ಸಿನಿಮಾ ಹುಚ್ಚಿನಿಂದ ಹಣಕ್ಕೆ ಪೀಡಿಸಿ ಕೊಲೆಯಾದ ಯುವಕ
ಚಿಂತಾಮಣಿ: ಸಿನಿಮಾ ನಿರ್ಮಾಣಕ್ಕೆ 8 ಲಕ್ಷ ನೀಡುವಂತೆ ವಿಧವಿಧವಾಗಿ ಪೀಡಿಸುತ್ತಿದ್ದ ಮಗನ ಕಿರುಕುಳ ತಾಳದೆ ಪೋಷಕರೇ ಆತನಿಗೆ ದೊಣ್ಣೆಯಿಂದ ಹೊಡೆದು ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿರುವ ಘಟನೆ ಬಿ.ವಡ್ಡರಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬಿ.ಕಾಂ. ವಿದ್ಯಾರ್ಥಿ ಚಂದ್ರಶೇಖರ್ (22) ಕೊಲೆಯಾದನು. ಗ್ರಾಮದ ಅಶ್ವತ್ಥರೆಡ್ಡಿ ಎಂಬವರ ಪುತ್ರ. ಕೊಲೆಯನ್ನು ಆತ್ಮಹತ್ಯೆಯೆಂದು ತಿರುಚಲು ವಿಫಲ ಯತ್ನ ನಡೆಸಲಾಗಿದೆ. ಈ ಸಂಬಂಧ ತಂದೆ ಅಶ್ವತ್ಥರೆಡ್ಡಿ, ತಾಯಿ ನಾಗರತ್ನಮ್ಮ ಹಾಗೂ ಅಣ್ಣ ನಾಗೇಶ್ ಎಂಬವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಘಟನೆಯ ವಿವರ: ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಬಿ.ಕಾಂ. ಓದುತ್ತಿರುವ ಚಂದ್ರಶೇಖರ್, 7 ವರ್ಷಗಳಿಂದ ಸ್ನೇಹಿತರೊಂದಿಗೆ ಕುಡಿದು, ಜೂಜಾಡಿ ಅಪಾರ ಹಣವನ್ನು ಹಾಳು ಮಾಡಿದ್ದ. ಚಲನಚಿತ್ರ ಬಾಕ್ಸ್‌ಗಳ ಖರೀದಿಗೂ ಮುಂದಾಗಿದ್ದರಿಂದ ಲಕ್ಷಾಂತರ ರು. ಸಾಲಗಾರನಾಗಿದ್ದ. ಪ್ರತಿ ಬಾರಿ ಹಣಕ್ಕೆ ಪೀಡಿಸುತ್ತಿದ್ದ ಮಗನ ಉಪಟಳದಿಂದ ಪೋಷಕರು ಬೇಸತ್ತಿದ್ದರು. ಕೂಡಿಟ್ಟ ಅಲ್ಪಸ್ವಲ್ಪ ಹಣ ಕಳೆದುಕೊಂಡಿದ್ದರು.
2 ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದ ಚಂದ್ರಶೇಖರ ಕುಡಿದು ಚಲನಚಿತ್ರ ನಿರ್ಮಾಣ ಮಾಡಲು 8 ಲಕ್ಷ ನೀಡುವಂತೆ ಮನೆಯಲ್ಲಿ ರಂಪಾಟ ನಡೆಸಿದ್ದ. ಇದರಿಂದ ಬೇಸತ್ತ ಪೋಷಕರು ಚಂದ್ರಶೇಖರ್‌ಗೆ ವಿದ್ಯುತ್ ಶಾಕ್ ನೀಡಿ, ದೊಣ್ಣೆಯಿಂದ ಬಲವಾಗಿ ಹಲ್ಲೆ ನಡೆಸಿದ ಪರಿಣಾಮ ಮೃತಪಟ್ಟಿದ್ದ.
ಈ ಕೊಲೆಯನ್ನು ಆತ್ಮಹತ್ಯೆ ಎಂದು ಪ್ರಕರಣ ತಿರುಚಲು ರಾತ್ರಿಯೆಲ್ಲಾ ಪೋಷಕರು ಹಾಗೂ ಹಲವು ಮುಖಂಡರು ವಿಫಲ ಯತ್ನ ನಡೆಸಿದ್ದರು ಎನ್ನಲಾಗಿದೆ. ಬಳಿಕ ವಿಷಯ ಪೊಲೀಸರ ಕಿವಿಗೆ ಬಿದ್ದಾಗ ಕೊಲೆಯಾಗಿದ್ದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್, ಡಿವೈಎಸ್ಪಿ ಶೇಖರ್, ವೃತ್ತ ನಿರೀಕ್ಷಕ ಕೃಷ್ಣಪ್ಪ ವಿಚಾರಣೆ ನಡೆಸಿ, ತಂದೆ, ತಾಯಿ ಹಾಗೂ ಅಣ್ಣನನ್ನು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿ, ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

