ಇಂದು 'ಲೆಟ್ ಪಾಲಿತ್ರೈವ್ ಏನೇ ಯಾರೇ ಕೂಗಾಡಲಿ' ನಾಟಕ
ಕೋಲಾರ: ನಗರದ ತೇರಹಳ್ಳಿ ಬೆಟ್ಟದ ಮೇಲಿರುವ ಆದಿಮ ಕೇಂದ್ರದಲ್ಲಿ ಫೆ.25ರಂದು ಹುಣ್ಣಿಮೆ ಹಾಡು-82 ಕಾರ್ಯಕ್ರಮದ ಪ್ರಯುಕ್ತ ಆದಿಮ ಕಲಾ ತಂಡದಿಂದ ವಿಶೇಷ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಆದಿಮ ಸಂಸ್ಥೆಯ ರೂವಾರಿ, ರಂಗ ಕರ್ಮಿ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ರಚಿಸಿರುವ 'ಲೆಟ್ ಪಾಲಿತ್ರೈವ್ ಏನೇ ಯಾರೇ ಕೂಗಾಡಲಿ' ಎಂಬ ನಾಟಕವನ್ನು ಆದಿಮ ಕಲಾ ತಂಡ ಪ್ರದರ್ಶಿಸುತ್ತಿದ್ದಾರೆ. ಈ ಹುಣ್ಣಿಮೆಗೆ ಕೋಲಾರ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಕೆ. ಶ್ರೀಧರ್ಮೂರ್ತಿ ಅವರು ಪ್ರಾಯೋಜಕರಾಗಿದ್ದಾರೆ. ಸೂರೊಂದು ಊರು ನೂರು ಎಂಬ ನಂಬಿಕೆಯಲ್ಲಿ ನಡೆಯುತ್ತಿರುವ ಆದಿಮ ಸಾಂಸ್ಕೃತಿಕ ಕೇಂದ್ರ ತನ್ನ 8 ವರ್ಷಗಳ ದೀರ್ಘ ಪಯಣದಲ್ಲಿ ಮನುಷ್ಯನೋರ್ವನೊಳಗಿರುವ ಶಕ್ತಿ, ವಿವೇಕ ಮತ್ತು ಸೌಂದರ್ಯವನ್ನು ಮನುಕುಲದ ಉಳಿವಿಗಾಗಿ ಶೋಧಿಸುತ್ತಿರುವ ಜೀವತಾಣವಾಗಿದೆ. ಜಾತಿ, ಮತ, ಭಾಷೆ, ಲಿಂಗ ತಾರತಮ್ಯ ಬೇದಗಳಿಂದಾಚೆಗೆ ನಿಂತು ಸಮಸ್ತ ಸಾಮಾಜಿಕ ನೆಲೆಗಳನ್ನು ಒಂದುಗೂಡಿಸುವ ಸಾಂಸ್ಕೃತಿಕ ರಕ್ಷಣಾ ತಳಹದಿಯೊಂದನ್ನು ನಿರ್ಮಿಸಲು ಹೊರಟಿದೆ. ಈ ನಡೆಯಲ್ಲಿ ಹುಣ್ಣಿಮೆ ಹಾಡು ಒಂದು ಪ್ರಯೋಗ ಭಾಗವಾಗಿದ್ದು, ಸೋಮವಾರ ಸಂಜೆ 7 ಗಂಟೆಗೆ 82ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಆದಿಮ ಕಲಾವಿದರು ವಿಶೇಷ ನಾಟಕದ ಮೂಲಕ ಜನರನ್ನು ರಂಜಿಸಲು ತಯಾರಾಗಿದ್ದಾರೆ.
ನಾಟಕದ ಬಗ್ಗೆ ಒಂದಿಷ್ಟು ಮಾಹಿತಿ: 'ಲೆಟ್ ಪಾಲಿತ್ರೈವ್ ಏನೇ ಯಾರೇ ಕೂಗಾಡಲಿ' ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ರಚನೆಯ ಈ ನಾಟಕ ಸಗಣಿ ಗಂಜಳಗಳಲ್ಲೂ ತಾರತಮ್ಯ ನೆಲೆಗೊಂಡಿರುವ ಭಾರತೀಯ ಮನೋಧರ್ಮದ ನಿಜ ನೆಲಯ ಶೋಧನೆಯ ಕಿರುಪ್ರಯತ್ನವಾಗಿದೆ. ಇದಕ್ಕಾಗಿ ನಾಟಕಕಾರರು, ಮರಸುನಾಡು ಮಣ್ಣಿನ ಜನಪದ ಕಥೆಯೊಂದನ್ನು 'ಸಂಪತ್ತಿಗೆ ಸವಾಲ್' ಎಂಬ ಜನಪ್ರಿಯ ಸಿನೆಮಾ ಎಳೆಯನ್ನೂ ಹಾಗೂ ಅದಕ್ಕೆ ಸ್ಫೂರ್ತಿ ನೀಡಿದ ದುತ್ತರಗಿಯವರ ವೃತ್ತಿ ನಾಟಕದ ಕಥಾ ಹಂದರ ಬಳಸಿಕೊಂಡಿದ್ದಾರೆ. ನಾಟಕದಲ್ಲಿ ತೇರಹಳ್ಳಿ ಶಿವಗಂಗೆಯ ಅರುಣಾ, ಮಾದೇವಿ, ನೆಲಮಂಗಲ ಲಕ್ಷ್ಮಣ, ಲತಾ, ರಾಯಚೂರು ಡಿಂಗ್ರಿ ನರೇಶ, ಸಿರವಾರದ ಚಿದಂಬರ, ಟಿ.ಗೊಲ್ಲಹಳ್ಳಿ ನಾರಾಯಣಸ್ವಾಮಿ, ಚನ್ನಪಟ್ಟಣ ಶೃತಿ, ಚಂದ್ರು ತಿಪಟೂರು, ದುರ್ಗಮ್ಮ ಹಗರಿಬೊಮ್ಮನಹಳ್ಳಿ, ಮಹಂತೇಶ್ ಬಾಗಲಕೋಟೆ, ಗಣೇಶ್ ಉಡುಪಿ ಮತ್ತು ಮುಂಬೈನ ಮೋಹಿತ್ ಪಾತ್ರಧಾರಿಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

