ಶಾಲಾ ಮಕ್ಕಳಿಗೆ ಗೋದಿ ಯೋಜನೆಗೆ ಚಾಲನೆ
ಪಾ.ಶ್ರೀ. ಅನಂತರಾಮ್
ಕೋಲಾರ: ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕೆಂಬ ಉದ್ದೇಶದಿಂದ ಕಳೆದ ಜನವರಿ 26ರಿಂದ ಜಾರಿಗೆ ತರಲಾಗಿದ್ದ ರಾಗಿ ಮುದ್ದೆ ಯೋಜನೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದು ಗೋದಿಯಿಂದ ತಯಾರಿಸುವ ಆಹಾರವನ್ನು ಮಕ್ಕಳಿಗೆ ನೀಡಲು ಗೋದಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.
ರಾಜ್ಯದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಪ್ರತಿ ದಿನ ಒಂದೇ ರೀತಿಯ ಆಹಾರ ನೀಡುತ್ತಿರುವುದರಿಂದ ಏಕತಾನತೆ ಉಂಟಾಗುತ್ತಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಬಿಸಿಯೂಟ ಸೇವನೆ ಮಾಡುತ್ತಿದ್ದಾರೆಂಬ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗೋದಿಯಿಂದ ತಯಾರಿಸಬಹುದಾದ ಚಪಾತಿ, ರೊಟ್ಟಿ, ಪೂರಿ, ಉಪ್ಪಿಟ್ಟು ಹಾಗೂ ಪಾಯಸವನ್ನು ನೀಡಲು ನಿರ್ಧರಿಸಿ ನವೆಂಬರ್ 1 ರಿಂದ ಯೋಜನೆಗೆ ಚಾಲನೆ ನೀಡಿದೆ.
ಸರ್ಕಾರಿ ಶಾಲೆಗಳಿಗೆ ಬಹುತೇಕ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದು ಮನೆಗಳಲ್ಲಿ ರಾಗಿಯನ್ನೇ ಹೆಚ್ಚಾಗಿ ಬಳಕೆ ಮಾಡುವುದರಿಂದ ಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಮುದ್ದೆಯನ್ನು ಸೇವಿಸಲು ಮಕ್ಕಳು ಇಷ್ಟಪಡುತ್ತಿಲ್ಲವೆಂಬ ಅಭಿಪ್ರಾಯದ ಹಿನ್ನಲೆಯಲ್ಲಿ ಸರ್ಕಾರ ರಾಗಿ ಮುದ್ದೆಯನ್ನು ನಿಲ್ಲಿಸಿ ಗೋದಿಯ ಆಹಾರ ನೀಡಲು ಮುಂದಾಗಿದೆ.
ವಾರಕ್ಕೆ ಎರಡು ದಿನ: ಮಧ್ಯಾಹ್ನ ಊಟದ ಯೋಜನೆಯಡಿ ಮಕ್ಕಳಿಗೆ ಸಮತೋಲನ ಆಹಾರ ನೀಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಮಧ್ಯಾಹ್ನದ ಬಿಸಿಯೂಟದಲ್ಲಿ ವೈವಿಧ್ಯತೆ ತರುವ ಸಂಬಂಧ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ದಿನ ಅಕ್ಕಿಯ ಬದಲು ಅದೇ ಪ್ರಮಾಣದಲ್ಲಿ ಗೋಧಿಯನ್ನು ಬಳಕೆ ಮಾಡಿ ಸ್ಥಳೀಯ ಪದ್ಧತಿಯನ್ವಯ ಚಪಾತಿ, ರೊಟ್ಟಿ, ಪೂರಿ, ಉಪ್ಪಿಟ್ಟು,ಪಾಯಸದ ಪೈಕಿ ಯಾವುದಾದರೊಂದನ್ನು ನೀಡಲು ಯೋಜನೆ ಅನುಷ್ಠಾನಕ್ಕೆ ತಂದಿದೆ.
ಚಾಲನೆ: ಕನ್ನಡ ರಾಜ್ಯೋತ್ಸವ ದಿನವಾದ ನ.1 ರಂದು ಈ ಯೋಜನೆ ರಾಜ್ಯದ ಎಲ್ಲಾ ಕಡೆ ಉದ್ಘಾಟನೆಗೊಂಡಿದೆ. ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಯು.ಟಿ. ಖಾದರ್ ಮಕ್ಕಳಿಗೆ ಚೌಚೌ ಬಾತ್ ಬಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಎನ್.ಜಿ.ಒಗಳು ಕಾರ್ಯನಿರ್ವಹಿಸುತ್ತಿರುವ ತಾಲೂಕುಗಳಲ್ಲಿ ಆಯಾ ಸಂಸ್ಥೆಗಳಿಗೆ ಹೊಂದಾಣಿಕೆ ಮಾಡಿರುವ ಶಾಲೆಗಳಿಗೆ ಗೋಧಿಯಿಂದ ಸಿದ್ಧಪಡಿಸಿದ ಆಹಾರವನ್ನು ಸರಬರಾಜು ಮಾಡಲು ಸೂಚಿಸಲಾಗಿದೆ.
ಫಲಾನುಭವಿಗಳು: ಕೋಲಾರ ಜಿಲ್ಲೆಯಲ್ಲಿ 2,058 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1,48,938 ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲಿದ್ದಾರೆ.
ಕೋಲಾರ ತಾಲೂಕಿನ 1,228 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 608 ಹಿರಿಯ ಪ್ರಾಥಮಿಕ ಶಾಲೆ, 116 ಪ್ರೌಢಶಾಲೆ ಸೇರಿದಂತೆ 1,952 ಸರ್ಕಾರಿ ಶಾಲೆಗಳಲ್ಲಿ ಹಾಗೂ ಅನುದಾನಿತ 106 ಸೇರಿದಂತೆ ಒಟ್ಟು 2,058 ಶಾಲೆಗಳಲ್ಲಿ ಯೋಜನೆ ಜಾರಿಗೆ ತರಲಾಗಿದೆ.
1ರಿಂದ 5ನೇ ತರಗತಿಯ 71,177, 6 ರಿಂದ 7ನೇ ತರಗತಿಯ 31,625, 8ನೇ ತರಗತಿಯ 16,016, 9ರಿಂದ 10ನೇ ತರಗತಿಯ 30,120 ಮಕ್ಕಳು ಸೇರಿ ಒಟ್ಟು 1,48,938 ಮಕ್ಕಳು ಪ್ರಯೋಜನ ಪಡೆಯಲಿದ್ದಾರೆ.
ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ಝಲ್ಫಿಖಾರ್ ಉಲ್ಲಾ, ಜಿಪಂ ಸದಸ್ಯ ಚೌಡೇಶ್ವರಿ, ಡಿಡಿಪಿಐ ಪದ್ಮನಾಭ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಕಣ್ಣಯ್ಯ ಹಾಗೂ ಛತ್ರಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಗೋದಿ ಭಾಗ್ಯ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

