ಕೋಲಾರ

ನಾಮಪತ್ರ ನೆವ ಮುಗೀತು, ಇನ್ನೇನಿದ್ರು ಸ್ಪರ್ಧೆ

Published On :

ಚಿಕ್ಕಬಳ್ಳಾಪುರ:  ಅಬ್ಬಾ, ಅಂತು ನಾಮಪತ್ರ ಸಲ್ಲಿಸುವ ಗೊಡವೆ ಮುಗಿಯಿತು. ಹೀಗೆ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರವನ್ನು ಸಲ್ಲಿಸಿರುವ ಅಭ್ಯರ್ಥಿಗಳು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಮಾ.7ರಂದು ನಡೆಯಲಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಆಡಳಿತ ಸಂಸ್ಥೆ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಲು ಫೆ.23 ಕೊನೆ ದಿನವಾಗಿತ್ತು.  ಜಿಲ್ಲೆಯಲ್ಲಿ ನಾನಾ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 1155 ನಾಮಪತ್ರಗಳು ಸಲ್ಲಿಕೆಯಾಗಿವೆ. ಇನ್ನೇನಿದ್ದರೂ ಸಹ ನಾಮಪತ್ರ ಪರಿಶೀಲನೆ, ಅಂಗೀಕಾರ ಮತ್ತು ಚುನಾವಣೆ ನಡೆಯುವ ಪ್ರಕ್ರಿಯೆಗಳೇ ಬಾಕಿ ಉಳಿದಿರುವುದು. ಪ್ರಸ್ತುತ ಅಭ್ಯರ್ಥಿಗಳು ತಾವು ಸಲ್ಲಿಸಿರುವ ನಾಮಪತ್ರದ ಅಂಗೀಕಾರಕ್ಕಾಗಿ ಎದುರು ನೋಡುತ್ತಿರುವುದರ ನಡುವೆ ತಮ್ಮ ತಮ್ಮ ವಾರ್ಡುಗಳಲ್ಲಿನ ಮತದಾರರನ್ನು ಆದಷ್ಟು ಹೆಚ್ಚಿಗೆ ತಮ್ಮ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಗಮನಹರಿಸಿದ್ದಾರೆ.
ಈಗಂತೂ ಅವರಿಗೆ ನಾಮಪತ್ರ ಸಲ್ಲಿಸುವ ವಿಷಯದಲ್ಲಿದ್ದಂತಹ ಒತ್ತಡ ಕಡಿಮೆಯಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಆಕಾಂಕ್ಷಿಗಳಿದ್ದ ಕಾರಣ ಟಿಕೆಟ್ ನೀಡುವ ವಿಷಯದಲ್ಲಿ ಪಕ್ಷದ ಮುಖಂಡರಿಗೆ ತಲೆ ನೋವಾಗಿತ್ತು. ಅದೇ ರೀತಿ ಪಕ್ಷದಿಂದ ತಮಗೆ 'ಬಿ' ಫಾರಂ ಸಿಗುತ್ತಾ ಎಂಬ ಸಂದೇಹವು ಸಹ ಆಕಾಂಕ್ಷಿಗಳನ್ನು ಕೊರೆಯುತ್ತಿತ್ತು. ಇದರಿಂದ ತಮ್ಮ ಪಕ್ಷದಲ್ಲೇ ತಮಗೆ ಪ್ರತಿಸ್ಪರ್ಧಿ ಆಗಿರುವವರಿಗಿಂತಲೂ ಹೆಚ್ಚಿನ ಒತ್ತಡ ಮುಖಂಡರ ಮೇಲೆ ಹೇರಿ ಕೊನೆಗೆ ತಾವೇ ಪಕ್ಷದ ಟಿಕೆಟ್ ಪಡೆಯಲು ಕಸರತ್ತು ನಡೆಸಲು, ತಮ್ಮ ಬಲ ಪ್ರದರ್ಶನದ ಮೂಲಕ ಮುಖಂಡರನ್ನು ಸಮಾಧಾನಪಡಿಸುವುದೇ ಆಕಾಂಕ್ಷಿಗಳಿಗೆ ಹರಸಾಹಸವಾಗಿತ್ತು.
ಪ್ರಾರಂಭದಲ್ಲಿ ಟಿಕೆಟ್ ನೀಡುವ ಸ್ಪಷ್ಟ ಭರವಸೆ ಸಿಕ್ಕಿದ್ದರೂ ಸಹ ಕೊನೆಯ ಕ್ಷಣದಲ್ಲಿ ಬದಲಾಗುವ ಸಾಧ್ಯತೆಗಳಿದ್ದರಿಂದ ಆಕಾಂಕ್ಷಿಗಳಲ್ಲಿ ತಳಮಳ ಸಾಮಾನ್ಯವಾಗಿತ್ತು. ಆದರೆ, ನಾಮಪತ್ರ ಸಲ್ಲಿಸುವ ವಿಚಾರದಲ್ಲಿ ಪಕ್ಷೇತರ ಅಭ್ಯರ್ಥಿಗಳೇ ನಿರಾಳರಾಗಿದ್ದರು. ಚುನಾವಣೆಗೆ ಸ್ಪರ್ಧಿಸುವಾಗ ತಮ್ಮದೇ ನಿರ್ಧಾರವೇ ಪ್ರಮುಖವಾಗಿದ್ದರಿಂದ ಸಹಜವಾಗಿ ನಾಮಪತ್ರ ಸಲ್ಲಿಕೆಯ ಗಜಿಬಿಜಿಗೆ ತುತ್ತಾಗಲಿಲ್ಲ.
ಸಿಬಿಪುರ ನಗರಸಭೆ:  ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ಒಟ್ಟು 165 ನಾಮಪತ್ರ ಸ್ವೀಕರಿಸಲಾಗಿದೆ. ಕಾಂಗ್ರೆಸ್ 33, ಬಿಜೆಪಿ 10, ಜೆಡಿಎಸ್ 31, ಜೆಡಿಯು 2, ಕೆಜೆಪಿ 12, ಬಿಎಸ್ಆರ್ ಕಾಂಗ್ರೆಸ್ 11 ಮತ್ತು 66 ಮಂದಿ ಪಕ್ಷೇತರ ಅಭ್ಯರ್ಥಿಗಳು ಚುನಾವಣೆಗೆ ಎದುರಿಸಲು ಬಯಸಿದ್ದಾರೆ. ನಗರಸಭೆಯಲ್ಲಿ ಒಟ್ಟು 31 ವಾರ್ಡುಗಳಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲಾ ವಾರ್ಡುಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಚುನಾವಣಿಗೆ ನಿಲ್ಲಿಸಿವೆ. ಆದರೆ, ಬಿಜೆಪಿ ಮತ್ತು ಕೆಜೆಪಿ ಸೇರಿದಂತೆ ಇತರೆ ಪಕ್ಷಗಳು, ಪ್ರಮುಖವಾಗಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ವಾರ್ಡುಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇನ್ನೂ 66 ಮಂದಿ ತಮ್ಮ ವೈಯಕ್ತಿಕ ಬಲವನ್ನು ನೆಚ್ಚಿಕೊಂಡು ನಾಮಪತ್ರವನ್ನು ಸಲ್ಲಿಸಿದ್ದಾರೆ. ಅನೇಕ ಮಂದಿ ಅಭ್ಯರ್ಥಿಗಳು ತಾವು ಸಲ್ಲಿಸಿರುವ ನಾಮಪತ್ರಗಳಲ್ಲಿ ದೋಷಗಳು ಕಂಡುಬಂದು ತಿರಸ್ಕೃತಗೊಂಡರೆ ಏನೂ ಗತಿ ಎಂಬ ಭಾವನೆಯಲ್ಲಿ ಎರಡೆರಡು ನಾಮಪತ್ರಗಳನ್ನು ನೀಡಿದ್ದಾರೆ.
ಈ ಬಾರಿಯ ವಿಶೇಷ:  ನಗರಸಭಾ ಮಾಜಿ ಅಧ್ಯಕ್ಷ ಬಿ.ಎ.ಲೋಕೇಶ್ಕುಮಾರ್ ಅವರು ಈ ಬಾರಿ ಚುನಾವಣೆಯ ಕಣದಿಂದ ದೂರ ಉಳಿದಿರುವುದು ಜನರಲ್ಲಿ ಅಶ್ಚರ್ಯ ಮೂಡಿಸಿದೆ. ತಮಗೆ ಕೇಳಿದ ಕಡೆಗೆ ಸ್ಪರ್ಧಿಸಲು ಕಾಂಗ್ರೆಸ್ 'ಬಿ' ಫಾರಂ ನೀಡಲಿಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ನಗರಸಭೆ ರಾಜಕಾರಣದಿಂದ ದೂರ ಉಳಿದಿದ್ದ ಮಾಜಿ ಅಧ್ಯಕ್ಷ ಶ್ರೀರಾಮ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಮಾಜಿ ಶಾಸಕಿ ಅನಸೂಯಮ್ಮ ನಟರಾಜನ್ ಅವರ ಪುತ್ರ ಸಿಂಧೂರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಚುನಾವಣೆಯನ್ನು ಎದುರಿಸಲು ಮುಂದಾಗಿದ್ದಾರೆ. ಪಿ.ಎಂ. ರಘು ಮತ್ತು ಗಾಯತ್ರಿ ರಘು ದಂಪತಿಗಳು ಸಹ ಒಟ್ಟಿಗೆ ಸ್ಪರ್ಧಿಸುತ್ತಿದ್ದಾರೆ. ಮಾಜಿ ಅಧ್ಯಕ್ಷ ಎಂ.ವಿ. ಭಾಸ್ಕರ್ ಪಕ್ಷೇತರರಾಗಿ ಚುನಾವಣಾ ಕಣದಲ್ಲಿದ್ದು ಮಾಜಿ ಅಧ್ಯಕ್ಷ ಎಂ.ಪ್ರಕಾಶ್, ಮಾಜಿ ಸದಸ್ಯರಾದ ಪೆರಿಕಲ್ ಮುನಿಯಪ್ಪ, ಎಸ್.ಎಂ. ರಫಿಕ್, ನಿರ್ಮಲ ಪ್ರಭು, ನಂದಿನಿ ಭೈರೇಗೌಡ, ಚಿಕ್ಕಪ್ಪಯ್ಯ, ಗಜೇಂದ್ರ ಸೇರಿದಂತೆ ಮುಂತಾದವರು ಈ ಬಾರಿಯೂ ಸಹ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂದಾಗಿದ್ದಾರೆ.
ತೀವ್ರ ಪೈಪೋಟಿ:  2007ರ ಮೀಸಲಾತಿಯ ಅನ್ವಯ ಚುನಾವಣೆಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ತೀವ್ರ ಪೈಪೋಟಿ ಜೋರಾಗಿದೆ. ಹೊಸದಾಗಿ ಮೀಸಲಾತಿ ನಿಗದಿಪಡಿಸಿದರೆ, ಸದ್ಯ ಸದಸ್ಯರಾಗಿರುವ ವಾರ್ಡಿನಲ್ಲಿ ಮುಂದೆ ತಮಗೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದುಕೊಂಡು ಸುಮ್ಮನಾಗಿದ್ದವರು ಸಹ ಮತ್ತೆ ಅದೇ ವಾರ್ಡಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ತಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇವರಿಗೆ ಹೊಸಬರು, ಈ ಹಿಂದೆ ಚುನಾವಣೆಯಲ್ಲಿ ಸೋತವರು ತಿರುಗೇಟು ನೀಡುವ ಯೋಚನೆಯಲ್ಲಿದ್ದು ನಾಮಪತ್ರ ಸಲ್ಲಿಕೆಯಾಗಿರುವುದರಲ್ಲಿ ಇದು ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.