ಕೋಲಾರ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳ್ಳೆಯದು: ಜಾಲಪ್ಪ

Published On :

ಕೋಲಾರ:  ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ಬೇಸರವಾಗಿದೆ. ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಲೇಸು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ಜನತೆಗೆ ಒಳ್ಳೆಯದಾಗುತ್ತದೆ ಎಂದು ನಾಡಿನ ಹಿರಿಯ ರಾಜಕಾರಣಿ, ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ ತಿಳಿಸಿದರು.
ಇಲ್ಲಿನ ಶ್ರೀದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಹೆಲಿಪ್ಯಾಡಿನಲ್ಲಿ ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರೊಂದಿಗೆ ಶನಿವಾರ ಅನೌಪಚರಿಕವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಬಗ್ಗೆ ಜನತೆ ಭ್ರಮ ನಿರಸನರಾಗಿರುವುದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಉತ್ತಮ ಅವಕಾಶಗಳಿವೆ. ತಮಗೆ ಬಂದಿರುವ ಮಾಹಿತಿಗಳ ಪ್ರಕಾರ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣಗಳು ಕಾಣಬರುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಆಗುವುದಕ್ಕೆ ಅನೇಕರು ಪೈಪೋಟಿ ನಡೆಸಿದ್ದಾರೆ. ಇದರಿಂದ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಅಡ್ಡಿ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಸೂಚ್ಯವಾಗಿ ಉತ್ತರಿಸಿದ ಅವರು, ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷರೂ ಸಹ ಆಗಿರುವ ಆರ್.ಎಲ್.ಜಾಲಪ್ಪ ಅವರು, ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಇರುವುದರಿಂದ ನಾಯಕತ್ವ ನಿರ್ಧಾರದ ವಿಚಾರದಲ್ಲಿ ಯಾವುದೇ ಗೊಂದಲ ಉಂಟಾಗಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಶಾಸಕರು ರಾಜಿನಾಮೆ ನೀಡುತ್ತಿರುವುದರ ಬಗ್ಗೆ ಕೇಳಿದಾಗ, ಈ ಸರ್ಕಾರದ ಆಯಸ್ಸು ಮುಗಿಯುತ್ತಾ ಬಂದಿರುವುದರಿಂದ ಆ ದೇವರೇ ಕಾಪಾಡಬೇಕೆಂದರು.
ರಾಜ್ಯ ರಾಜಕಾರಣ ಸರಿದಾರಿಯಲ್ಲಿ ಸಾಗುವುದಕ್ಕೆ ತಾವೇನಾದರೂ ಸಲಹೆ ನೀಡುವಿರೇ ಎಂದು ಕೇಳಿದಾಗ, ನಾನು ಈಗ ರಾಜಕೀಯ ರಂಗದಲ್ಲಿ ಸ್ಕ್ರ್ಯಾಪ್ ಕೆಲಸಕ್ಕೂ ಬಾರದವನಾಗಿದ್ದೇನೆ. ನನ್ನ ಮಾತು ಯಾರು ಕೇಳುತ್ತಾರೆಂದು ನೊಂದು ನುಡಿದರು.
ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯದರ್ಶಿಗಳೂ ಆದ ತಮ್ಮ ಭಾವಮೈದುನರಾದ ಜಿ.ಎಚ್. ನಾಗರಾಜ್ ಅವರು ಮತ್ತೆ ಕಾಂಗ್ರೆಸ್ ಸೇರಿರುವ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ಇವರ ತೀರ್ಮಾನಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂದರು.
ತಮ್ಮ ಪುತ್ರ ನರಸಿಂಹಸ್ವಾಮಿ ಬಿಜೆಪಿಯಲ್ಲೇ ಮುಂದುವರಿಯುತ್ತಾರೆಯೇ ಎಂದು ಕೇಳಿದಾಗ, ಬಿಜೆಪಿ ಸೇರಿದಾಗಲೇ ಅವನಿಗೂ ನನಗೂ ಇದ್ದ ಸಂಬಂಧ ಕಳಚಿಕೊಂಡಿದೆ. ಆದರೂ ನಾನು ಊರಿನಲ್ಲಿದ್ದಾಗ ಮನೆಗೆ ಬಂದು ನನ್ನ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಾನೆ. ಇಷ್ಟು ಬಿಟ್ಟರೆ ಅವನೊಂದಿಗೆ ಯಾವುದೇ ವ್ಯವಹಾರ ಇಟ್ಟುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯ ಶಾಸಕರು ರಾಜಿನಾಮೆ ನೀಡಿ ಕಾಂಗ್ರೆಸ್ ಸೇರುತ್ತಿರುವುದರಿಂದ ಪಕ್ಷಕ್ಕೆ ವಲಸಿಗರ ಸಮಸ್ಯೆ ಹೆಚ್ಚಾವುದಿಲ್ಲವೇ ಎಂದು ಹೇಳಿದಾಗ, ಈ ಪ್ರಶ್ನೆ ನನಗೇಕೆ ಕೇಳುತ್ತೀರಾ? ಕೋಲಾರಕ್ಕೆ ಬರುತ್ತಿರುವ ಸಿದ್ದರಾಮಯ್ಯನವರನ್ನು ಕೇಳಿದರೆ ಒಳ್ಳೆಯದೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.