ಕೋಲಾರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ
ಕ.ಪ್ರ.ವಾರ್ತೆ ಕೋಲಾರ ನ.1
ಈ ಬಾರಿ ನಗರದ ಬಹುತೇಕ ಕನ್ನಡಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದ್ದರಿಂದ 58ನೇ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಎಂದಿನಂತೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಡಿಮೆಯಿತ್ತಾದರೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಗಣಿನೀಯ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕೊರತೆ ನಿವಾರಿಸಿದರು.
ನಗರದ ಬಹುತೇಕ ಶಾಲಾ-ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಿದ್ದರಿಂದ ವಿದ್ಯಾರ್ಥಿಗಳ ಗೈರು ಎದ್ದು ಕಾಣುತ್ತಿತ್ತು. ಜಿಲ್ಲಾಧಿಕಾರಿ ಡಿ.ಕೆ. ರವಿಯವರ ಮನವಿಯ ಮೇರೆಗೆ ಕನ್ನಡ ಪರ ಸಂಘಟನೆಗಳು ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ, ಗದ್ದಲಕ್ಕೆ ಅವಕಾಶ ನೀಡದೆ ಸುಸೂತ್ರವಾಗಿ ಕಾರ್ಯಕ್ರಮ ನಡೆಯಲು ಸಹಕರಿಸಿದರು. ಖ್ಯಾತ ಗಾಯಕ ರಾಜಪ್ಪ ಮತ್ತವರ ತಂಡದವರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನೀಡಿದ ಸಂಗೀತ ರಸದೌತಣ ಸಂಭೀಕರನ್ನು ರಂಜಿತು. ಕವಿ, ಗೀತೆ ರಚನೆಕಾರ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಬರೆದಿರುವ ಹಾಲು-ನೀರು ಕುರಿತ ಹಾಡು ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಅಂತರ್ಜಲದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿತ್ತು. ಸಂತ ಶಿಶುನಾಳ ಶರೀಫರು, ದಾಸರು ಹಾಗೂ ನಾಡಿನ ಶ್ರೇಷ್ಠ ಕವಿಗಳ ಕವಿತೆಗಳನ್ನು ಉತ್ತಮ ರಾಗ ಸಂಯೋಜನೆಯೊಂದಿಗೆ ಹಾಡಿ ಗಮನ ಸೆಳೆದರು. ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಮತ್ತು ದೌರ್ಜನ್ಯಗಳ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಎಂದಿನಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗದಿಂದ ಕಾರ್ಮಿಕ ಮುಖಂಡರಾದ ಗೋಪಾಲಗೌಡ, ಪಿ. ನಾರಾಯಣಪ್ಪ, ಶಿವಕುಮಾರ್,ರಮೇಶ್ ಮಾರ್ಗದರ್ಶನದಲ್ಲಿ ರಾಜ್ಯದ ಇತಿಹಾಸ ತಿಳಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕೃಷಿ, ತೋಟಗಾರಿಕೆ, ಅರಣ್ಯ, ಶಿಕ್ಷಣ ಇಲಾಖೆಗಳಿಂದ ಸರ್ಕಾರದ ವಿವಿಧ ಯೋಜನೆಗಳನ್ನು ಸಾದರ ಪಡಿಸುವ ಸ್ತಬ್ಧಚಿತ್ರಗಳ ವ್ಯವಸ್ಥೆ ಮಾಡಲಾಗಿತ್ತು. ಉಡುಪಿಯ ಪ್ರಸಿದ್ಧ ಭೂತರಾಧನೆಯ ಕಲಾವಿದರು ವೇಷಗಳನ್ನು ಧರಿಸಿ ವಿಶಿಷ್ಟವಾದ ನೃತ್ಯ ಪ್ರದರ್ಶಿಸಿ ಜನತೆಯನ್ನು ಆಕರ್ಷಿಸಿದರು. ರಾಮನಗರದ ಪಟದ ಕುಣಿತ, ಮುಂತಾದ ಜನಪದ ಕಲಾ ತಂಡಗಳು ಭಾಗವಹಿಸಿದ್ದವು. ರಾಜ್ಯೋತ್ಸವ ಮೆರವಣಿಗೆ ನೋಡಲು ಎಂಜಿ ರಸ್ತೆ, ಎಂಜಿ ಚೌಕ ಬಳಿ ನೂರರು ಜನರು ಸೇರಿದ್ದರು. ಕನ್ನಡಪರ ಸಂಘಟನೆಗಳ ಮುಖಂಡರಾದ ಅ.ಕೃ. ಸೋಮಶೇಖರ್, ಕಲಾವಿದ ವಿಷ್ಣು, ತ್ಯಾಗರಾಜ್, ಜಯದೇವ ಪ್ರಸನ್ನ, ಸುಲೇಮಾನ್ ಖಾನ್, ಆಟೋ ನಾರಾಯಣಸ್ವಾಮಿ, ಕೋ.ನಾ. ಪ್ರಭಾಕರ್, ನಾ. ಮಂಜುನಾಥ್, ವಿಶ್ವನಾಥ್ ಮೆರವಣಿಗೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

