ಚಿಕ್ಕಬಳ್ಳಾಪುರದಲ್ಲಿ ಶಾಸಕ ಶಿವಶಂಕರ ರೆಡ್ಡಿ ಚಾಲನೆ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಜು. 10
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಬಿಪಿಎಲ್ ಪಡಿತರ ಕಾರ್ಡುದಾರರಿಗೆ 1 ರು. ದರದಲ್ಲಿ 1 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಜಿಲ್ಲೆಯಲ್ಲಿ ಗೌರಿಬಿದನೂರು ಶಾಸಕ ಎನ್.ಹೆಚ್. ಶಿವಶಂಕರ ರೆಡ್ಡಿ ಚಾಲನೆ ನೀಡಿದರು.
ನಗರದ ದರ್ಗಾ ಮೊಹಲ್ಲಾದಲ್ಲಿ ಬುಧವಾರ ನಡೆದ ಅನ್ನಭಾಗ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಕಾಂಗ್ರೆಸ್ ಸರ್ಕಾರ ದಿಟ್ಟ ನಿರ್ಣಯ ಕೈಗೊಂಡು ಬಡವರ ಹಸಿವನ್ನು ನೀಗಿಸಲು ಯೋಜನೆಯನ್ನು ಜಾರಿಗೆ ತಂದಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಬಿಪಿಎಲ್ ಕಾರ್ಡನ್ನು ಹೊಂದಿರುವವರಿಗೆ 1 ರು. ದರದಲ್ಲಿ 1 ಕೆ.ಜಿ. ಅಕ್ಕಿ ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಯೋಜನೆ ಬಡವರ ಪಾಲಿಗೆ ವರದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಯೋಜನೆ ಮೂಲಕ, ಮೂರು ಜನಕ್ಕಿಂತ ಹೆಚ್ಚಿರುವ ಬಿಪಿಎಲ್ ಕುಟುಂಬಕ್ಕೆ 30 ಕೆ.ಜಿ, ಇಬ್ಬರು ಇರುವ ಕುಟುಂಬಕ್ಕೆ 20 ಕೆ.ಜಿ. ಹಾಗೂ ಒಬ್ಬರಿಗೆ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಈ ಯೋಜನೆಯ ಲಾಭವನ್ನು ರಾಜ್ಯದ ಸುಮಾರು 3 ಕೋಟಿ ಜನರು ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎಂದ ಅವರು,ಅಕ್ರಮ ಬಿಪಿಎಲ್ ಕಾರ್ಡ್ ಗಳಿಗೆ ಕಡಿವಾಣ ಹಾಕಿ ಅವಶ್ಯವಿರುವವರಿಗೆ ಕಾರ್ಡ್ ವಿತರಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆ ಜನರಿಗೆ ತಲುಪಿ ಯಶಸ್ವಿಯಾಗಲು ಪ್ರತಿಯೊಬ್ಬರು ಶ್ರಮಿಸಬೇಕೆಂದ ಅವರು, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದ ಅಲ್ಪಸಂಖ್ಯಾತರ ಸಾಲ ಮನ್ನಾ ಮಾಡಿದೆ. ಹಾಲು ಉದ್ದಿಮೆಗೆ ನೀಡುವ ಸಹಾಯಧನ ಪ್ರತಿ ಲೀಟರ್ಗೆ 2 ರು..ಗಳಿಂದ 4 ರು.ಗಳಿಗೆ ಹೆಚ್ಚಿಸಿದೆ. ಅದೇ ರೀತಿ 12 ರಂದು ಮುಖ್ಯಮಂತ್ರಿಗಳು ಮಂಡಿಸುವ ಬಜೆಟ್ನಲ್ಲಿ ಜಿಲ್ಲೆಗೆ ಹಲವು ಸವಲತ್ತುಗಳು ಸಿಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಎತ್ತಿನಹೊಳೆ ಹಾಗೂ ಪರಮಶಿವಯ್ಯ ಯೋಜನಯನ್ನು ಶೀಘ್ರವೇ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದವರು ತಿಳಿಸಿದರು.
ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ಸರ್ಕಾರವು ಬಡವರು ಹಸಿವಿನಿಂದ ಇರಬಾರದು. ಎಲ್ಲರಿಗೂ ಹೊಟ್ಟೆತುಂಬಾ ಊಟ ಸಿಗಬೇಕೆಂಬ ಆಶಯದಲ್ಲಿ ಅನ್ನಭಾಗ್ಯ ಯೋಜನೆ ರೂಪಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಅವರು,ಗ್ರಾಮ ಪಂಚಾಯ್ತಿಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣಾ ಕೇಂದ್ರ ಕೇವಲ ಒಂದಿದ್ದು, ಕನಿಷ್ಠ ನಾಲ್ಕು ಕೇಂದ್ರಗಳನ್ನು ಶೀಘ್ರವೇ ತೆರೆಯುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದರು.
ಶಿಡ್ಲಘಟ್ಟ ಶಾಸಕ ರಾಜಣ್ಣ ಮಾತನಾಡಿ, ಈ ಅನ್ನಭಾಗ್ಯ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಕ್ಕಿ ವಿತರಿಸಬೇಕಾಗುತ್ತದೆ. ಸರಿಯಾದ ತೂಕ, ಭದ್ರತೆ ವ್ಯವಸ್ಥೆಯನ್ನು ಹೊಂದಿದ ಪ್ಯಾಕೆಟ್ಗಳನ್ನು ತಯಾರಿಸಿ ಅಕ್ಕಿ ವಿತರಿಸುವುದು ಸೂಕ್ತ ಎಂದವರು ಅಭಿಪ್ರಾಯಪಟ್ಟರು. ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರು, ಸುಮಾರು 1 ಕೋಟಿ ರು. ಕಾಮಗಾರಿಗಳಿಗೆ ಚಾಲನೆ ನೀಡಿದರು. ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಉಪಾಧ್ಯಕ್ಷ ಪಿ.ವಿ. ರಾಘವೇಂದ್ರ ಹನುಮಾನ್, ವಿಧಾನ ಪರಿಷತ್ ಸದಸ್ಯ ಡಾ. ಮುಮ್ತಾಜ್ ಅಲಿಖಾನ್, ಮಾಜಿ ಶಾಸಕರಾದ ಅನುಸೂಯಮ್ಮ, ಮುನಿಯಪ್ಪ, ಸಿಇಓ ಬಿ.ಎಸ್. ಶೇಖರಪ್ಪ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

