ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಹರೀಶ್ ಹಂದೆ
ಶಿಡ್ಲಘಟ್ಟ: ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾವಂತರು. ಆದರೆ, ಅವಕಾಶ ವಂಚಿತರು. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾರೆ ಎಂದು ಸೆಲ್ಕೋ ಸಂಸ್ಥೆ ಸ್ಥಾಪಿಸಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆ ಹೇಳಿದರು.
ತಾಲೂಕಿನ ಮುತ್ತೂರು ಗ್ರಾಮದ ಪ್ರೌಢಶಾಲೆಯ 120 ವಿದ್ಯಾರ್ಥಿಗಳಿಗೆ ವಿದ್ಯುತ್ ಅಡಚಣೆಯಿಂದ ಓದಲು ತೊಂದರೆಯಾಗಬಾರದೆಂದು ದಿ.ಸಂಜಯ ದಾಸ್ ಗುಪ್ತ ಅವರ ನೆನಪಿನ ನಮ್ಮ ಮುತ್ತೂರು ಸಂಸ್ಥೆ ಪ್ರಾಯೋಜಕರಿಂದ ಸೋಲಾರ್ ದೀಪ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ವಿದ್ಯುತ್ ಇಲ್ಲದೆಯೇ ಇರುವ ಕುಗ್ರಾಮಗಳಿವೆ. ಸೂರ್ಯ ನೀಡುವ ಬೆಳಕು ಎಲ್ಲರಿಗೂ ತಲುಪುವಂತೆ ಆತನ ಶಕ್ತಿಯ ಬಳಕೆಯೂ ಎಲ್ಲೆಡೆಯೂ ತಲುಪಬೇಕು. ಮಕ್ಕಳು ಸೋಲಾರ್ ದೀಪಗಳ ವಿತರಣೆಯ ಹಿಂದಿನ ಮಹತ್ವ ಅರಿತು ಚೆನ್ನಾಗಿ ಓದಿ ಗ್ರಾಮದ ಪ್ರಗತಿಗೆ ಕಾರಣರಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುತ್ತೂರಿನ ಶಾಲೆಯಲ್ಲಿನ ಸಿಎಂಸಿಎ ಸಿವಿಕ್ ಕ್ಲಬ್ ರೀತಿ ನಗರದ ವಿವಿಧ ಖಾಸಗಿ ಶಾಲೆಗಳಲ್ಲಿನ ಸಿವಿಕ್ ಕ್ಲಬ್ ರೀತಿ ವಿದ್ಯಾರ್ಥಿಗಳು ಮತ್ತು ಕೆಲವು ದಾನಿಗಳು ತಲಾ ಒಂದೂವರೆ ಸಾವಿರ ರು. ಬೆಲೆಯ ಸೋಲಾರ್ ದೀಪಗಳನ್ನು ಮಕ್ಕಳಿಗೆ ಒದಗಿಸಿದ್ದಾರೆ. ಸೋಲಾರ್ ದೀಪಗಳನ್ನು ಬಡವರಿಗೆ ಕಡಿಮೆ ಬೆಲೆಯಲ್ಲಿ ಸಿಗಲು ತಂತ್ರಜ್ಞಾನ ರೂಪಿಸಿ ಪ್ರಚುರಪಡಿಸುತ್ತಿರುವ ಹರೀಶ್ ಹಂದೆ ಇಲ್ಲಿಗೆ ಆಗಮಿಸಿ ಅವರೇ ಮಕ್ಕಳಿಗೆ ಭವಿತವ್ಯದ ಕನಸು ಬಿತ್ತಿರುವುದು ಸಂತಸದ ಸಂಗತಿ ಎಂದು ಮುತ್ತೂರು ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು.
ಕಳೆದ ವರ್ಷ ಗಣೇಶ ಹಬ್ಬದ ಸಮಯದಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಶಾಲೆಯ ವಿದ್ಯಾರ್ಥಿ ನಾಗೇಶ್ ನೆನಪಿನಲ್ಲಿ ಶಾಲೆಯ ಅಂಗಳದಲ್ಲಿನ ನಾಗೇಶ್ ಸಂಜೀವಿನಿ ವನದಲ್ಲಿ ಬೆಟ್ಟದ ನೆಲ್ಲಿಕಾಯಿ ಸಸಿಯನ್ನು ಹರೀಶ್ ಹಂದೆ ನೆಟ್ಟರು ಮತ್ತು ಅವರು ಶಾಲೆಯ ಸಿಎಂಸಿಎ ಪಠ್ಯಕ್ರಮ ಮುಗಿಸಿರುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಶಿಕ್ಷಣ ಸಂಯೋಜಕಿ ನಾಗರತ್ನ, ಮುಖ್ಯ ಶಿಕ್ಷಕ ಆಂಜನೇಯ, ಸಿಎಂಸಿಎ ಗ್ರಾಮೀಣ ಕಾರ್ಯಕ್ರಮದ ಅಧಿಕಾರಿ ಮಂಜುನಾಥ, ಶಿಕ್ಷಕರಾದ ಶ್ರೀನಿವಾಸ್, ರವಿ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

