ಕೋಲಾರ

10 ಸಾವಿರ ಮಂದಿಗೆ ಕರಕುಶಲ ತರಬೇತಿ

Published On :

ಕ.ಪ್ರ.ವಾರ್ತೆ  ಕೋಲಾರ   ಜು.13
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ 10 ಸಾವಿರ ಜನರಿಗೆ ಕರಕುಶಲ ತರಬೇತಿ ನೀಡಲು ಕೇಂದ್ರ ಸರ್ಕಾರದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಇಲಾಖೆಯು ಉದ್ದೇಶಿಸಿದೆ ಎಂದು ಇಲಾಖೆಯ ಸ್ವಾತಂತ್ರ್ಯ ನಿರ್ವಹಣೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಕೋಲಾರ ತಾಲೂರಿನ ಹೊನ್ನೇನಹಳ್ಳಿಯಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕೆಗಳ ಸ್ವಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ನೂತನ ತರಬೇತಿ ಕಟ್ಟಡ, ವಸತಿ ನಿಲಯಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ವರ್ಷ 10 ಸಾವಿರ ಮಂದಿಗೆ ಕರಕುಶಲ ತರಬೇತಿ ನೀಡಲಿದ್ದು, ಇದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಕೈಗಾರಿಕಾ ಸಚಿವಲಾಯದಿಂದ ಒದಗಿಸಲಾಗುತ್ತದೆ ಎಂದರು.
ಸ್ವಸಹಾಯ ಸಂಘಗಳು ಸಾಲ ಪಡೆದು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗಿವೆ, ಸ್ತ್ರೀಶಕ್ತಿ ಸಂಘಗಳು ಸಹ ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ನೆಮ್ಮದಿಯ ಹಾಗೂ ಸ್ವಾಭಿಮಾನದಿಂದ ಬದುಕಲು ಪ್ರಯತ್ನಿಸಬೇಕೆಂದು ತಿಳಿಸಿದರು.
ಕೇಂದ್ರ ಸರ್ಕಾರ ಗ್ರಾಮೀಣ ಬಡಜನರು ಆರ್ಥಿಕವಾಗಿ ಸಬರಲಾಗಬೇಕೆಂಬ ಉದ್ದೇಶದಿಂದ ಠೇವಣಿ ರಹಿತ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಮಾಡಿದ್ದು ಬಿಪಿಎಲ್ ಕುಟುಂಬಗಳು ಖಾತೆಯಲ್ಲಿ 10 ಸಾವಿರ ರು.ಹಣವನ್ನು ಬಡ್ಡಿ ರಹಿತವಾಗಿ ಇಡುತ್ತಿದ್ದು, ಇದನ್ನು ಕಷ್ಟ ಕಾಲದಲ್ಲಿ ಉಪಯೋಗಿಸಿಕೊಂಡು ಮರುಪಾವತಿ ಮಾಡುವ ಮೂಲಕ ಪ್ರಗತಿ ಸಾಧಿಸಬೇಕೆಂದರು.
ಬಜೆಟ್ಗೆ ಶ್ಲಾಘನೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ ಬಜೆಟ್ನಲ್ಲಿ ಕೃಷಿ, ನೀರಾವರಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನಪರ ಬಜೆಟ್ ಮಂಡಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲ ವರ್ಗದ ಹಿತ ಬಯಸಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದಾರೆ. ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆಯಾದ ಪರಮಶಿವಯ್ಯ ವರದಿ ಜಾರಿಗೆ ವಿಸ್ತೃತ ವರದಿ ತಯಾರಿಕೆಗಾಗಿ 50 ಕೋಟಿ ರು.ನೀಡಲು ಸಮ್ಮತಿಸಿರುವುದು ಹಾಗೂ ಎತ್ತಿನ ಹೊಳೆ ಯೋಜನೆಗೆ 1 ಸಾವಿರ ಕೋಟಿಯನ್ನು ಮೀಸಲಿಟ್ಟಿರುವುದರಿಂದ ನೀರಿನ ಸಮಸ್ಯೆ ಅದಷ್ಟು ಬೇಗನೆ ತಪ್ಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಬ್ಯಾಂಕ್ಗಳು ಗ್ರಾಮೀಣ ಭಾಗದ ಜನತೆಗೆ ಹಲವಾರು ಕಾರ್ಯಕ್ರಮಗಳು ಜೊತೆಗೆ ಸಾಲವನ್ನು ನೀಡುತ್ತಿದ್ದು, ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೆಜಿಎಫ್ನ ಚಿನ್ನದ ಗಣಿಯನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿಂದೆ ಕೆ.ಹೆಚ್. ಮುನಿಯಪ್ಪನವರ ಪರಿಶ್ರಮವಿದೆ, ಜಿಲ್ಲೆಗೆ ಮತ್ತಷ್ಟು ಯೋಜನೆಗಳನ್ನು ತರುವ ಮೂಲಕ ಜನತೆಯ ಬಯಕೆ ಈಡೇರಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚೌಡೇಶ್ವರಿ ರಾಮು ಮಾತನಾಡಿದರು. ಬೆಂಗಳೂರು ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ ಕುಮಾರ್ ಗುಪ್ತ ಮಾತನಾಡಿ, ಕೋಲಾರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ 1990ರಲ್ಲಿ ಪ್ರಾರಂಭ ಮಾಡಿದ ಕೇಂದ್ರದಲ್ಲಿ ಇದುವರೆಗೂ ಸುಮಾರು 27 ಸಾವಿರ ಮಂದಿಗೆ ತರಬೇತಿ ನೀಡಿದ್ದು, ಇದರಲ್ಲಿ 18 ಸಾವಿರ ಮಂದಿ ಸ್ವಉದ್ಯೋಗ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಅ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಮುಖಂಡರಾದ ಹೊಳಲಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶ್ಮೂರ್ತಿ ಕೆನರಾ ಬ್ಯಾಂಕಿನ ಮಹಾ ಪ್ರಬಂಧಕರಾದ ಎಸ್.ರಮೇಶ್, ಉಪಪ್ರಬಂಧಕ ಸಂಪತ್ಕುಮಾರ್ ಇದ್ದರು.
ಬೆಂಗಳೂರು ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಎಸ್.ಎಸ್.ಭಟ್ ಸ್ವಾಗತಿಸಿ, ರಾಜು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.