ಕೋಲಾರ

ಬಜೆಟ್‌ನಲ್ಲಿ ಕೃಷಿಗೆ ಆದ್ಯತೆ ನೀಡಿ: ಕೆಪಿಆರ್‌ಎಸ್ ಸಮ್ಮೇಳನದಲ್ಲಿ ಬಯ್ಯಾರೆಡ್ಡಿ ಆಗ್ರಹ

Published On :

ಕೋಲಾರ: ರಾಜ್ಯದಲ್ಲಿನ ಸಣ್ಣ ಮತ್ತು ಅತಿ ಸಣ್ಣ ರೈತರು ಎದುರಿಸುತ್ತಿರುವ ಬಿಕ್ಕಟ್ಟಿನ ನಿವಾರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜು.12ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಆದ್ಯತೆ ನೀಡದಿದ್ದರೆ ರಾಯಚೂರಿನಲ್ಲಿ ನಡೆಯಲಿರುವ ರಾಜ್ಯದ ಮಟ್ಟದ ಪ್ರಾಂತ ರೈತ ಸಂಘದ ಸಮ್ಮೇಳನದಲ್ಲಿ ಹೋರಾಟಕ್ಕೆ ಕರೆ ನೀಡುವುದಾಗಿ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಎಚ್ಚರಿಕೆ ನೀಡಿದರು.ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ  ಕೋಲಾರ ತಾಲೂಕು 6ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿಗಳು ಬಜೆಟ್ ಸಂಬಂಧ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ರೈತರ ಪರವಾಗಿ ವ್ಯಕ್ತಪಡಿರುವ ಕಾಳಜಿ ಮತ್ತು ಸರ್ಕಾರದ ಉದ್ದೇಶಗಳ ಬಗ್ಗೆ ನಮಗೆ ವಿಶ್ವಾಸ ಮೂಡಿತ್ತು. ಆದರೆ, ದೆಹಲಿಯಲ್ಲಿ ಅವರು ಕೃಷಿ ವಲಯದ ಮೇಲೆ ಪರಿಣಾಮ ಬೀರುವ ಚಿಲ್ಲರೆ ವ್ಯಾಪಾರಕ್ಕೆ ಬಂಡವಾಳ ಹೂಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವ ನಿಲುವಿಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿರುವುದರಿಂದ ಆತಂಕ ಮೂಡಿದೆ ಎಂದರು.
ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ರೈತರು 42 ಸಾವಿರ ಎಕರೆ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಬಗರ್‌ಹುಕುಂ ಸಾಗಾವಳಿ ಮಾಡುತ್ತಿದ್ದಾರೆ, ಸಾಗುವಳಿ ಸಕ್ರಮಕ್ಕೆ ರೈತರು ಒತ್ತಾಯಿಸುತ್ತಿದ್ದರೂ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ, ಈ ಹಿಂದಿನ ಬಿಜೆಪಿ ಸರ್ಕಾರ ಬಗರ್ಹುಕುಂ ಸಾಗುವಳಿ ಜಮೀನುಗಳನ್ನು ಸಕ್ರಮಗೊಳಿಸಲು ನಿರ್ಲಕ್ಷ್ಯ ತೋರಿದ್ದರಿಂದ ಬೆಂಗಳೂರಿನ ಮೇಯರ್ ವೆಂಕಟೇಶಮೂರ್ತಿ ಮತ್ತು ಅವರ ಪತ್ನಿ 9 ಎಕರೆ ಸಾಗುವಳಿ ಜಮೀನನ್ನು ಮಂಜೂರು ಮಾಡಿಸಿಕೊಂಡು ಈಗ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹಾದಿಯಲ್ಲಿ ನಡೆದರೆ ರೈತರಿಗೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಬಿಜೆಪಿಗೆ ಬಂದ ಗತಿಯೇ ಕಾಂಗ್ರೆಸ್ಸಿಗೆ ಬರುವುದರಲ್ಲಿ ಅನುಮಾನವಿಲ್ಲ. ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇದೆ. ಆದರೆ, ಅವರು ಕಾಂಗ್ರೆಸ್ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಹೇಳಿದಂತೆ ಅಧಿಕಾರ ನಡೆಸಿದರೆ ವಿಶ್ವಾಸ ಕಳೆದುಕೊಳ್ಳುತ್ತಾರೆಂದು ತಿಳಿಸಿದರು.
ಬಜೆಟ್‌ನಲ್ಲಿ ರೈತರಿಗೆ ನ್ಯಾಯ ಕಲ್ಪಿಸುವ ವಿಶ್ವಾಸವಿದೆ, ಹಾಗಾಗಿ ಕಾದು ನೋಡಿ ಜು.12 ರನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸೋಣವೆಂದ ಬಯ್ಯಾರೆಡ್ಡಿ ಅವರು, ಕಾಂಗ್ರೆಸ್ ಜನತೆಗೆ ನೀಡಿರುವ ಭರವಸೆಯಂತೆ ಡಾ. ಪರಮಶಿವಯ್ಯ ವರದಿ ಜಾರಿ ಮಾಡಬೇಕು, ಬಿಪಿಎಲ್ ಕಾರ್ಡುದಾರರಿಗೂ ಅನ್ನ ಭಾಗ್ಯ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷತೆಯನ್ನು ಕೆ.ಪಿ.ಆರ್. ಎಸ್ ನ ತಾಲೂಕು ಅಧ್ಯಕ್ಷ ಟಿ. ಕೃಷ್ಣೇಗೌಡ ವಹಿಸಿದ್ದರು, ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ರಾಯಚೂರಿನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಸಮ್ಮೇಳನ ನಡೆಸುತ್ತಿರುವುದಾಗಿ ಹೇಳಿದರು. ಕಾರ್ಯದರ್ಶಿ ಗಂಗಮ್ಮ, ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.