ಕೋಲಾರ

ಹೊಸ ಮರಳು ನೀತಿ ಬರದೆ ಪರಿಹಾರವಿಲ್ಲ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಜೂ. 29
ರಾಜ್ಯ ಸರ್ಕಾರ ಅದಷ್ಟು ಶೀಘ್ರ ಮರಳು ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸದಿದ್ದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಅಂತರ್ಜಲವನ್ನೇ ನಂಬಿ ಬದುಕುತ್ತಿರುವ ಜಿಲ್ಲೆಯ ಜನತೆಗೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವುದರಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮರಳು ನೀತಿ ಜಾರಿಯಾಗದಿರುವುದರಿಂದ ಮರಳು ವ್ಯಾಪಾರಿಗಳು ಕೆರೆ, ಹೊಲ, ಗದ್ದೆಗಳನ್ನು ಅಗೆದು ಬಗೆದು ಫಿಲ್ಟರ್ ಮರಳನ್ನು ಸಾಗಣೆ ಮಾಡಿ ಕುಬೇರರಾಗುತ್ತಿದ್ದಾರೆ.
ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆಯವರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಾಗಲ್ಲೆಲ್ಲ ಜನಪ್ರತಿನಿಧಿಗಳ ಮತ್ತು ಸರ್ಕಾರದ ಕಡೆ ಕೈತೋರಿಸಿ ನೆಪ ಮಾತ್ರಕ್ಕೆ ಕೆಲವು ಲಾರಿಗಳನ್ನು ಹಿಡಿದು ದಂಡ ವಿಧಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಯೇ ಹೊರತು ಮರಳು ಸಾಗಾಣೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗದೆ ಅಸಹಾಯಕರಾಗಿದ್ದಾರೆ.
ಇದರಿಂದಾಗಿ ರೈತ ಸಂಘದವರು ತಾವೇ ಕಾನೂನು ಕೈಗೆತ್ತಿಕೊಂಡು ರಾತ್ರಿ ವೇಳೆ ಮರಳು ಲಾರಿಗಳನ್ನು ಹಿಡಿಯುತ್ತಿರುವುದರಿಂದ ಪೊಲೀಸರು ಮತ್ತು ರೈತ ಸಂಘದ ಕಾರ್ಯಕರ್ತರ ನಡುವೆ ಮನಸ್ತಾಪ ಹಾಗೂ ಜಗಳಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪನವರು ಮರಳು ನೀತಿಯನ್ನು ಶೀಘ್ರವೇ ಜಾರಿಗೆ ತರುವುದಾಗಿ ಹೇಳಿದ್ದಾರೆ. ಸರ್ಕಾರ ಅದಷ್ಟು ಬೇಗನೆ ಮರಳು ನೀತಿ ಜಾರಿಗೆ ತಂದು ಅಕ್ರಮವಾಗಿ ಮರಳು ಸಾಗಣೆ ಮಾಡುವುದಕ್ಕೆ ಕಡಿವಾಣ ಹಾಕಬೇಕಿದೆ.
ಸರ್ಕಾರ ಹೊಸ ಮರಳು ನೀತಿ ಜಾರಿಗೆ ತರುವುದನ್ನು ಅಧಿಕಾರಿಗಳು ಸಹ ಕಾಯುತ್ತಿದ್ದಾರೆ. ಮರಳು ನಿಕ್ಷೇಪಗಳನ್ನು ಗುರುತಿಸಿದ್ದಾರೆ. ಅಕ್ರಮ ತಡೆಯಲು ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ ಕಾರ್ಯಾಚರಣೆಯನ್ನು ಹೇಗೆ ನಡೆಸಬೇಕು, ಯಾರ ನೇತೃತ್ವದಲ್ಲಿ ನಡೆಸಬೇಕು, ದಂಡ ವಿಧಿಸುವ ಅಧಿಕಾರ ಯಾರಿಗೆ ಇದೆ ಎಂಬುದು ಆದೇಶವಾಗಿಲ್ಲದ ಕಾರಣ ಕೋಲಾರ ಜಿಲ್ಲೆಯಲ್ಲಿ ಮರಳು ಸಾಗಾಣೆ ಯಾವುದೇ ಭಯವಿಲ್ಲದೆ ನಡೆಯುತ್ತಿದೆ.
ರೈತ ಸಂಘದವರು ಅಕ್ರಮ ಮರಳು ಸಾಗಣೆಗೆ ಜಿಲ್ಲಾಡಳಿತವೇ ಹೊಣೆ ಎಂದು ನೇರ ಆರೋಪ ಮಾಡುತ್ತಿದ್ದಾರೆ. ಕಂದಾಯ ಇಲಾಖೆ, ಭೂ ವಿಜ್ಞಾನ ಇಲಾಖೆಯವರು ಪೊಲೀಸರ ಸಹಕಾರವಿಲ್ಲದೆ ಅಕ್ರಮ ತಡೆಗಟ್ಟಲು ಸಾಧ್ಯವೇ ಇಲ್ಲವೆನ್ನುತ್ತಿದ್ದಾರೆ. ಪೊಲೀಸ್ ಇಲಾಖೆಯವರು ಹೆದ್ದಾರಿಗಳಲ್ಲಿ ಸಂಚರಿಸುವ ಮರಳು ಲಾರಿಗಳನ್ನು ಹಿಡಿಯುವಾಗ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತರುತ್ತಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ, ಇನ್ನು ಆರ್.ಟಿ.ಓ ಅಧಿಕಾರಿಗಳು ಮರಳು ಲಾರಿಗಳ ಮೇಲೆ ನಿಯಂತ್ರಣ ಹೇರುತ್ತಿಲ್ಲ. ಮರಳು ಲಾರಿಗಳನ್ನು ನಿಷೇಧಿಸುವ ಅಧಿಕಾರವಿದ್ದರೂ ಮೌನವಾಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಅಕ್ರಮ ಮರಳು ಲಾರಿಗಳಿಂದ 1 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದರೂ ಅಧಿಕಾರಿಗಳು ತಮಗೆ ಬೇಕಾದಷ್ಟು ಹಣ ಜೇಬಿಗೆ ತುಂಬಿಸಿಕೊಂಡು ಕಡಿಮೆ ದಂಡಕ್ಕೆ ರಸೀದಿ ನೀಡುತ್ತಿರುವುದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂಬ ಟೀಕೆಗಳು ಸಹ ಪ್ರತಿಭಟನಾಕಾರರಿಂದ ವ್ಯಕ್ತವಾಗುತ್ತಿದೆ.
ರಾಜ್ಯ ಸರ್ಕಾರ ಅಕ್ರಮವಾಗಿ ಮರಳು ಸಾಗಣೆ ಮಾಡುವುದನ್ನು ತಪ್ಪಿಸಲು ಜುಲೈನಲ್ಲಿ ಮಂಡಿಸುವ ಬಜೆಟ್‌ನಲ್ಲಿ ಸೂಕ್ತ ಕ್ರಮಗಳನ್ನು ಘೋಷಣೆ ಮಾಡಿ ತಕ್ಷಣ ಅನುಷ್ಟಾನಕ್ಕೆ ತರಬೇಕೆಂಬ ಒತ್ತಾಯ ರೈತ ಸಂಘ ಮತ್ತು ಇನ್ನಿತರರಿಂದ ಕೇಳಿ ಬಂದಿದ್ದು ಲೋಕೋಪಯೋಗಿ ಸಚಿವರು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮರಳು ವಿವಾದಕ್ಕೆ ಇತಿಶ್ರೀ ಹಾಡುವುದು ಒಳ್ಳೆಯದು.
'ಅಕ್ರಮ ಮರಳು ಸಾಗಣೆ ತಡೆಯದಿದ್ದರೆ ಲಾರಿಗೆ ಬೆಂಕಿ'
ಕೋಲಾರ-ಶ್ರೀನಿವಾಸಪುರ ರಸ್ತೆಯ ರೋಜರಪಲ್ಲಿ ಕ್ರಾಸ್‌ನಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿದ ರೈತ ಸಂಘದ ಕಾರ್ಯಕರ್ತರು 12 ಮರಳು ಲಾರಿಗಳನ್ನು ಹಿಡಿದು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸಲು ಪ್ರಯತ್ನಿಸಿ ಯಾವುದೇ ಅಧಿಕಾರಿ ಸ್ಥಳಕ್ಕೆ ಸಕಾಲಕ್ಕೆ ಬರದಿದ್ದಾಗ 8 ಲಾರಿಗಳನ್ನು ಕೋಲಾರಕ್ಕೆ ತಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದಾರೆ. ಇನ್ನು 4 ಲಾರಿಗಳನ್ನು ಶ್ರೀನಿವಾಸಪುರ ಪೊಲೀಸರು ಮಾಹಿತಿ ತಿಳಿದು ತಮ್ಮ ವಶಕ್ಕೆ ಪಡೆದುಕೊಂಡರು. ಮರಳು ಲಾರಿಗಳು ಪ್ರತಿನಿತ್ಯ ರಾಜಾರೋಷವಾಗಿ ಓಡಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ವಿಫಲರಾಗಿದ್ದಾರೆಂದು ರೈತ ಮುಖಂಡರಾದ ಕೆ. ಶ್ರೀನಿವಾಸಗೌಡ, ನಾರಾಯಣಗೌಡ, ಮೂರಾಂಡಹಳ್ಳಿ ಶಿವಾರೆಡ್ಡಿ, ಮುನೇಗೌಡ ಇನ್ನಿತರರು ಆರೋಪಿಸಿದ್ದಾರೆ. ಅಕ್ರಮ ಮರಳು ಸಾಗಾಣೆ ತಡೆಗಟ್ಟದಿದ್ದರೆ ಮರಳು ಲಾರಿಗಳಿಗೆ ನಾವೇ ಬೆಂಕಿ ಹಾಕಿ ಸುಡುತ್ತೇವೆ, ಇದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆಯಾದರೆ ಜಿಲ್ಲಾಡಳಿತವೇ ಹೊಣೆ, ಅದೇ ರೀತಿ ರೈತ ಸಂಘದ ಕಾರ್ಯಕರ್ತರಿಗೆ ಮರಳು ಸಾಗಾಣೆ ಮಾಡುವವರಿಂದ ಏನಾದರೂ ತೊಂದರೆ ಆದಲ್ಲಿ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.