ಕೋಲಾರ

ಗಡಿ ತಾಲೂಕಲ್ಲಿ 16 ಶಿಕ್ಷಕರ ಕೊರತೆ

Published On :

ಕೋಲಾರ: ಜಿಲ್ಲೆಯ ಗಡಿ ಭಾಗದ ಬಂಗಾರಪೇಟೆ ಮತ್ತು ಮಾಲೂರು ತಾಲೂಕಿನಲ್ಲಿ ಸುಮಾರು 16 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ವಿ. ಪದ್ಮನಾಭ್ ಶಿಕ್ಷಣ ಸ್ಥಾಯಿ ಸಮಿತಿಯ ಸಭೆಯಲ್ಲಿ ನೀಡಿದ ಮಾಹಿತಿ ಜನಪ್ರತಿನಿಧಿಗಳನ್ನು ದಂಗುಬಡಿಸಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸೀಮೋಲ್ ಮೋಹನ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಿಡಿಪಿಐ ಪದ್ಮನಾಭ್ ಮಾತನಾಡಿ, ಬಂಗಾರಪೇಟೆಯಲ್ಲಿ 12 ಮತ್ತು ಮಾಲೂರು ತಾಲೂಕಿನ 4 ಶಾಲೆಗಳಲ್ಲಿ ಶಿಕ್ಷಕರೆ ಇಲ್ಲ ಎಂದಾಗ ಸಮಿತಿಯ ಸದಸ್ಯರು ಅಚ್ಚರಿ ವ್ಯಕ್ತಪಡಿಸಿ, ಶಿಕ್ಷಕರ ಕೊರತೆ ನಿವಾರಿಸಲು ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಮಾಲೂರಿನ ದುಡುವನಹಳ್ಳಿ, ತೊಳಕನಹಳ್ಳಿ, ನೆಲತಿಮ್ಮನಹಳ್ಳಿ, ಅರಸರನಹಳ್ಳಿ ಮತ್ತು ಬಂಗಾರಪೇಟೆಯ ಕ್ಯಾಸಂಬಳ್ಳಿಯಲ್ಲಿ ಶಿಕ್ಷಕರು ಇಲ್ಲದಿರುವ ಬಗ್ಗೆ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ ಎಂದರು.
ಪ್ರತಿ ವರ್ಷ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾರು ಸಹ ಇಲ್ಲಿನ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ನಾವು ಸುತ್ತಮುತ್ತಲಿನ ಶಾಲೆಗಳ ಶಿಕ್ಷಕರನ್ನು ನಿಯೋಜನೆ ಮಾಡಿ ವ್ಯವಸ್ಥೆಯನ್ನು ಸರಿದೂಗಿಸುತ್ತಿದ್ದೇವೆಂದು ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೀಮೋಲ್ ಮೋಹನ್ ಮಾತನಾಡಿ, ಗಡಿ ಭಾಗದಲ್ಲಿ ಶಿಕ್ಷಕರ ಇಲ್ಲದಿದ್ದರೆ ಅಲ್ಲಿನ ಮಕ್ಕಳ ಗತಿಯೇನು ಎಂದು ಪ್ರಶ್ನಿಸಿದರು. ಕನಿಷ್ಠ ಗುತ್ತಿಗೆ ಆಧಾರದ ಮೇಲೆಯಾದರೂ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಸಾಕಷ್ಟು ಶಾಲೆಗಳಲ್ಲಿ ಮಕ್ಕಳು ಕಡಿಮೆಯಿದ್ದರೂ ಅಲ್ಲಿ ಶಿಕ್ಷಕರು ಹೆಚ್ಚಾಗಿರುತ್ತಾರೆ. ಹೆಚ್ಚುವರಿ ಶಿಕ್ಷಕರನ್ನು ಶಿಕ್ಷಕರು ಇಲ್ಲದ ಕಡೆ ನಿಯೋಜಿಸಿ ಎಂದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಪದ್ಮನಾಭ್ ಮಾತನಾಡಿ, ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಿದರೆ ಅಲ್ಲಿನ ಕೆಲವು ಗ್ರಾಮಸ್ಥರು, ಎಸ್ಡಿಎಂಸಿ ಸದಸ್ಯರು ಪ್ರತಿಭಟನೆ ಮಾಡುತ್ತಾರೆ ಎಂದು ಸಭೆಗೆ ತಿಳಿಸಿದಾಗ ಅಧಿಕಾರಿಯಾಗಿರುವ ನೀವು ತೊಂದರೆ ಇರುವ ಕಡೆ ಸರಿಪಡಿಸಬೇಕಾದ ಜವಾಬ್ದಾರಿ ತಮ್ಮ ಮೇಲಿದ್ದು ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.