ಕ.ಪ್ರ. ವಾರ್ತೆ ್ಣ ಕೋಲಾರ ್ಣ ಮಾ.29
ಅಧಿಕಾರ ಹಿಡಿಯಲು ಕ್ಷೇತ್ರದ ಮುಗ್ಧ ಮತದಾರರ ಮನಸ್ಸು ಕೆಡಿಸಬೇಡಿ ಎಂದು ಸಚಿವ ವರ್ತೂರ್ ಪ್ರಕಾಶ್ ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಶುಕ್ರವಾರ ಅಲ್ಪ ಸಂಖ್ಯಾತ ಸಮುದಾಯದ ಹಿರಿಯರ ಆಶೀರ್ವಾದ ಬಯಸಿ ಮಾತನಾಡಿದ ಸಚಿವರು, ಕ್ಷೇತ್ರದ ಜನತೆ ನನ್ನ ಸೇವಾ ಕಾರ್ಯಗಳನ್ನು ಮೆಚ್ಚಿಯೇ ಶಾಸಕನನ್ನಾಗಿ ಮಾಡಿದವರು ಇವರ ಆಶೀರ್ವಾದದ ಫಲ ಸಚಿವಗಿರಿವರೆಗೂ ತಮ್ಮನ್ನು ಕರೆದೊಯ್ಯಿತು, ಈ ಸ್ಥಾನ ಮಾನಗಳನ್ನು ಸ್ವ ಹಿತಾಸಕ್ತಿಗೆ ಬಳಸಿಕೊಳ್ಳದೆ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಂಡಿದ್ದೇನೆ. ಆದರೆ, ಜೆಡಿಎಸ್ ಅಭ್ಯರ್ಥಿ ಸೇರಿದಂತೆ ಈ ಪಕ್ಷದ ಕೆಲ ಮುಖಂಡರು ಅನಗತ್ಯವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದು ನೊಂದು ನುಡಿದರು.
ಕ್ಷೇತ್ರದ ಜನತೆ ಮತ್ತು ತಮ್ಮ ನಡುವಿನ ಉತ್ತಮ ಸಂಬಂಧ ಹಳಸುವಂತೆ ಮಾಡುವಲ್ಲಿ ಕೆಲ ಶಕ್ತಿಗಳು ಹೊಂಚು ಹಾಕುತ್ತಿವೆ, ಜನತೆ ಇದನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ ಕ್ಷೇತ್ರದಲ್ಲಿ ಮತ್ತೆ 15 ವರ್ಷಗಳ ಹಿಂದಿನ ಕಹಿ ರಾಜಕಾರಣ ಮರುಕಳುಸಬಹುದೆಂದು ಹೇಳಿದರು. ನನಗೆ ಕ್ಷೇತ್ರದ ಅಭಿವೃದ್ಧಿಗೆ ಸಮಯ ಸಾಕಾಗುತ್ತಿಲ್ಲ, ಇನ್ನು ಜಾತಿ ರಾಜಕಾರಣ ಎಲ್ಲಿ ಮಾಡಲಿ ಎಂದು ಪ್ರಶ್ನಿಸಿದ ಸಚಿವರು ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಬಳಿ ವಿಶೇಷ ಅನುದಾನಗಳನ್ನು ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ನೇರವಾಗಿ ಮಾತನಾಡುವುದು ನನಗೆ ಚಿಕ್ಕಂದಿನಿಂದಲೂ ಬಂದ ಅಭ್ಯಾಸ, ಇದಕ್ಕೂ ವಿರೋಧಿಗಳು ದುರಂಹಕಾರದ ಲೇಪವನ್ನು ಹಚ್ಚುತ್ತಿದ್ದಾರೆ ಎಂದು ವಿಷಾದಿಸಿದ ಸಚಿವರು ನನಗೆ ಬಾಯಲ್ಲಿ ಮಾತ್ರವೇ ಹಲ್ಲುಗಳಿವೆ, ಎದೆಯಲ್ಲಿ, ಹೊಟ್ಟೆಯಲ್ಲಿ ಇಲ್ಲ. ಬಾಯಲ್ಲಿ ಬೆಣ್ಣೆಯಂತಹ ಮಾತುಗಳನ್ನಾಡಿ, ಹಿಂದೆಯಿಂದ ಚೂರಿ ಇರಿಯುವ ಸ್ವಭಾವ ನನ್ನದಲ್ಲ, ಒಂದು ವೇಳೆ ಜನತೆಗೆ ನನ್ನ ನೇರ ನಡೆ ಇಷ್ಟವಿಲ್ಲದಿದ್ದರೆ ಬದಲಾಗಲು ತಯಾರಿದ್ದೇನೆ ಎಂದು ಘೋಷಿಸಿದರು. ಅಲ್ಪಸಂಖ್ಯಾತ ಸಮುದಾಯದ ಹಿರಿಯರಾದ ಕೆ.ಸಿ. ಅನ್ವರ್, ಎನ್. ನಸೀರ್ ಅಹಮದ್, ಶಮೀವುಲ್ಲಾ ಷರೀಪ್, ನಿಯಾಜ್ ಅಹಮದ್ಖಾನ್, ಎಸ್. ಮೀರ್ಜಾನ್, ಸೈಯದ್ಮೌದೀನ್, ಮಹಮದ್ ದಿಕ್ರಿಯಾ, ಶಹೀರ್ ಅಹಮದ್, ಅಬ್ದುಲ್ ರಷೀದ್, ಪರಹತ್ಪಾಷ, ಆರ್.ಬಾಷ, ಶಬೀರ್ ಅಹಮದ್, ಅಮೀರ್ಜಾನ್ ಮತ್ತಿತರರು ಇದ್ದರು.