ಕೋಲಾರ

ಕಾಡಾನೆ ದಾಳಿ: 3 ವರ್ಷದಲ್ಲಿ 8 ಮಂದಿ ಬಲಿ

Published On :

ಕ.ಪ್ರ.ವಾರ್ತೆ   ಕೋಲಾರ   ಜೂ. 23
ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಬಂಗಾರಪೇಟೆ ಮತ್ತು ಮಾಲೂರು ತಾಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಂಡು ಬೆಳೆ ಹಾನಿಯ ಜತೆಗೆ 8ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವುದರಿಂದ ಜನರು ತತ್ತರಿಸಿದ್ದಾರೆ.
ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ಬನ್ನೇರುಘಟ್ಟ ಅರಣ್ಯದಿಂದ ಕಾಡಾನೆಗಳು ನೀರು, ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ವಲಸೆ ಬರುತ್ತಿರುವುದರಿಂದ ಗ್ರಾಮೀಣ ಪ್ರದೇಶದ ರೈತರ ನೆಮ್ಮದಿಗೆ ಭಂಗ ಉಂಟಾಗಿದೆ.
ಅರಣ್ಯ ಇಲಾಖೆಯವರು ಮೈಸೂರು, ಬೆಂಗಳೂರಿನ ಬನ್ನೇರುಘಟ್ಟದಿಂದ ಕಾಡಾನೆಗಳನ್ನು ಓಡಿಸಲು ನಿಪುಣರಾಗಿರುವ ಸಿಬ್ಬಂದಿಯನ್ನು ಕರೆಸಿ ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಮೂಲಕ ಆನೆಗಳನ್ನು ಜಿಲ್ಲೆಯ ಗಡಿಯಿಂದ ಓಡಿಸಲು ನಡೆಸುತ್ತಿರುವ ಪ್ರಯತ್ನ ಸಾರ್ಥಕವಾಗದಂತಾಗಿದೆ.
ಸಾವಿನ ಸರಣಿ: ಮಾಲೂರು ತಾಲೂಕಿನಲ್ಲಿ ಶನಿವಾರ ಆನೆಗಳ ದಾಳಿಯಿಂದ ಸತ್ತ ಮೂವರು ಸೇರಿದಂತೆ ಈವರೆಗೆ ನಾಲ್ವರು ಬಲಿಯಾಗಿದ್ದಾರೆ, ಜತೆಗೆ ತಮಿಳುನಾಡಿನ ಗಡಿ ಭಾಗದಲ್ಲೂ ಒಂದಿಬ್ಬರು ಸತ್ತಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲೂ ನಾಲ್ಕರಿಂದ ಐದು ಮಂದಿ ಸತ್ತಿದ್ದು, ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗಿದೆ.
ಕೆಲವರು ವಾಸಿಯಾಗದ ಮಾರಕ ಗಾಯಗಳಿಂದ ಹಾಸಿಗೆ ಹಿಡಿದಿದ್ದರೆ, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಅರಣ್ಯಗಳ ಸಮೀಪದ ಹಳ್ಳಿಯ ಜನತೆ ಕಾಡಾನೆಗಳಿಂದ ಮುಕ್ತಿ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆಗಳು ಅರಣ್ಯ ಬಿಟ್ಟು ಜನವಸತಿ ಪ್ರದೇಶ ಹಾಗೂ ಜಮೀನುಗಳಿಗೆ ಪ್ರವೇಶ ಮಾಡುತ್ತಿರುವುದಕ್ಕೆ ಕಾರಣಗಳನ್ನು ಹುಡುಕಿ ಜನತೆಯ ಪ್ರಾಣ ಹಾಗೂ ಬೆಳೆ ಸಂರಕ್ಷಣೆ ಮಾಡುವುದಕ್ಕೆ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಸರ್ಕಾರಗಳು ಜಂಟಿಯಾಗಿ ಕಾರ್ಯಕ್ರಮ ರೂಪಿಸುವುದರ ಜತೆಗೆ ವನ್ಯ ಜೀವಿಗಳಾದ ಕಾಡಾನೆಗಳು ಆಕ್ರೋಶ ಭರಿತ ಜನತೆಯಿಂದ ಸಾಯದ ರೀತಿಯಲ್ಲಿ ಹಾಗೂ ವಿದ್ಯುತ್ ಸ್ಪರ್ಶ,ಬಂದೂಕಿನೇಟಿಗೆ ಬಲಿಯಾಗುವುದನ್ನು ತಪ್ಪಿಸಲು ಮುಂದಾಗದಿದ್ದರೆ ಹೆಚ್ಚಿನ ನಷ್ಟ ಸಂಭವಿಸುವ ಸಾಧ್ಯತೆಗಳಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.