ಸುಧಾಕರ್-ಕೃಷ್ಣಾರೆಡ್ಡಿ ಬೆಂಬಲಿಗರ ವಾಗ್ವಾದ: ಲಾಠಿ ಪ್ರಹಾರ
ಕ.ಪ್ರ.ವಾರ್ತೆ ಟಿ ಚಿಂತಾಮಣಿ ಟಿ ಜು.20
ನಾರಾಯಣಹಳ್ಳಿಯಲ್ಲಿ ಕುಡಿಯುವ ನೀರಿನ ಕೊಳವೆಬಾವಿ ಕೊರೆಯಲು ಬಂದಿದ್ದ ಬೋರ್ವೆಲ್ ಲಾರಿ ವಾಹನಕ್ಕೆ ರಾಜಕೀಯ ಪ್ರೇರಣೆಯಿಂದ ಜೆಡಿಎಸ್ ಹಾಗೂ ಮಾಜಿ ಶಾಸಕರ ಬೆಂಬಲಿಗರ 2 ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಗಿಳಿದ ಸಂದರ್ಭ ಅಡ್ಡ ಬಂದ ಮಹಿಳೆಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಕುರಿಗಳಂತೆ ಎಳೆದುಕೊಂಡು ಹೋಗಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಕೈವಾರ ಹೋಬಳಿ ನಾರಾಯಣಹಳ್ಳಿಯಲ್ಲಿ ಬರ ಪರಿಹಾರ ಯೋಜನೆಯಡಿ ಕುಡಿಯುವ ನೀರಿನ ಕೊಳವೆಬಾವಿ ಕೊರೆಯಲು ಸ.ನಂ. 4ರಲ್ಲಿ ಅನುಷ್ಠಾನಗೊಳಿಸುವ ವಿಷಯದಲ್ಲಿ ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಬುಧವಾರ ಸ್ಥಳ ಪರಿಶೀಲಿಸಿ ಕೊಳೆವೆಬಾವಿ ಕೊರೆಯಿಸಲು ಅಧಿಕಾರಿಗಳ ಜೊತೆ ಚರ್ಚಿಸಿದ್ದರು. ಗುರುವಾರ ಬೆಳಿಗ್ಗೆ ಅಧಿಕಾರಿಗಳು ಬೋರ್ವೆಲ್ ಕೊರೆಯಲು ಮುಂದಾಗಿದ್ದರು.
ಗ್ರಾಮದಲ್ಲಿ ಸುಮಾರು 120 ಕುಟುಂಬಗಳು ಬೋವಿ ಸಮುದಾಯಕ್ಕೆ ಸೇರಿವೆ. ಇಲ್ಲಿನ ಒಂದು ಗುಂಪು ಜೆಡಿಎಸ್ ಹಾಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬಣದಲ್ಲಿ ಗುರುತಿಸಿಕೊಂಡಿದೆ. ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾದರು.
8 ಮಹಿಳೆಯರ ಬಂಧನ-ಲಾಠಿ ಚಾರ್ಜ್: ಬೋರ್ ಕೊರೆಯಲು ಗುರುತಿಸಿದ್ದ ಸ್ಥಳಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಗುಂಪು ಬೋರ್ ಕೊರೆಯಲು ಅಡ್ಡಿಪಡಿಸಿತು.
ಬೇರೆ ಸ್ಥಳದಲ್ಲಿ ಬೋರ್ ಕೊರೆಯಲು ಒತ್ತಡ ತಂದು ವಾಗ್ವಾದಕ್ಕಿಳಿದರು. ಇದನ್ನು ವಿರೋಧಿಸಿದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬೆಂಬಲಿಗರು ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲೆ ಬೋರ್ವೆಲ್ ಕೊರೆಸಲು ಪಟ್ಟು ಹಿಡಿದರು.
2 ಗುಂಪುಗಳು ಮಾತಿನ ಚಕಮುಖಿ ನಡೆದು ಕೈ ಕೈ ಮಿಲಾಯಿಸಲು ಯತ್ನಿಸಿದಾಗ ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಆತ್ಮಹತ್ಯೆಗೆ ಯತ್ನ: ಮಹಿಳೆಯರು ಸಹ ಅದೇ ಒತ್ತಾಯ ತಂದ ಪರಿಣಾಮ ಪೊಲೀಸರು ಕೆಲವರಿಗೆ ಲಾಠಿ ರುಚಿ ತೋರಿಸಿದರು. ಅಮರಾವತಿ, ಭಾಗ್ಯಮ್ಮ, ಮಂಜುಳಾ, ರತ್ನಮ್ಮ, ಯಶೋಧಮ್ಮ, ಮುನಿವೆಂಕಟಮ್ಮ, ರತ್ನಮ್ಮ, ಆಂಜಮ್ಮ ಪೊಲೀಸರಿಂದ ಬಂಧನಕ್ಕೊಳಗಾದರು. ಅವರನ್ನು ಕರೆದೊಯ್ಯಲು ಮುಂದಾದಾಗ ಪೊಲೀಸ್ ವ್ಯಾನನನ್ನು ಬೆನ್ನಟ್ಟಿದ ಉದ್ರಿಕರ ಗುಂಪು ಕಲ್ಲುಗಳನ್ನು ರಸ್ತೆಗೆ ಅಡ್ಡವಾಗಿಟ್ಟು ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಯುವತಿಯೊಬ್ಬಳು ತನ್ನ ಮೈ ಮೇಲೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದಾಗ ಪೊಲೀಸರು ಬಂಧಿಸಿದರು.
ಪೊಲೀಸರಿಗೆ ದೂರು: ಮಾಜಿ ಶಾಸಕ ಸುಧಾಕರ್ ಬೆಂಬಲಿಗರು ಅಮಾಯಕ ಮಹಿಳೆಯರನ್ನು ಬಂಧಿಸಿರುವ ಬಗ್ಗೆ ಕೆಂಗಣ್ಣಿಗೆ ಗುರಿಯಾಗಿ ಹಾಗೂ ಘಟನೆಗೆ ಕಾರಣರಾದ ಜೆಡಿಎಸ್ ಬೆಂಬಲಿತ ಗಂಗಾಧರ್, ಶಿವಪ್ಪ,ದೊಡ್ಡ ವೆಂಕಟಸ್ವಾಮಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳನ್ನು ನಾಶಪಡಿಸಿ, ಬೆಲೆ ಬಾಳುವ ವಸ್ತುಗಳನ್ನು ನಗದು ಹಣ ದೋಚಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉದ್ರಿಕ್ತ ವಾತಾವರಣ: ನಾರಾಯಣಹಳ್ಳಿಯಲ್ಲಿ ಜೆಡಿಎಸ್ನ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಸುಧಾಕರ್ ಬೆಂಬಲಿತ 2 ಗುಂಪುಗಳು ಜಮಾವಣೆಗೊಂಡು ಗ್ರಾಮದಲ್ಲಿ ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾದಾಗ ಮತ್ತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಇದರಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು. ಪ್ರಭಾರ ಡಿವೈಎಸ್ಪಿ ದೇವಯ್ಯ ಸ್ಥಳಕ್ಕೆ ಆಗಮಿಸಿ ಚಿಂತಾಮಣಿ ನಗರ ಮತ್ತು ಗ್ರಾಮಾಂತರ, ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ, ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಕಡೆಗಳಿಂದ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಗ್ರಾಮದಲ್ಲಿ ಶಾಂತಿ ಕಾಪಾಡಲು ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

