ನಾಳೆಯಿಂದ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ
ಕೋಲಾರ: ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಿಂದ ಮಧ್ಯಾಹ್ನದ ಬಿಸಿಯೂಟ ಪ್ರಯೋಜನ ಪಡೆಯುತ್ತಿರುವ ರಾಜ್ಯದ ಶಾಲಾ ಮಕ್ಕಳಿಗೆ ಆ.1ರಿಂದ ವಾರದಲ್ಲಿ ಮೂರು ದಿನ ಕೆನೆ ಭರಿತ ಹಾಗೂ ಆರೋಗ್ಯದಾಯಕ ಹಾಲನ್ನು ಸೇವಿಸುವ ಅವಕಾಶ ಲಭ್ಯವಾಗಲಿದೆ.
ಅಂಗನವಾಡಿ ಮತ್ತು 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಕಂಡು ಬರುವ ರಕ್ತಹೀನತೆ, ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಮಧ್ಯಾಹ್ನದ ಬಿಸಿಯೂಟದ ಮಾದರಿಯಲ್ಲಿ ಬಿಸಿ ಹಾಲನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 'ಕ್ಷೀರ ದಾಸೋಹ' ಯೋಜನೆಯನ್ನು ಆ.1ರಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಗೆ ಸೇರಿದ ಹೊಸಕೋಟೆಯ ಸರ್ಕಾರಿ ಶಾಲೆಯಲ್ಲಿ ಉದ್ಘಾಟಿಸಲಿದ್ದಾರೆ. ಅದೇ ದಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು ಯೋಜನೆಗೆ ಚಾಲನೆ ನೀಡಲಿದ್ದಾರೆ.
ಈ ಯೋಜನೆ ಅನುಷ್ಠಾನಕ್ಕೆ ಪ್ರತಿನಿತ್ಯ 8ರಿಂದ 9 ಲಕ್ಷ ಲೀಟರ್ ಹಾಲು ಬೇಕು. ಕೆಎಂಎಫ್ನ ಘಟಕಗಳಿಂದ ಹಾಲು ಸಂಗ್ರಹಿಸಿ ಅದನ್ನು ಕೆನೆ ಭರಿತ ಹಾಲಿನ ಪುಡಿಯಾಗಿಸಿ ಸುಮಾರು 99 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ವಿಶೇಷ ಪ್ಲಾಸ್ಟಿಕ್ ಪ್ಯಾಕ್ ಮೂಲಕ ಸರಬರಾಜು ಮಾಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ 18 ಗ್ರಾಂನಂತೆ ಪುಡಿಯನ್ನು ಸಂಬಂಧಪಟ್ಟ ಅಂಗನವಾಡಿ ಹಾಗೂ ಶಾಲೆಗಳ ಸಿಬ್ಬಂದಿ ಸ್ವಚ್ಛ ಬಿಸಿ ನೀರಿನಲ್ಲಿ ಹಾಕಿ 150 ಮಿ.ಲೀ. ಹಾಲು ತಯಾರಿಸಿ ನೀಡುತ್ತಾರೆ. ಈ ಕುರಿತು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಮತ್ತು ಸರ್ಕಾರದ ಆಧೀನ ಕಾರ್ಯದರ್ಶಿ ಐ.ಎಫ್.ಮಾಗಿ ಅವರು ಜು.26ರಂದು ಸುತ್ತೂಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 52 ಸಾವಿರಕ್ಕೂ ಅಧಿಕ ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ 60 ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ 60 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳ 39 ಲಕ್ಷ ಮಕ್ಕಳು ಸೇರಿದಂತೆ 99 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಹಾಲು ವಿತರಣೆ ಮಾಡುವುದಕ್ಕೆ ಕೆಎಂಎಫ್, ಶಿಕ್ಷಣ ಇಲಾಖೆ, ಪಶು ಸಂಗೋಪನೆ ಹಾಗೂ ಜಿಪಂಗಳು ಸಿದ್ಧತೆ ನಡೆಸಿವೆ.
ವಾರದಲ್ಲಿ ಮೂರು ದಿನ: ಶಾಲಾ ಮಕ್ಕಳಿಗೆ ದಿನ ಬಿಟ್ಟು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಉರ್ದು ಶಾಲೆಗಳಿಗೆ ಶನಿವಾರದಂದು ಹಾಲು ವಿತರಿಸಲಾಗುತ್ತದೆ. ಪ್ರತಿ ದಿನ 150 ಟನ್ ಕೆನೆ ಭರಿತ ಹಾಲಿನ ಪುಡಿ ಬೇಕಾಗಿರುವುದರಿಂದ ಕೆಎಂಎಫ್ ತನ್ನ ಅಧೀನದಲ್ಲಿರುವ ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ಸಹಕಾರ ಪಡೆಯುತ್ತಿದೆ. ಅಲ್ಲದೆ, ಶಾಲೆಗಳಲ್ಲಿ ಹಾಲಿನ ಪುಡಿ ಶೇಖರಣೆ, ಹಾಲು ತಯಾರಿಕೆ ತರಬೇತಿ ನೀಡುತ್ತಿದೆ.
ಕೆನೆ ಭರಿತ ಹಾಲಿನ ಪುಡಿಯನ್ನು ಹಾಲನ್ನಾಗಿ ಪರಿವರ್ತಿಸಿ ಸಕ್ಕರೆ ಬೆರೆಸಿ, ಕಾಯಿಸಿ ಮಕ್ಕಳಿಗೆ ನೀಡಲು ತಗಲುವ ವರಿವರ್ತನಾ ವೆಚ್ಚ ಪ್ರತಿ ಮಗುವಿಗೆ ಪ್ರತಿ ದಿನಕ್ಕೆ 0.59 ಪೈಸೆ. ಒಂದು ತಿಂಗಳಿಗೆ ಬೇಕಾಗುವ ಅನುದಾನವನ್ನು 2 ತಿಂಗಳ ಮುಂಗಡವಾಗಿ ಜಿಪಂ, ತಾಪಂನಿಂದ ಮಧ್ಯಾಹ್ನದ ಬಿಸಿಯೂಟದ ಪರಿವರ್ತನಾ ವೆಚ್ಚದ ಜತೆಗೆ ಶಾಲೆಯ ಅಕ್ಷರ ದಾಸೋಹ ಖಾತೆಗೆ ಜಮಾ ಮಾಡಲಾಗುತ್ತದೆ. ಜಿ.ಪಂ ಸಿಇಒಗಳಿಗೆ ಯೋಜನೆ ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದೆ. ಹಾಲನ್ನು ಕಾಯಿಸಲು ಬೇಕಾಗುವ ಹೆಚ್ಚುವರಿ ಅನಿಲ ಸಿಲಿಂಡರ್ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಹಾಲು ವಿತರಣೆಯ ಉಸ್ತುವಾರಿ ನೋಡಿಕೊಳ್ಳಲು ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತಿದೆ. ಕಾಯಿಸಿದ ಹಾಲನ್ನು ಶಾಲೆ ಪ್ರಾರಂಭದ ಪ್ರಾರ್ಥನೆಯ ನಂತರ ಇಲ್ಲವೇ ತರಗತಿ ಪ್ರಾರಂಭವಾಗುವ ಮುನ್ನ 15 ನಿಮಿಷಗಳಲ್ಲಿ ಎಲ್ಲ ಮಕ್ಕಳಿಗೆ ನೀಡುವಂತೆ ಸೂಚಿಸಲಾಗಿದೆ. 100 ಗ್ರಾಂ ಕೆನೆ ಭರಿತ ಹಾಲಿನ ಪುಡಿಯಿಂದ 820 ಮಿ.ಲೀ. ಕೆನೆ ಭರಿತ ಹಾಲು ತಯಾರಿಸಬಹುದು. ಹಾಲು ವಿತರಣೆ ಯೋಜನೆಯಿಂದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಹೆಚ್ಚಿನ ಹೊರೆ ಆಗುವುದೆಂಬ ಕಾರಣದಿಂದ ಸರ್ಕಾರ ಸಿಬ್ಬಂದಿಗೆ 100 ಹೆಚ್ಚುವರಿ ಗೌವರ ಸಂಭಾವನೆ ನೀಡುವುದಾಗಿ ಘೋಷಣೆ ಮಾಡಿದೆ.
ಕೆಎಂಎಫ್ ಪ್ರತಿ ನಿತ್ಯ 8ರಿಂದ 9 ಲಕ್ಷ ಹಾಲನ್ನು ಕೆನೆ ಭರಿತ ಹಾಲಿನ ಪುಡಿಯಾಗಿ ತಯಾರಿಸಿ ಸುಮಾರು 150 ಟನ್ ಹಾಲಿನ ಪುಡಿ ಸರಬರಾಜು ಮಾಡಲು ಸಿದ್ಧತೆ ನಡೆಸಿದೆ. ಶಿಕ್ಷಣ ಇಲಾಖೆ, ಪಶು ಸಂಗೋಪನೆ ಇಲಾಖೆ ಹಾಗೂ ಜಿಪಂಗಳ ಸಹಯೋಗದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ.
- ಗೋಪಾಲ್, ಕೆಎಂಎಫ್ ಅಧಿಕಾರಿ
ಜಿಲ್ಲೆಯಲ್ಲೂ ಹಾಲು ಸವಿಯುವ ಯೋಗ
ಕೋಲಾರ: ಅನ್ನಭಾಗ್ಯ ನಂತರ ರಾಜ್ಯ ಸರ್ಕಾರ ರೂಪಿಸಿರುವ ಮತ್ತೊಂದು ಮಹತ್ವಾಂಕ್ಷಿ ಕ್ಷೀರಭಾಗ್ಯ ಯೋಜನೆ ಆ.1ರಿಂದ ಜಾರಿಗೆ ಬರಲಿದ್ದು ಇದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 4,45,836 ಅಂಗನವಾಡಿ ಮತ್ತು ಸರ್ಕಾರಿ ಹಾಗೂ ಅನುದಾನಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳುತ್ತಿರುವ ಅಂಗನವಾಡಿ ಮತ್ತು 1ರಿಂದ 10ನೇ ತರಗತಿವರೆಗಿನ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಕೆನೆಭರಿತ ಹಾಲನ್ನು ನೀಡಲು ನಿರ್ಧರಿಸಿದ್ದು ಆ.1ರಂದು ಗುರುವಾರ ಸದರಿ ಯೋಜನೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬರಲಿದೆ.
ಶಾಲೆಗಳಿಗೆ ಜವಾಬ್ದಾರಿ: ಎರಡೂ ಜಿಲ್ಲೆಗಳ ಸುಮಾರು 1.74 ಲಕ್ಷ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಾಗೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 2,71,836 ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುವುದು. ಒಂದು ವಾರದಲ್ಲಿ ಮೂರು ದಿನದಂತೆ ತಿಂಗಳಿಗೆ 12 ರಿಂದ 13 ದಿನ ಹಾಲು ವಿತರಣೆ ಮಾಡಲಾಗುವುದು.
ಶಾಲೆಗಳಿಗೆ ಜವಾಬ್ದಾರಿ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಕೆನೆಭರಿತ ಹಾಲಿನ ಪುಡಿಯನ್ನು ಯೋಜನೆಗೆ ಅರ್ಹವಾಗಿರುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಶಾಲೆಗಳಿಗೆ ತಲುಪಿಸಲಾಗುವುದು. ಅದನ್ನು ಹಾಲಾಗಿ ಪರಿವರ್ತನೆ ಮಾಡಿ ಮಕ್ಕಳಿಗೆ ವಿತರಣೆ ಮಾಡುವುದು ಶಾಲೆಗಳ ಜವಾಬ್ದಾರಿಯಾಗಿದೆ.
ಯೋಜನೆ ಜಾರಿಗೆ ಬರುವುದರಿಂದ ಪ್ರತಿ ತಿಂಗಳು 32 ಟನ್ ಹಾಲಿನ ಪುಡಿ ಅಂಗನವಾಡಿ ಕೇಂದ್ರಗಳಿಗೆ ಹಾಗೂ 63 ಟನ್ ಹಾಲಿನ ಪುಡಿ ಶಾಲೆಗಳಿಗೆ ಬೇಕಾಗುವುದರಿಂದ ಕೋಚಿಮುಲ್ ಆಡಳಿತ ಮಂಡಳಿಯು ಕೆಎಂಎಫ್ ಸೂಚನೆ ಮೇರೆಗೆ ಸಿದ್ಧತೆ ನಡೆಸುತ್ತಿದೆ ಎಂದು ಕೋಚಿಮುಲ್ ಅಂಡ್ ಡಿ ವಿಭಾಗದ ಅಧಿಕಾರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ತಾಲೂಕುವಾರು ಮಾಹಿತಿ
ತಾಲೂಕು ಶಾಲೆ ಮಕ್ಕಳು
ಕೋಲಾರ 427 33,535
ಮಾಲೂರು 344 22,797
ಬಂಗಾರಪೇಟೆ 495 36,801
ಮುಳಬಾಗಿಲು 427 31,152
ಶ್ರೀನಿವಾಸಪುರ 367 21,746
ಚಿಕ್ಕಬಳ್ಳಾಪುರ 268 20,273
ಚಿಂತಾಮಣಿ 386 27,420
ಶಿಡ್ಲಘಟ್ಟ 284 20,738
ಗೌರಿಬಿದನೂರು 343 30,746
ಬಾಗೇಪಲ್ಲಿ 319 19,362
ಗುಡಿಬಂಡೆ 109 7,266
ಒಟ್ಟು 3769 2,71,836
-ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

