ಕೋಲಾರ

ಶಿಕ್ಷಣ ನೀತಿಯಡಿ ವೃತ್ತಿ ಶಿಕ್ಷಣಕ್ಕೆ ಪ್ರತ್ಯೇಕ ಕ್ರಿಯಾ ಯೋಜನೆ

Published On :

ಕೋಲಾರ: ರಾಷ್ಟ್ರೀಯ ಶಿಕ್ಷಣ ನೀತಿಯಡಿ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿದ್ದು, ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಜಯರಾಮರೆಡ್ಡಿ ತಿಳಿಸಿದರು.
ಇಲ್ಲಿನ ಮೆಥೋಡಿಸ್ ಶಾಲೆಯಲ್ಲಿ ನಡೆದ ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.  ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಲ್ಲಿ ಕೌಶಲ್ಯ ತುಂಬುವ ವೃತ್ತಿ ಶಿಕ್ಷಣ ಪ್ರಮುಖ ಅಂಗವಾಗಿದೆ ಎಂದ ಅವರು ವೃತ್ತಿ ಗೌರವ ಕಾಪಾಡಿಕೊಂಡು ಸಾಗಿ ಎಂದು ಕೋರಿದರು.
ಶಿಸ್ತು ಬೆಳೆಸುವುದು ಶಿಕ್ಷಕರ ಹೊಣೆ: ಮಕ್ಕಳಲ್ಲಿ ಶಿಸ್ತು, ಪರಿಸರ ರಕ್ಷಣೆಯ ಕಾಳಜಿ ಬೆಳೆಸುವ ಹೊಣೆಯೂ ವೃತ್ತಿ ಶಿಕ್ಷಕರ ಮೇಲಿದ್ದು, ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಇಂದು ಪರಿಸರ ನಾಶದಿಂದಾಗುತ್ತಿರುವ ಪರಿಣಾಮಗಳ ಕುರಿತು ಮಕ್ಕಳಿಗೆ ತಿಳಿಸಿ, ಹೆಚ್ಚು ಗಿಡಗಳನ್ನು ಬೆಳೆಸಿ, ಶಾಲಾ ಪರಿಸರ ಯಾವಾಗಲೂ ಸುಂದರವಾಗಿಡಿ ಎಂದು ಸಲಹೆ ನೀಡಿದರು.
85 ಶಾಲೆಗಳಲ್ಲಿ ಮಾತ್ರ ವೃತ್ತಿ ಶಿಕ್ಷಣ: ಜಿಲ್ಲೆಯ 316 ಶಾಲೆಗಳ ಪೈಕಿ ಕೇವಲ ಸುಮಾರು 85 ಶಾಲೆಗಳಲ್ಲಿ ಮಾತ್ರ ವೃತ್ತಿ ಶಿಕ್ಷಣವಿದೆ, ವೃತ್ತಿ ಶಿಕ್ಷಣ ಸಂಘ ಕಳೆದ ಸಾಲಿನಲ್ಲಿ ನಡೆಸಿದ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು ಎಂದ ಅವರು, ಮತ್ತಷ್ಟು ನೈಜತೆಯ ಪರಿಕರಗಳೊಂದಿಗೆ ಪ್ರದರ್ಶನ ಈ ಬಾರಿಯೂ ನಡೆಸಿ ಎಂದರು.
ವಿಷಯ ಪರೀಕ್ಷಕ ಜನಾರ್ದನನಾಯ್ಡು, ಆತ್ಮವಿಶ್ವಾಸದಿಂದ ಕೆಲಸ ಮಾಡಿ ಸಂಘಟಿತರಾಗಿ ಸಮಸ್ಯೆ ಪರಿಹರಿಸಿಕೊಳ್ಳಿ, ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ, ಸದೃಢ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಅಸ್ತಿತ್ವಕ್ಕೆ ಹೋರಾಟ ಅಗತ್ಯ: ವಿಷಯ ಪರೀಕ್ಷಕರಾದ ವೆಂಕಟಸ್ವಾಮಿ, ಮಲ್ಲಿಕಾರ್ಜುನಾಚಾರಿ, ಇಲಾಖೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಶಿಕ್ಷಕರ ಪರಿಶ್ರಮ ಅಗತ್ಯವಾಗಿದ್ದು, ಉತ್ತಮವಾಗಿ ಕೆಲಸ ಮಾಡಿ ಎಂದರು.
ವೃತ್ತಿ ಶಿಕ್ಷಣ ವಿಷಯ ಪರೀಕ್ಷಕ ಶಿವಮಾದಯ್ಯ, ವಿಷಯ ಸೂಚಿಯಂತೆ ಕಾರ್ಯ ನಿರ್ವಹಿಸಿ, ಜಿಲ್ಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮತ್ತಷ್ಟು ಉತ್ತಮ ಸಾಧನೆ ತೋರಲು ಶ್ರಮ ವಹಿಸಬೇಕು ಎಂದರು.
ಆಯವ್ಯಯ ಮಂಡನೆ: ಇದೇ ಸಂದರ್ಭದಲ್ಲಿ ವೃತ್ತಿ  ಶಿಕ್ಷಕರ ಸಂಘದ ಖಜಾಂಚಿ ಸುರೇಂದ್ರನಾಥ್, ಆಯವ್ಯಯ ಮಂಡಿಸಿ, ಪ್ರಸ್ತುತ ಸಾಲಿನಲ್ಲೂ ವಸ್ತು ಪ್ರದರ್ಶನ  ನಡೆಸಲು ಸಹಕಾರ ಕೋರಿದರು.
ವಿಷಯ ಪರೀಕ್ಷಕ ಅಶೋಕ್, ಸಂಘದ ಅಧ್ಯಕ್ಷ ವೆಂಕಟೇಶ್ಬಾಬು, ಕಾರ್ಯದರ್ಶಿ ವೆಂಕಟೇಶಪ್ಪ, ಉಪಾಧ್ಯಕ್ಷ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಪಿ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಭಾಗ್ಯಲಕ್ಷ್ಮಿ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.