ಕೋಲಾರ

ಅಂಧ ಮಹಿಳೆಗೆ ವಂಚನೆ: ಗರ್ಭಿಣಿಯನ್ನು ಬಾವಿಗೆ ತಳ್ಳಿ ಪರಾರಿಯಾದ ದುಷ್ಕರ್ಮಿ

Published On :

ಕ.ಪ್ರ. ವಾರ್ತೆ  ಬಾಗೇಪಲ್ಲಿ  ಜು.9
ಅವಿವಾಹಿತ ಅಂಧ ಮಹಿಳೆಯನ್ನು ನಂಬಿಸಿದ ದುಷ್ಕರ್ಮಿಯೊಬ್ಬ ಗರ್ಭಿಣಿಯನ್ನಾಗಿ ಮಾಡಿ, ಅದು ತಿಳಿದ ಕೂಡಲೇ ನೀರಿಲ್ಲದ ಬಾವಿಗೆ ತಳ್ಳಿ ಪರಾರಿಯಾಗಿರುವ ಘಟನೆ ನಡೆದಿದೆ.
ಗರ್ಭಿಣಿ ಮಹಿಳೆ ಪುಟ್ಟಪರ್ತಿ ಗ್ರಾಮದ ಶಿವಮ್ಮ (30). ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಮ್ಮ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆ ನಂಜುಂಡಪ್ಪ ಕೃಷಿಕರಾಗಿದ್ದು, ನಾವು 3 ಜನ ಮಕ್ಕಳು. ಶಿವಮ್ಮ ಎಂಬ ನಾನು ಹುಟ್ಟು ಅಂಧೆಯಾಗಿದ್ದು, ಹಿರಿಯ ಮಗಳಾಗಿದ್ದೇನೆ. ಇದೇ ಪುಟ್ಟಪರ್ತಿ ಗ್ರಾಮದ ಆದೆಪ್ಪ (43) ಪ್ರತಿದಿನ ನಮ್ಮ ತಂದೆಯನ್ನು ಮಾತನಾಡುವ ಸಲುವಾಗಿ ಮನೆಗೆ ಬರುತ್ತಿದ್ದ. ಮನೆಯಲ್ಲಿರುವವರೆಲ್ಲರೂ ವ್ಯವಸಾಯಕ್ಕಾಗಿ ಜಮೀನಿನ ಬಳಿ ತೆರಳಿದಾಗ ಅಂಧೆಯಾದ ನಾನು ಒಂಟಿಯಾಗಿ ಮನೆಯಲ್ಲೇ ಇರುತ್ತಿದ್ದೆ. ಆ ಸಂದರ್ಭದಲ್ಲಿ ಮನೆಗೆ ಬರುತ್ತಿದ್ದ ಆದೆಪ್ಪ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ. ಇದರಿಂದಾಗಿ ನಾನು ಗರ್ಭಿಣಿಯಾದೆ. ಈ ವಿಷಯವನ್ನು ಮನೆಯವರಿಗೆ ತಿಳಿಸಬಾರದು. ನಿನ್ನನ್ನು ಮದುವೆಯಾಗುತ್ತೇನೆ ಎಂದೇಳಿ ದಿನಗಳು ದೂಡುತ್ತಲೇ ಬಂದ. ನಾನು ಈಗ 6 ತಿಂಗಳ ಗರ್ಭಿಣಿಯಾಗಿದ್ದು, ಕಳೆದ ಒಂದು ವಾರದ ಹಿಂದೆ  ಹೆಚ್ಚಿನ ಒತ್ತಡ ಹಾಕಿದಾಗ ಶನಿವಾರ ರಾತ್ರಿ ನಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ಅರಿಶಿನಕೊಂಬು ತೆಗೆದುಕೊಂಡು ಮದುವೆಯಾಗುವುದಾಗಿ ಕರೆದುಕೊಂಡು ಹೋದ. ನಾನು ನಂಬಿ ಅವನ ಜೊತೆ ಹೋದಾಗ ಊರಿನ ಸಮೀಪದಲ್ಲಿರುವ ನೀರಿಲ್ಲದ ಬಾವಿಯ ಬಳಿ ಕರೆದುಕೊಂಡು ಹೋಗಿ ಬಾವಿಗೆ ತಳ್ಳಿ ಪರಾರಿಯಾದ ಎಂದು ಅಳಲು ತೊಡಿಕೊಂಡರು.
ಬಾವಿಯಲ್ಲೇ 2 ದಿನ: ಕಳೆದ ಎರಡು ದಿನಗಳಿಂದ ನಾನು ಬಾವಿಯಲ್ಲೇ ಇದ್ದೆ ಆ ಸಂದರ್ಭದಲ್ಲಿ ಸೋಮವಾರ ಸಂಜೆ ಕುರಿಗಳು ಬಾವಿಯ ಪಕ್ಕದಲ್ಲಿ ಹಾದು ಹೋಗುವ ಶಬ್ದ ಕೇಳಿಸಿತು.ಆಗ ನಾನು ಕಿರುಚಿಕೊಂಡಾಗ ಕುರಿ ಕಾಯುವವರು ಬಾವಿಯಲ್ಲಿರುವುದನ್ನು ನೋಡಿ ನನ್ನನ್ನು ಬಾವಿಯಿಂದ ಮೇಲಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿಸಿದಳು.
ಈ ಸಂಬಂಧವಾಗಿ ಶಿವಮ್ಮಳ ತಂದೆ ನಂಜುಂಡಪ್ಪ ಅವರನ್ನು ವಿಚಾರಿಸಿದಾಗ ಶನಿವಾರ ರಾತ್ರಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಶಿವಮ್ಮ ಕಾಣಿಸಲಿಲ್ಲ, ಸೋಮವಾರ ಸಂಜೆ ಕುರಿ ಕಾಯುವವರು ನನ್ನ ಮಗಳನ್ನು ಕರೆತಂದರು. ಆಗ ವಿಚಾರಿಸಿದಾಗ ನಡೆದ ಘಟನೆ ತಿಳಿಸಿದಳು. ಈಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವುದಾಗಿ ತಿಳಿಸಿದರು. ಆದೆಪ್ಪ ಈಗಾಗಲೇ ಮದುವೆಯಾಗಿದ್ದು ಹೆಂಡತಿ ಮತ್ತು ಇಬ್ಬರು ಮಕ್ಕಳು ಸಹ ಇದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆದೆಪ್ಪ ತಲೆ ಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.