ಕೋಲಾರ

ಜಿಲ್ಲಾ ಕೇಂದ್ರದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಕದಸಂಸ ಆಗ್ರಹ

Published On :

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯಬೇಕು. ರೈಲ್ವೆ ಹಳಿ ನಿರ್ಮಾಣಕ್ಕಾಗಿ ಒಕ್ಕಲೆಬ್ಬಿಸಲಾಗುತ್ತಿರುವ ನಗರದ ಚಾಮರಾಜಪೇಟೆಯ (ಅಂಬೇಡ್ಕರ್ ಕಾಲೋನಿ)ನಿವಾಸಿಗಳಿಗೆ ತ್ವರಿತವಾಗಿ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸಬೇಕಾಗಿರುವುದು ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕದಸಂಸ ತಾಲೂಕು ಶಾಖೆ ಪ್ರತಿಭಟನೆ ನಡೆಸಿತು.
ನಗರದ ತಾಲೂಕು ಕಚೇರಿ ಎದುರು ಧರಣಿ ಕುಳಿತು ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು, ಬಡವರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಶಾಸಕರು ನಗರದಲ್ಲಿ ವಾಸವಾಗಿರಬೇಕು. ಬರಪೀಡಿತ ಪ್ರದೇಶಕ್ಕೆ ಶಾಶ್ವತ ನೀರಾವರಿ ಒದಗಿಸಬಹುದಾದ ಪರಮಶಿವಯ್ಯ ವರದಿ ಆಧಾರಿತ ನಿರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಪ್ರಮುಖ  ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಕದಸಂಸ ರಾಜ್ಯ ಮುಖಂಡರಾದ ಸತ್ಯ ಭದ್ರವತಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಆಶ್ರಯ ಯೋಜನೆ, ಅಂಬೇಡ್ಕರ್ ಯೋಜನೆ, ಭೂಮಿ ಹಂಚಿಕೆ ಮಾಡುವ ವಿಚಾರದಲ್ಲಿ ಯಾವುದೇ ಕಮಿಟಿಗಳನ್ನು ರಚನೆ ಮಾಡಿಲ್ಲ, ಏಕೆಂದರೆ ಬಡವರಿಗೆ ದಲಿತರಿಗೆ ಭೂಮಿ ಸಿಗುತ್ತದೆ ಎಂಬ ಕಾರಣಕ್ಕೆ. ಇಂದು ಭೂಮಿ ಬೆಲೆ ಗಗನಕ್ಕೇರುತ್ತಿರುವುದ್ದರಿಂದ ದಲಿತರಿಗೆ ನೀಡಬಾರದು ಎಂಬ ದುರುದ್ದೇಶದಲ್ಲಿ ಸರ್ಕಾರಗಳಿಗಿವೆ ಎಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ಭೂಮಿ ಬೆಲೆ ಗಗನಕ್ಕೇರಿರುವುದ್ದರಿಂದ ಒಬ್ಬ ತಹಸೀಲ್ದಾರ್ ಮತ್ತು ಶಿರಸ್ತೇದಾರ್ ನರಸಿಂಹಪ್ಪ ರಿಯಲ್ ಎಸ್ಟೇಟ್ ದಲ್ಲಾಳಿಗಳ ರೀತಿ ವರ್ತಿಸುತ್ತಿದ್ದಾರೆ. ಅವರು ದಲ್ಲಾಳಿತನವನ್ನು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.
ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್. ಗಂಗಾಧರ್ ಮಾತನಾಡಿ, ನಗರದ 30 ನೇ ವಾರ್ಡಿನ ಚಾಮರಾಜಪೇಟೆಯ ಅಂಬೇಡ್ಕರ್ ಕಾಲೋನಿಯ ನಿವಾಸಿಗಳಿಗೆ ವಸತಿ ಕಲ್ಪಿಸಬೇಕು. ಸಾಲಸೋಲ ಮಾಡಿ ಮನೆಗಳನ್ನು ಕಟ್ಟಿಕೊಂಡ ನಿವಾಸಿಗಳು, ತಮ್ಮನ್ನು ಒಕ್ಕಲೆಬ್ಬಿಸುತ್ತಿರುವುದರಿಂದ ಆತಂಕದಲ್ಲಿದ್ದಾರೆ. ಕೇವಲ ಭರವಸೆಗಳು ಇನ್ನು ಮಾತಿನ ರೂಪದಲ್ಲಿಯೇ ಇದ್ದು ನಿವಾಸಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ವರ್ಷಗಳು ಕಳೆಯುತ್ತಿದ್ದರೂ ಅಭಿವೃದ್ಧಿ ದೃಷ್ಟಿಯಲ್ಲಿ ಬಹಳಷ್ಟು ಹಿಂದುಳಿದಿದೆ. ಬಡವರ ಹಾಗೂ ದಲಿತರಿಗೆ ಅನುಕೂಲವಾಗುವಂತ ಸೂಕ್ತ ಯೋಜನೆಗಳು ತಲುಪುತ್ತಿಲ್ಲ ಎಂದು ಆರೋಪಿಸಿದರು.
ಕೇವಲ ಮಳೆ ನೀರಿನ ಮೇಲೆ ಅವಲಂಬಿತಾನಾದ ರೈತ ಕೃಷಿ ಚಟುವಟಿಕೆ ನಡೆಸಲು ಸಂಕಷ್ಟ ಎದುರಿಸುತ್ತಿದ್ದಾನೆ. ಆದ್ದರಿಂದ ಈ ಬಾಗದ ಕೃಷಿ ಕಾರ್ಮಿಕ, ಜನತೆಯ ಒಕ್ಕೂರಲಿನ ಧ್ವನಿಯ ಹೋರಾಟವಾದ ಪರಮಶಿವಯ್ಯ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಕೂಡಲೇ ತರುವುದೇ ಆಗಿದೆ. ಈ ಭರವಸೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಬಹುತೇಕ ಬಾಗ ಆಂಧ್ರದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ, ಗಡಿ ಭಾಗದ ಬಹಳಷ್ಟು ಹಳ್ಳಿಗಳು ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ, ಎಪಿಎಲ್, ಬಿಪಿಎಲಲ್ಪಡಿತರ ಚೀಟಿಗೆ ಸಂಬಂಧಿಸಿದಂತೆ ಇಲಾಖೆಯಿಂದ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದರಿಂದ ಕಚೇರಿಗೆ ಸಾರ್ವಜನಿಕರು ಕಚೇರಿಗೆ ಸುತ್ತುವಂತಾಗಿದೆ. ವಿವಿಧ ಇಲಾಖೆಗಳ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಸೂಕ್ತವಾಗಿ ಸ್ಪಂದಿಸದ ಅಧಿಕಾರಿಗಳು, ಸಾರ್ವಜನಿಕರ ಕೆಲಸ ಮಾಡಿ ಕೊಡಲು ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಭ್ರಷ್ಟ ಅಧಿಕಾರಿಗಳು ಹಾಗೂ ನೌಕರರನ್ನು ಗುರುತಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ತಮ್ಮ ವಿವಿಧ ಬೇಡಿಕೆ ಈಡೇರಿಕೆಗಳು ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಎನ್. ಶ್ರೀನಿವಾಸ್, ಜಿಲ್ಲಾ ಸಂಘಟನಾ ಸಂಚಾಲಕ ಡಿ.ಎಂ. ನರಸಿಂಹಯ್ಯ, ತಾಲ್ಲೂಕು ಅಂಚಾಲಕ ಎಸ್. ವೆಂಕಟೇಶ್, ತಾಲೂಕು ಸಂಘಟನಾ ಸಂಚಾಲಕ ತಿಪ್ಪೇನಹಳ್ಳಿ ನಾರಾಯಣ, ಬಿಸಿವೆಂಕಟೇಶ್, ಜೈರಾಮಪ್ಪ, ಟಿ.ನಾಗೇಶ್, ಸಬ್ಬೇನಹಳ್ಳಿ ರಾಜಣ್ಣ, ಚದಲಪುರ ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.