ಕೋಲಾರ

ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತೆಂತ ಗೊತ್ತು: ವರ್ತೂರ್

Published On :

ಕೋಲಾರ: ಜನರ ವಿಶ್ವಾಸಕ್ಕೆ, ನಂಬಿಕೆಗೆ ದ್ರೋಹ ಬಗೆದರೆ ಅವರು ನೀಡುವ ಶಿಕ್ಷೆ ಏನೆಂಬುದು ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಸೋಲಿನಿಂದ ಅರ್ಥ ಮಾಡಿಕೊಂಡಿರುವುದರಿಂದ ಮತ ನೀಡಿದ ಜನರಿಗೆ ದ್ರೋಹ ಎಸಗದೆ ಕ್ಷೇತ್ರದ ಅಭಿವೃದ್ಧಿಗೆ ಕೈಲಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ತಿಳಿಸಿದರು.
ಇಲ್ಲಿನ ರಹಮತ್ ನಗರದ ಜೆಡಿಎಸ್ ಮಹಿಳಾ ಘಟಕದ ಮುಖಂಡರು ಹಾಗೂ ನಗರಸಭೆ ಮಾಜಿ ಸದಸ್ಯೆ ಶಯೀನ್ ಹಾಗೂ ಇನ್ನಿತರರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಸಚಿವರು, ಕಳೆದ ಚುನಾವಣೆಯಲ್ಲಿ ಸೋತ ವ್ಯಕ್ತಿಯಿಂದ ಪಡೆದ ಅನುಭವವನ್ನು ನಾನು ಪಾಠವಾಗಿ ಕಲಿತದ್ದರಿಂದ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಯಿತು ಎಂದರು.
ಕ್ಷೇತ್ರದಲ್ಲಿ ನಾನು ಶಾಸಕನಾದ ನಂತರ ಚುನಾವಣೆಗೂ ಮುನ್ನಾ ಜನರ ಬಳಿ ಹೇಗಿದ್ದೇನೋ ಈಗಲೂ ಹಾಗೇ ಇರುವುದರಿಂದ ಜನರ ಪ್ರೀತಿ ಉಳಿಸಿಕೊಳ್ಳಲು ಸಾಧ್ಯವಾಯಿತು. ನಗರಸಭೆಯಲ್ಲಿ ನಾನೇ ಗೆಲ್ಲಿಸಿದ ಸದಸ್ಯರುಗಳು ಕೈಕೊಟ್ಟಾಗ ಜನತೆಯ ವಿಶ್ವಾಸ ಉಳಿಸಿಕೊಳ್ಳುವುದಕ್ಕಾಗಿ ನಾನೇ ವಾರ್ಡುಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಅರಿತು ಕೆರೆಗಳಿಗೆ ಹೋಗಿ ವಾಲ್‌ಮೆನ್ ರೀತಿಯಲ್ಲಿ ಕೆಲಸ ಮಾಡಿಸಿದ್ದೇನೆ. ನನಗೆ ಯಾವುದೇ ಅಹಂ ಇಲ್ಲ, ಜನ ನೀಡಿರುವ ಅಧಿಕಾರಿವನ್ನು ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ ಎಂದರು.
ನಗರಸಭೆ ಮಾಜಿ ಸದಸ್ಯೆ ಶಯೀನ್ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್‌ನಿಂದ ಟಿಕೆಟೆ ಸಿಗದಿದ್ದರೂ ಪರವಾಗಿಲ್ಲ, ಆದರೆ, ಅಲ್ಲಿ ಪಕ್ಷಕ್ಕಾಗಿ ದುಡಿಯುವವರಿಗೆ ಮಾನ್ಯತೆ ನೀಡುತ್ತಿಲ್ಲ ಎಂದು ನೊಂದಿರುವ ನಾನು ಸಚಿವ ವರ್ತೂರು ಬಣದ ಅಭ್ಯರ್ಥಿಪರ ಕೆಲಸ ಮಾಡುವುದಲ್ಲದೆ ತಮ್ಮ ತಂಡದೊಂದಿಗೆ ಸಚಿವರ ಬಣಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದರು.
ಮುಖಂಡರಾದ ಅಬೀಬಾ, ಅಲ್ಲಾಬಕಾಷ್, ಮಹಮದ್ ಸಿದ್ಧಿಕ್, ಅಮ್ಜದ್‌ಖಾನ್ ಮತ್ತಿತರರು ವರ್ತೂರು ಬಣಕ್ಕೆ ಸೇರ್ಪಡೆಗೊಂಡರು. ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ರಘುರಾಂ, ಪ್ರಕಾಶ್, ಖಮ್ಮರ್ ಇದ್ದರು.

'ವರ್ತೂರ್‌ರಿಂದ ಬೆದರಿಕೆ ತಂತ್ರ'

ಕೋಲಾರ: ಮಾ. 7ರಂದು ನಡೆಯುವ ನಗರಸಭೆ ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿ, ಸಚಿವ ವರ್ತೂರ್ ಪ್ರಕಾಶ್ ಅವರು ಸೋಲಿನ ಭಯದಿಂದ ಜೆಡಿಎಸ್ ಅಭ್ಯರ್ಥಿಗಳ ಮನೆಗಳಿಗೆ ತಮ್ಮ ಕಡೆಯವರನ್ನು ಕಳುಹಿಸಿ ಚುನಾವಣಾ ಕಣದಿಂದ ಹಿಂದೆ ಸರಿಯಲು ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ. ನಗರದ 5 ನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜೆಡಿಎಸ್ ಪಕ್ಷದ ಅಶೋಕ್‌ಕುಮಾರ್ ಅವರ ಮನೆಗೆ ಸಚಿವರ ಬೆಂಬಲಿಗರು ಹೋಗಿ ಅಭ್ಯರ್ಥಿಯ ತಂದೆ- ತಾಯಿಗೆ ಧಮಕಿ ಹಾಕಿದ್ದಾರೆ. ಇದರಿಂದ ಜೆಡಿಎಸ್ ಅಭ್ಯರ್ಥಿಗಳು ಹೆದರಬೇಕಾಗಿಲ್ಲ. ಸಚಿವರ ಬೆಂಬಲಿಗರಿಗೆ ಪಾಠ ಕಲಿಸುವ ಶಕ್ತಿ ನಮಗೂ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಗರಸಭೆಯ ಸದಸ್ಯರಾಗಿದ್ದ ಸಚಿವರ ಬೆಂಬಲಿಗ ಸೋಮಶೇಖರ್ ಈ ಹಿಂದೆ ನಗರಾಯುಕ್ತರಾಗಿದ್ದ ಶಾಲಿನಿ ಅವರ ಜತೆ ಅಸಭ್ಯವಾಗಿ ವರ್ತಿಸಿದ್ದರು. ಇದೇ ವ್ಯಕ್ತಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರೊಟ್ಟಿಗೂ ಅನಾಗರಿಕವಾಗಿ ನಡೆದುಕೊಂಡು ಜನತೆಯಿಂದ ಟೀಕೆಗೆ ಗುರಿಯಾಗಿದ್ದರು. ಕೋಲಾರ ಕ್ಷೇತ್ರಕ್ಕೆ ವರ್ತೂರ್ ಪ್ರಕಾಶ್ ಬಂದ ಮೇಲೆ ಜಾತಿ ಜಾತಿಗಳ ನಡುವೆ ವೈಷ್ಯಮ್ಯದ ವಿಷಬೀಜ ಬಿತ್ತುತ್ತಿದ್ದಾರೆ. ದ್ವೇಷದ ರಾಜಕಾರಣ ವ್ಯಾಪಕವಾಗಿ ಬೆಳೆಯುತ್ತಿದೆ. ಈ ವ್ಯಕ್ತಿಗೆ ಕ್ಷೇತ್ರದ ಜನ ಹಾಲು ಹಾಕಿ ಪೋಷಿಸಿದರೆ ಮುಂದೆ ವಿಷಸರ್ಪವಾಗಿ ಕ್ಷೇತ್ರದಲ್ಲಿ ರಕ್ತಸಿಕ್ತ ವಾತಾವರಣ ನಿರ್ಮಾಣ ಆಗಬಹುದೆಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.