ರಾಜಕಾರಣಿಗಳು ಸರಿಹೋದ್ರೆ ಅಧಿಕಾರಿಗಳೂ ಸರಿಹೋಗ್ತಾರೆ..
ಕ.ಪ್ರ.ವಾರ್ತೆ ಕೋಲಾರ ಜು. 10
ವಿಧಾನಸೌಧದಲ್ಲಿ ಭ್ರಷ್ಟಾಚಾರ ನಿಂತಾಗ ಮಾತ್ರ ಉಳಿದ ಕಡೆ ಅಧಿಕಾರಿಗಳು ಪ್ರಾಮಾಣಿಕರಾಗಲು ಸಾಧ್ಯವೆಂದು ಕೋಲಾರ ಕ್ಷೇತ್ರದ ಶಾಸಕ ಆರ್. ವರ್ತೂರ್ ಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ಕೋಲಾರ ನಗರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಬುಧವಾರ ಅನ್ನ ಭಾಗ್ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಅಧಿಕಾರಿಗಳು ಭ್ರಷ್ಟರಾಗಲು ರಾಜಕಾರಣಿಗಳು ಕಾರಣ, ಮೊದಲು ನಾವು ಸರಿ ಹೋದ್ರೆ ಅಧಿಕಾರಿಗಳು ತಾನಾಗಿಯೇ ಸರಿ ಹೋಗುತ್ತಾರೆಂದು ನುಡಿದರು.
ಆಹಾರ ಇಲಾಖೆಯ ಉಪ ನಿರ್ದೇಶಕರಾಗಿ ಕೋಲಾರಕ್ಕೆ ಬರಬೇಕಾದರೆ ಅಧಿಕಾರಿ ರಾಜಕಾರಣಿಗಳಿಗೆ 5 ಲಕ್ಷ ರು. ಲಂಚ ಕೊಡಬೇಕು, ಹಣ ಕೊಟ್ಟು ಬರುವ ಅಧಿಕಾರಿ ನ್ಯಾಯ ಬೆಲೆ ಅಂಗಡಿಗಳಿಂದ ಲಂಚ ಪಡೆಯಬೇಕಾಗುತ್ತದೆ, ಇದಕ್ಕೆ ಕಡಿವಾಣ ಹಾಕಬೇಕಾದರೆ ಮೊದಲು ರಾಜಕಾರಣಿಗಳು ಬದಲಾಗಬೇಕಾಗಿದೆ ಎಂದು ತಿಳಿಸಿದರು.
15 ಕೋಟಿ ಲಂಚ: ಇತ್ತೀಚೆಗೆ ತಾವು ಬೆಳಗಾವಿ ಪ್ರವಾಸಕ್ಕೆ ಹೋಗಿದ್ದಾಗ ಕೆಪಿಎಸ್ಸಿ ಮಾಡಿರುವ ಅಧಿಕಾರಿಯೊಬ್ಬರು ಪರಿಚಯವಾದರೂ ಉನ್ನತ ಹುದ್ದೆಗಾಗಿ 15 ಕೋಟಿ ಲಂಚ ನೀಡಿರುವುದಾಗಿ ತಮ್ಮ ಬಳಿ ಅಳಲು ತೋಡಿಕೊಂಡರು. ಲಂಚ ನೀಡಿ ಅಧಿಕಾರಿಯಾಗಿರುವ ಆ ವ್ಯಕ್ತಿ ಖರ್ಚು ಮಾಡಿರುವ ಹಣ ವಾಪಸ್ ಪಡೆಯಲು ಬಡಜನರನ್ನು ಸುಲಿಗೆ ಮಾಡದೆಯೇ ಇರುತ್ತಾನೆಯೇ ಎಂದರು.
ಕೋಲಾರದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರಾಗಿದ್ದ ಶ್ರೀನಿವಾಸಯ್ಯ ಪರಮ ಭ್ರಷ್ಟರಾಗಿದ್ದರು, ನಾನು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದಾಗ ನಾಲ್ಕೈದು ಬಾರಿ ಸಂಬಂಧಪಟ್ಟ ಸಚಿವರು ಮತ್ತು ಮುಖ್ಯಮಂತ್ರಿಗೆ ಅಧಿಕಾರಿಯ ವರ್ಗಾವಣೆ ಮಾಡುವಂತೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ. 7 ವರ್ಷ ಕೋಲಾರದಲ್ಲಿ ಇದ್ದ ಆ ಅಧಿಕಾರಿಯನ್ನು ಕಡೆಗೆ ಚುನಾವಣಾ ಆಯೋಗವು ಬೇರೆ ಕಡೆ ವರ್ಗಾಯಿಸಿತು ಎಂದು ಸಭೀಕರ ಗಮನಕ್ಕೆ ತಂದರು.
ಶ್ರೀನಿವಾಸಯ್ಯ ಕೋಲಾರದಲ್ಲಿದ್ದಾಗ ನ್ಯಾಯ ಬೆಲೆ ಅಂಗಡಿಗಳಿಂದ ಪ್ರತಿ ತಿಂಗಳು 25 ಲಕ್ಷ ರು. ಲಂಚ ಪಡೆಯುತ್ತಿದ್ದರು. ಅದೇ ಆಸಾಮಿ ಈಗ ಚಿಕ್ಕಬಳ್ಳಾಪುರ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರಾಗಿ ಬರುವುದಕ್ಕೆ ಯತ್ನಿಸುತ್ತಿದ್ದಾರೆ, ಯಾವುದೇ ಕಾರಣಕ್ಕೂ ಆ ಅಧಿಕಾರಿಗೆ ವರ್ಗಾವಣೆ ಆಗಿ ಬರದಂತೆ ಸರ್ಕಾರ ಎಚ್ಚರವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಲ್ಲಿ ಮನವಿ ಮಾಡಿದರು.
ಹಣೆ ಬರಹ ತಿಳಿಯುತ್ತೆ: ಶಾಶ್ವತ ನೀರಾವರಿಗಾಗಿ ನಾನು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಇನ್ನು ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಲಿದ್ದಾರೆ, ನೀರಾವರಿಗಾಗಿ 10 ಸಾವಿರ ಕೋಟಿ ನೀಡುವುದಾಗಿ ಹೇಳಿರುವ ಸರ್ಕಾರ ಬಜೆಟ್ನಲ್ಲಿ 100 ಕೋಟಿ ಪ್ರಕಟಿಸಿದರೆ ಪ್ರಯೋಜನವಾಗುವುದಿಲ್ಲ, 3 ದಿನಗಳಲ್ಲಿ ಜಿಲ್ಲೆಯ ಹಣೆ ಬರಹ ನಿರ್ಧಾರವಾಗಲಿದೆ, ಜಿಲ್ಲೆಗೆ ಅನ್ಯಾಯವಾದಲ್ಲಿ ಸಿದ್ದರಾಮಯ್ಯ ನಮ್ಮರೇ ಆಗಿದ್ದರೂ ವಿಧಾನಸಭೆಯಲ್ಲಿ ಧರಣಿ ಮಾಡುವುದು ಖಚಿತವೆಂದು ಎಚ್ಚರಿಕೆ ನೀಡಿದರು.
ಬಿಜೆಪಿ ಸರ್ಕಾರವಿದ್ದಾಗ ಮಂತ್ರಿ ಆಗಿದ್ದರಿಂದ ಸರ್ಕಾರದ ವಿರುದ್ಧ ಮಾತನಾಡಲು ಆಗಿರಲಿಲ್ಲ. ಈಗ ಪಕ್ಷೇತರನಾಗಿರುವುದರಿಂದ ವಿಧಾನಸಭೆಯಲ್ಲಿ ಜನತೆಯ ಪರವಾಗಿ ದನಿ ಎತ್ತುವೆ ಇದಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರವಿರುತ್ತದೆ ಎಂಬ ಭರವಸೆಯಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

