ಕೋಲಾರ

ಲಂಚ ಖಂಡಿಸಿ ಕಚೇರಿ ಕಿಟಕಿ, ಗಾಜು ಪುಡಿ

Published On :

ಚಿಕ್ಕಬಳ್ಳಾಪುರ: ಕಳೆದ ಒಂದೂವರೆ ತಿಂಗಳಿಂದ ಅಲೆದಾಡುತ್ತಿದ್ದರೂ ಕೆಲಸ ಮಾಡಿಕೊಡದೇ ಲಂಚಕ್ಕಾಗಿ ಪೀಡಿಸುತ್ತಿದ್ದ ಸಿಬ್ಬಂದಿ ವರ್ತನೆಗೆ ಬೇಸತ್ತ ವ್ಯಕ್ತಿಯೊಬ್ಬ ತಾಲೂಕು ಕಚೇರಿ ಕಿಟಕಿ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ಬೆಂಗಳೂರಿನ ಉದ್ಯಮಿ ಜೀವನಂದನಮ್ ಕಾರ್ಖಾನೆಯನ್ನು ಪ್ರಾರಂಭಿಸಲು ತಾಲೂಕಿನ ಹೊನೇಗಲ್ ಬಳಿ ರೈತರಿಂದ ಜಮೀನನ್ನು ಕೊಂಡುಕೊಂಡಿದ್ದರು. ಆ ಜಮೀನುಗಳಿಗೆ ಸಂಬಂಧಪಟ್ಟಂತೆ ದಾಖಲೆಗಳಲ್ಲಿ ಸಿಬ್ಬಂದಿ ಮಾಡಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಡಬೇಕಾಗಿತ್ತು ಎನ್ನಲಾಗಿದೆ. ಆದರೆ, ಇದಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ತಾಲೂಕು ಕಚೇರಿ ಸಿಬ್ಬಂದಿ ಕೆಲಸ ಮಾಡಿಕೊಡದೇ ಸತಾಯಿಸುತ್ತಿದ್ದು ಜೀವನಂದನಮ್‌ರವರ ಆಕ್ರೋಶಕ್ಕೆ ಕಾರಣವಾಗಿತ್ತು.
ತಾಲೂಕು ಕಚೇರಿಗೆ ಸೋಮವಾರ ಆಗಮಿಸಿದ ಜೀವನಂದನಮ್, ತಮ್ಮ ಕೆಲಸ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ಕಚೇರಿ ಆವರಣದಲ್ಲಿ ಧರಣಿ ಕುಳಿತರೂ ಸಿಬ್ಬಂದಿ ಜಗ್ಗದ ಕಾರಣ ಆಕ್ರೋಶಗೊಂಡ ಅವರು, ತಮ್ಮ ಕೈಯಿಂದ ಕಿಟಿಕಿ ಗಾಜುಗಳಿಗೆ ಹೊಡೆದಿದ್ದಾರೆ. ಇದರಿಂದ ಗಾಜು ಪುಡಿಪುಡಿಯಾಗಿದ್ದು ಅವರ ಕೈಯಿಂದ ರಕ್ತ ಬಂದಿದೆ. ಇದರಿಂದ ಗಾಬರಿಗೊಂಡ ಜನರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಈ ನಡುವೆ ಜೀವನಂದನಮ್ ಲಂಚಕ್ಕಾಗಿ ತಮ್ಮನ್ನು ಪೀಡಿಸುತ್ತಿದ್ದು ಕೆಲಸ ಮಾಡಿಕೊಡುತ್ತಿಲ್ಲ ಎಂದು ಒಂದೇ ಸಮನೆ ಆರೋಪಿಸುತ್ತಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾರಣ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕೆಲಸ ಮಾಡಿಕೊಡಲ್ಲ: ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಜನರಿಗೆ ಕೆಲಸ ಮಾಡಿಕೊಡುತ್ತಿಲ್ಲ. ಲಂಚಕ್ಕಾಗಿ ಪೀಡಿಸುತ್ತಿದ್ದಾರೆ. ಎಷ್ಟೇ ಮನವಿ ಮಾಡಿಕೊಂಡರೂ ಅಲೆದಾಡಿಸಿ ಜನರು ಬೇಸರಗೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಜೀವನಂದನಮ್ ಆರೋಪಿಸಿದರು.
ಉದ್ದೇಶಪೂರ್ವಕವಾಗಿ ಸಿಬ್ಬಂದಿ ದಾಖಲೆಗಳಲ್ಲಿ ತಪ್ಪು ತಪ್ಪಾಗಿ ಮಾಹಿತಿ ಬರುವಂತೆ ಮಾಡಿ, ಜನರನ್ನು ಶೋಷಣೆಗೆ ಗುರಿ ಮಾಡುವಂತಹ ಕೆಲಸಕ್ಕೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕೊನೆಗೆ  ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜೀವನಂದನಮ್ ಅವರನ್ನು ಸಮಾಧಾನಪಡಿಸಿದರು. ದಾಖಲೆಗಳನ್ನು ಪರಿಶೀಲಿಸಿ ಕೆಲಸ ಮಾಡಿಕೊಡುವುದಲ್ಲದೇ ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪಿಎಸ್ ಐ ವಸಂತ್ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.