ಜಿಲ್ಲೆಯ ಅಂತರ್ಜಲ ಸಮಸ್ಯೆ ನಿವಾರಿಸಿ
ಕ.ಪ್ರ.ವಾರ್ತೆ ಕೋಲಾರ ಜೂ. 24
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಬೆಂಗಳೂರಿನಲ್ಲಿ ಕರೆದಿದ್ದ ಬಜೆಟ್ಪೂರ್ವ ಸಭೆಯಲ್ಲಿ ಭಾಗವಹಿಸಿದ್ದ ರೈತ ಸಂಘದ ಮುಖಂಡರು ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಕುಸಿತದಿಂದ ಜನ ಮತ್ತು ಜಾನುವಾರುಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿನ ಅಂತರ್ಜಲದಲ್ಲಿ 2.50 ಮಿಲಿಗ್ರಾಂಗಿಂತ ಮೇಲ್ಪಟ್ಟು ಫ್ಲೋರೈಡ್ ಅಂಶವು ಕಂಡುಬಂದಿದೆ. ಇದರಿಂದಾಗಿ ಅನೇಕ ಕಾಯಿಲೆಗಳು ಕಂಡುಬರುತ್ತಿವೆ. ಪ್ರತಿಬಾರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಮನವಿ ಸ್ವೀಕರಿಸಿ ಅದನ್ನು ಸರ್ಕಾರದ ಗಮನಕ್ಕೆ ತಂದಿರುತ್ತಾರೆ ಹೊರೆತು ಸಮಸ್ಯೆ ನಿವಾರಣೆಯಾಗಿಲ್ಲವೆಂದು ದೂರಿದರು.
ಹಿಂದಿನಿಂದಲೂ ಸರ್ಕಾರಗಳು ಬರೀ ಭರವಸೆಯನ್ನು ನೀಡುತ್ತಾ ಬಂದಿದ್ದು, ಇದುವರೆವಿಗೂ ಯಾವುದೇ ಯೋಜನೆಗಳು ಜಾರಿಯಾಗಿರುವುದಿಲ್ಲ. ಕೂಡಲೇ ನೀರಾವರಿ ತಜ್ಞ ಡಾ. ಪರಮಶಿವಯ್ಯನವರ ವರದಿಯನ್ನು ಅನುಷ್ಠಾನಗೊಳಿಸಿ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸಬೇಕು ಮತ್ತು ಜಲಸಂವರ್ಧನೆ ಯೋಜನೆಯಲ್ಲಿ ಕೆರೆಗಳನ್ನು ಪುನಶ್ಚೇತನಗೊಳಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಬೇಕಾಗಿರುವ ಅಧಿಕಾರಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಇದರಿಂದ ಪ್ರತಿದಿನವು ನೂರಾರು ಲೋಡ್ ಮರಳು ಲೂಟಿಯಾಗುತ್ತಿದೆ. ಈ ದಂಧೆಯನ್ನು ತಡೆಯಲು ಇದುವರೆವಿಗೂ ಯಾವುದೇ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂದು ಆರೋಪಿಸಿದರು.
ಜಿಲ್ಲೆಯಲ್ಲಿರುವ ರಸಗೊಬ್ಬರ ಅಂಗಡಿ ಮಾಲೀಕರು ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುವುದಲ್ಲದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ರಸಗೊಬ್ಬರಕ್ಕೆ ಬಿಲ್ ನೀಡುವುದಿಲ್ಲ, ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ಗಳು ಕೃಷಿ ಸಾಲ ಹೆಸರಿನಲ್ಲಿ ಸಾಲವನ್ನು ನೀಡಿದ್ದು, ಈಗ ಅವರನ್ನು ಸಾಲ ವಸೂಲಿ ಮಾಡುವ ನೆಪದಲ್ಲಿ ರೈತರಿಗೆ ಕಿರುಕುಳ ನೀಡುತ್ತಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಇಲ್ಲವೇ ಊರು ಬಿಡುವಂತೆ ಮಾಡುತ್ತಿದ್ದಾರೆ.
ಸಾಲಕ್ಕೆ ಶೇ.3ರಷ್ಟು ಬಡ್ಡಿ ಅಂತ ಹೇಳುವ ಅಧಿಕಾರಿಗಳು ಕಾರಣಾಂತರಗಳಿಂದ ಸಾಲದ ಒಂದು ಕಂತನ್ನು ಪಾವತಿಸದೇ ಹೋದರೆ ಅದಕ್ಕೆ ಶೇ.14ರಷ್ಟು ಬಡ್ಡಿಯನ್ನು ಸೇರಿಸಿ ರೈತರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ತಿಳಿಸಿದರು.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ನೀಡಿರುವ ರೈತರ ಮಕ್ಕಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಹಾಗೂ ಸೂಕ್ತ ಉದ್ಯೋಗ ಭದ್ರತೆಯನ್ನು ನೀಡಬೇಕು. ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಬೇಕು ಹಾಗೂ ಈ ಬಾರಿಯ ಬಜೆಟ್ನಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಹಸಿರುಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ, ಮುಖಂಡರಾದ ವೆಂಕಟೇಶಗೌಡ, ಬಿಸನಹಳ್ಳಿ ಬೈಚೇಗೌಡ, ಮಾಲೂರು ಅಶ್ವತ್ಥರೆಡ್ಡಿ, ಹೊಳಲಿಹೊಸೂರು ಚಂದ್ರಪ್ಪ, ಚನ್ನಕೇಶವಗೌಡ, ರಾಮೇಗೌಡ, ಚನ್ನಕೇಶವಗೌಡ, ಬೆಡಿಶೆಟ್ಟಿಹಳ್ಳಿ ರಮೇಶ್, ವೀರಭದ್ರಸ್ವಾಮಿ, ಶಿವರಾಜ್, ಕಾನೂನು ಸಲಹೆಗಾರ ಗೋವಿಂದಪ್ಪ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಬಯ್ಯಾರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಹ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯಕ್ಕೆ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

