ್ನತ್ತ ಮುನಿವೆಂಕಟಪ್ಪ, ನೀಲಿ ಕೆ.ಜೈಶಂಕರ್, ಹಿರಿಯ ಉಪಾಧ್ಯಕ್ಷ ನರಸಿಂಹರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಎಸ್ಪಿ ಮೋರ್ಚಾ ಅಧ್ಯಕ್ಷ ಗಾಂಧಿನಗರ ವೆಂಕಟೇಶ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಬೆಗ್ಲಿ ಸಿರಾಜ್, ಖಜಾಂಚಿ ಸತ್ಯನಾರಾಯಣರಾವ್, ಮುಖಂಡರಾದ ವಿಜಯಕುಮಾರ್, ಎಸ್ಟಿ ಮೋರ್ಚಾದ ತಿಮ್ಮರಾಯಪ್ಪ, ನಗರ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಶಿಕ್ಷಣ ತಜ್ಞ ಕೆ.ಆರ್.ಪಿಳ್ಳಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

