ಕೋಲಾರ

ಸರ್ಕಾರದ ಅನುದಾನ ಸಕಾಲ ಬಳಕೆ ಮಾಡಿ

Published On :

ಕ.ಪ್ರ.ವಾರ್ತೆ   ಕೋಲಾರ   ಜು. 15
ಸರ್ಕಾರದ ಅನುದಾನವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಕಾಲಕ್ಕೆ ಬಳಕೆ ಮಾಡಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸದಿದ್ದರೆ ಅನುದಾನ ವಾಪಸ್ ಹೋಗುವುದರಿಂದ ಜಿಲ್ಲೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ತಿಳಿಸಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಲಿಂಕ್ ಡಾಕ್ಯುಮೆಂಟ್ ಯೋಜನೆ, ಯೋಜನೇತರದಲ್ಲಿ ಬಿಡುಗಡೆಯಾದ ಅನುದಾನ ಮತ್ತು ವಿವಿಧ ಕೆಲಸಗಳಿಗೆ ಆಗಿರುವ ಖರ್ಚು ವೆಚ್ಚದ ಕುರಿತು ಅವರು ಮಾಹಿತಿ ಪಡೆದರು.
ಪ್ರಸಕ್ತ ಸಾಲಿನಲ್ಲಿ ಜಿ.ಪಂ.ವ್ಯಾಪ್ತಿಯ ವಿವಿಧ ಇಲಾಖೆಗೆ ಬಿಡುಗಡೆಯಾಗುವ ಅನುದಾನವನ್ನು ಸಕಾಲಕ್ಕೆ ಬಳಕೆ ಮಾಡಿಕೊಳ್ಳಿ, ಮಾರ್ಚ್‌ವರೆಗೆ ಕಾಯುವುದರಿಂದ ಅನುದಾನ ಕೈತಪ್ಪಿ ಹೋಗುತ್ತದೆ ಎಂದು ಅಧಿಕಾರಿಗಳಿಗೆ ಸೂಚ್ಯವಾಗಿ ತಿಳಿಸಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಕ್ರೀಡಾಂಗಣ ನಿರ್ಮಾಣ, ನಿರ್ವಹಣೆಗೆ 6 ಲಕ್ಷ ಮಂಜೂರಾಗಿ 2 ಲಕ್ಷ ಬಿಡುಗಡೆಯಾಗಿದೆ. ಕ್ರೀಡಾಶಾಲೆಗೆ 8 ಲಕ್ಷದಲ್ಲಿ 2 ಲಕ್ಷ ಕ್ರೀಡಾಪಟುಗಳಿಗೆ ನೆರವು ನೀಡಲು 4 ಲಕ್ಷ ರು.ಗಳಲ್ಲಿ 1.30 ಲಕ್ಷ ರು. ಅನುದಾನ ಬಿಡುಗಡೆಯಾಗಿ ಸ್ವಲ್ಪ ಮಾತ್ರ ಖರ್ಚು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ಇಲಾಖೆಗೆ ಸಿಗುವ ಅನುದಾನವೇ ಕಡಿಮೆ. ಅದನ್ನೂ ಖರ್ಚು ಮಾಡೋದಕ್ಕೆ ತಾತ್ಸಾರವೇಕೆಂದು ಕ್ರೀಡಾ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಚೌಡೇಶ್ವರಿ, ಅನುದಾನ ಖರ್ಚು ಮಾಡೋದಕ್ಕೆ ಮಾರ್ಚ್‌ವರೆಗೆ ಯಾಕೆ ಕಾಯಬೇಕು, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಮಯಕ್ಕೆ ಸರಿಯಾಗಿ ಖರ್ಚು ಮಾಡದಿದ್ದರೆ ವಾಪಸ್ ಹೋಗುವುದಿಲ್ಲವೇ ಎಂದರು. ಕ್ರೀಡಾಕೂಟಗಳು ಆಗಸ್ಟ್‌ನಿಂದ ಆರಂಭವಾಗುತ್ತವೆ. ಕ್ರೀಡಾಪಟುಗಳಿಗೆ ನೆರವಿನಡಿ ಕುಸ್ತಿ, ಪೈಲ್ವಾನ್, ಅಥ್ಲೆಟಿಕ್ಸ್‌ನ 22 ಮಂದಿಗೆ ಮಾಶಾಸನ, ನೆರವು ನೀಡಲಾಗುತ್ತಿದೆ. ಗ್ರಾಮೀಣ ಕ್ರೀಡಾ ಕೇಂದ್ರಗಳಿಗೆ 30 ಶಾಲೆಗಳಿಗೆ ತಲಾ  5 ಸಾವಿರ ರು. ಮೌಲ್ಯದ ಕ್ರೀಡಾಸಲಕರಣೆ ನೀಡಲಾಗುವುದು ಎಂದು ಇಲಾಖೆ ಅಧಿಕಾರಿ ರುದ್ರಪ್ಪ ತಿಳಿಸಿದರು.
ಡಿಡಿಪಿಐ ಎಸ್.ವಿ. ಪದ್ಮನಾಭ್ ಅವರ ಅನುಪಸ್ಥಿತಿಯಲ್ಲಿ ಅಧೀನ ಅಧಿಕಾರಿಗಳು ನೀಡಿದ ಅಸಮರ್ಪಕ ಮಾಹಿತಿಗೆ ಜಿ.ಪಂ ಸಿಇಒ ಝಲ್ಫೀಖಾರ್ ಉಲ್ಲಾ ಕಿಡಿಕಾರಿದರು.
ಈ ಹಿಂದಿನ ಸಭೆಯ ಅನುಪಾಲನಾ ವರದಿ ನೀಡದಿರುವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರತಿ ಸಾರಿ ನಿಮಗೆ ಶಾಲಾ ಮಕ್ಕಳಿಗೆ ಪಾಠ ಹೇಳೋ ರೀತಿಯಲ್ಲಿ ಹೇಳಿದರು ಬೇಜವಾಬ್ದಾರಿ ಹೋಗುತ್ತಿಲ್ಲವೆಂದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಎಫ್‌ಎಂಎಸ್ ವ್ಯವಸ್ಥೆಯಿಂದಾಗಿ ಅನುದಾನಗಳು ನೇರವಾಗಿ ಗ್ರಾಪಂಗೆ ಬಿಡುಗಡೆಯಾಗುತ್ತದೆ. ಎಂಇಎಸ್‌ನಲ್ಲಿ ದಾಖಲಿಸಿದ ತಕ್ಷಣ ಕೆಲಸ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಸಿಇಒ ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಸದಸ್ಯ ಸೋಮಶೇಖರ್, ಗ್ರಾ.ಪಂ ಪಿಡಿಒಗಳನ್ನು ಉತ್ತೇಜಿಸಬೇಕು. ಕೆಲವು ಪಂಚಾಯಿತಿಗಳಲ್ಲಿ ಪಿಡಿಒಗಳೇ ಪ್ರಗತಿ ತೋರುತ್ತಿಲ್ಲವೆಂದು ದೂರಿದರು. ಜಿ.ಪಂ. ಉಪಾಧ್ಯಕ್ಷೆ ರತ್ನಮ್ಮ,  ಸ್ಥಾಯಿ ಸಮಿತಿ ಸದಸ್ಯೆ ಮಂಗಮ್ಮ ಮುನಿಸ್ವಾಮಿ ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.