'ಸೇವಾ ಮನೋಭಾವದಿಂದ ಕೀರ್ತಿ'
ಚಿಕ್ಕಬಳ್ಳಾಪುರ: ಪ್ರತಿಯೊಬ್ಬರು ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಬೇಕು. ಆಗ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಸಿ.ವಿ.ವಿ. ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 17ನೇ ದತ್ತಿ ದಿನಾಚರಣೆ ಮತ್ತು ಮಾಜಿ ಶಾಸಕ, ದಿವಂಗತ ಸಿ. ವಿ. ವೆಂಕಟರಾಯಪ್ಪನವರ ಜನ್ಮ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ದತ್ತಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಕ್ಷೇತ್ರವು ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿರುವ ಕ್ಷೇತ್ರವಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಾದಾಗ ನಮ್ಮ ಪ್ರತಿಭೆಗಳೂ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗುತ್ತವೆಯೆಂದರು.
ಸಮಾರಂಭದಲ್ಲಿ ದತ್ತಿ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗದವರಿಗೆ ಬಹುಮಾನ ವಿತರಿಸಲಾಯಿತು. ಸಿ.ವಿ.ವೆಂಕಟರಾಯಪ್ಪನವರ ಸಮಾಧಿಯ ಬಳಿ ಭಜನೆ, ಪೂಜಾ ಕಾರ್ಯಗಳು ನಡೆದವು. ದತ್ತಿಗಳ ಅಧ್ಯಕ್ಷರು ಮತ್ತು ಸದಸ್ಯರಿಗೆ ಪೂರ್ಣಕುಂಭದ ಸ್ವಾಗತವನ್ನು ಕೋರಿ ಮೆರವಣಿಗೆಯನ್ನು ನಡೆಸಲಾಯಿತು.
ಆತ್ಮೀಯ ಸನ್ಮಾನ: ಇದೇ ಸಂದರ್ಭದಲ್ಲಿ ದಿವಂಗತ ಸಿ. ವಿ. ವೆಂಕಟರಾಯಪ್ಪನವರ ಸಹವರ್ತಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶ್ರೀರಾಮಪುರದ ವೆಂಕಟರಂಗಾಚಾರ್, ಕಂದವಾರದ ಬಿ. ವಿ. ತಿಮ್ಮಯ್ಯ, ಚಿಕ್ಕಬಳ್ಳಾಪುರದ ಸೈಯದ್ ಅಕ್ಬರ್ಸಾಬ್, ಹಾಜಿ ಮಕ್ಬೂಲ್ಸಾಬ್, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಸೂಪರಿಂಟೆಂಡೆಂಟ್ ಜಿ. ಎನ್. ಗೋವಿಂದಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರಾದ ದೇವಿಕುಮಾರಿ, ದತ್ತಿಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ಸದಸ್ಯರಾದ ಗೀತಾ ಕೆ. ಮೂರ್ತಿ, ನಿರ್ಮಲಾ ಪ್ರಭು, ಲೀಲಾ ದೇವರಾಜ್, ಸೈಯದ್ ಸಾಲಾರ್, ಎ. ಕೊಂಡಪ್ಪ, ಬಿ. ಮುನಿಯಪ್ಪ, ವಿ. ಅಶ್ವಿನಿ, ಆಡಳಿತಾಧಿಕಾರಿ ಡಾ ಸಾಯಿಪ್ರಭು ಮುಂತಾದವರು ಉಪಸ್ಥಿತರಿಛದ್ದರು.
ಶಾಲಾ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿದವು. ಈ ಸಂದರ್ಭದಲ್ಲಿ ಸೋ. ಸು. ನಾಗೇಂದ್ರನಾಥ್ ಅವರು ರಚಿಸಿರುವ ಶಿಕ್ಷಣ ಭೀಷ್ಮ ಸಿ.ವಿ.ವಿ. ಪುಸ್ತಕ ಬಿಡುಗಡೆ ಮಾಡಲಾಯಿತು. ದತ್ತಿ ದಿನಾಚರಣೆ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.
ಭಾರತ ನಿರ್ಮಾಣ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ
ಚಿಕ್ಕಬಳ್ಳಾಪುರ: ಬೆಂಗಳೂರಿನ ಕ್ಷೇತ್ರ ಪ್ರದರ್ಶನ ಕಾರ್ಯಾಲಯ (ಡಿ.ಎ.ವಿ.ಪಿ.) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಭಾರತ ನಿರ್ಮಾಣ ಛಾಯಾಚಿತ್ರ ಪ್ರದರ್ಶನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್ ಪ್ರಸಾದ್ ಬುಧವಾರ ಚಾಲನೆ ನೀಡಿದರು.
ನಗರದ ನಂದಿ ರಂಗಮಂದಿರದ ಆವರಣದಲ್ಲಿರುವ ಡಾ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ, ನಂತರ ಮಹತ್ವ ವಿಚಾರಗಳನ್ನು ತಿಳಿಸುವ ನಾನಾ ಚಿತ್ರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಿಎವಿಪಿ ಕ್ಷೇತ್ರ ಪ್ರದರ್ಶನಾಧಿಕಾರಿ ಬಿ.ಜಿ.ಪಾಟೀಲ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ ಉಪಸ್ಥಿತರಿದ್ದರು. ಮಕ್ಕಳ ಶಿಕ್ಷಣ ಶಿಕ್ಷಣ ಹಕ್ಕು ಕಾಯ್ದೆ, ಸರ್ವಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ, ಸಾಕ್ಷರ, ಭಾರತ-ಮಹಿಳಾ ಸಾಕ್ಷರತೆ, ಪ್ರೌಢಶಿಕ್ಷಣ ಬಲವರ್ಧನೆ, ಗ್ರಾಮೀಣ ವಸತಿ, ರಸ್ತೆಗಳು, ನೀರು ಪೂರೈಕೆ, ಕುರಿತ ಛಾಯಾಚಿತ್ರಗಳು ನೋಡುಗರ ಗಮನ ಸೆಳೆದವು. ಪ್ರದರ್ಶನವು ಜು.31 ರಿಂದ ಆಗಸ್ಟ್ 4 ರವರೆಗೆ ನಡೆಯಲಿದ್ದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೂ ಚಿತ್ರಪ್ರದರ್ಶನವನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

