ಕೋಲಾರ

ಡಿ.ರಾಜೇಂದ್ರ ಬಾಬು ನಿಧನ: ಗಣ್ಯರ ಶೋಕ

Published On :

ಚಿಕ್ಕಬಳ್ಳಾಪುರ: ಕನ್ನಡ ಚಲನಚಿತ್ರ ನಿರ್ದೇಶಕ, ನಟ ಡಿ. ರಾಜೇಂದ್ರ ಬಾಬು ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಡಾ.ಡಿ. ರಾಜೇಂದ್ರ ಬಾಬು ಜಿಲ್ಲೆ ಹೆಮ್ಮೆ ಪುತ್ರ. ಶಾಲಾ, ಕಾಲೇಜಿನಲ್ಲಿ ಓದುವಾಗಲೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆ ಪಡೆದಿದ್ದರು. ಅಲ್ಲದೇ ಪಂಚತಾರಾ ಕಲಾನಿಕೇತನ ತಂಡವನ್ನು ರಚಿಸಿದ್ದು ಇತರರೂ ನಾಟಕದ ಕಡೆಗೆ ಆಸಕ್ತಿ ವಹಿಸಿ ಕಲಾವಿದರಾಗಿ ಬೆಳೆಯಲು ಪ್ರೋತ್ಸಾಹ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗಲೆಲ್ಲಾ ತಪ್ಪದೇ ಭಾಗವಹಿಸುತ್ತಿದ್ದರು.  
 ಅಲ್ಲದೇ ಇಲ್ಲಿನ ತಮ್ಮ ಒಡನಾಡಿಗಳೊಂದಿಗೆ ಕನ್ನಡಪರ ಕಾರ್ಯಕ್ರಮಗಳು, ನಾಟಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇವರು ನಾಯಕರಾಗಿ ನಟಿಸಿದ ಕುರುಬನ ಲೆಕ್ಕ ಸಿನಿಮಾಗೆ ಸಂಗೀತ ನೀಡಿದ ಸುಖದೇವ್ ಅವರಿಗೆ ಸಹಾಯಕರಾಗಿ ಕೆಲಸ ಮಾಡುವ ಭಾಗ್ಯ ತಮಗೆ ಸಿಕ್ಕಿತ್ತು. ಇದಕ್ಕೂ ಮುಂಚೆ ಡಿ. ರಾಜೇಂದ್ರ ಬಾಬುರವರೊಂದಿಗೆ ನಾಟಕಗಳಲ್ಲಿ ಅಭಿನಯಿಸಿದ್ದು ವಿಷಜ್ವಾಲೆ ನಾಟಕದಲ್ಲಿ ಅವರ ಸಹೋದರ ಪಾತ್ರ ವಹಿಸಿದ್ದೆ,ನಮ್ಮ ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತವಾದ್ದರಿಂದ ಅನೇಕ ಕಡೆ ಪ್ರದರ್ಶನವನ್ನು ಸಹ ನೀಡಿದ್ದೇವು ಎಂದು ಸಾಹಿತಿ, ಹಿರಿಯ ಪತ್ರಕರ್ತ ವೀರಶೇಖರ್ ಅವರು ಬಾಬುರವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ.
ಕನ್ನಡ ಚಿತ್ರೋದ್ಯಮದಲ್ಲಿ ನಮ್ಮ ಜಿಲ್ಲೆಯವರು ಅನೇಕರು ಸೇವೆ ಮಾಡುತ್ತಿದ್ದಾರೆ. ಅವರಲ್ಲಿ ಡಿ. ರಾಜೇಂದ್ರ ಬಾಬುರವರು ಸಹ ಒಬ್ಬರು. ತಮ್ಮ ಹುಟ್ಟೂರಾದ ಚಿಕ್ಕಬಳ್ಳಾಪುರದ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದರು.ಅವರು ನಿರ್ದೇಶಿಸುತ್ತಿದ್ದ ಸಿನಿಮಾಗಳಿಗೆಲ್ಲಾ ಹೆಚ್ಚಿಗೆ ಚಿಕ್ಕಬಳ್ಳಾಪುರವನ್ನು ಶೂಟಿಂಗೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಕನ್ನಡಪರ ಹೋರಾಟಕ್ಕೆ ಸದಾ ಮುಂದೆ ನಿಲ್ಲುತ್ತಿದ್ದರು.ಇಂತಹ ವ್ಯಕ್ತಿಯ ಸಾವು ನಿಜಕ್ಕೂ ತುಂಬಲಾರದ ನಷ್ಟ ಎಂದು ಸಾಹಿತಿ ಟಿ.ಎಸ್. ನಾಗೇಂದ್ರ ಬಾಬು ತಿಳಿಸಿದ್ದಾರೆ.
ಇನ್ನೂ ಚಿಕ್ಕಬಳ್ಳಾಪುರಕ್ಕೆ ಕೀರ್ತಿ ತಂದ ಮಹಾಚೇತನ ಡಿ. ರಾಜೇಂದ್ರ ಬಾಬು ಇನ್ನಿಲ್ಲ ಎನ್ನುವುದನ್ನು ಅರಗಿಕೊಳ್ಳಲಾಗುತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಪಂಚತಾರಾ ಕಲಾನಿಕೇತನದ ಜೆ. ಜಯಚಂದ್ರನಾಯ್ಡು, ಸಂಗೀತ ನಿರ್ದೇಶಕ ಕೆ.ಪಿ. ಸುಖದೇವ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಪಿ. ನವಮೋಹನ್, ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷ ಕೋಕಿಲಾರಾವ್, ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಹೆಚ್.ಎಸ್. ಶೇಷಭಟ್ಟ, ಗಾಯತ್ರಿಸೇವಾ ಸಮಿತಿ ಅಧ್ಯಕ್ಷ ಎಸ್.ಎನ್.ರಮೇಶ್, ಜಿಲ್ಲಾ ಪ್ರಗತಿಪರ ಹೋರಾಟಗಾರ ಯಲುವಹಳ್ಳಿ ಎನ್. ರಮೇಶ್, ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಸಂಗೀತ ನಿರ್ದೇಶಕ ವೆಂಕಟರಾಮ್, ಭುವನೇಶ್ವರಿ ಕನ್ನಡ ಸಮಿತಿಯ ಆರ್. ವೆಂಕಟನಾರಾಯಣ್, ಜಿ.ಆರ್. ಹರಿಕುಮಾರ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ. ಮಹೇಶ್, ಪತ್ರಕರ್ತರಾದ ಎಸ್. ಶಿವರಾಮ್, ಹೆಚ್.ವಿ. ಸೋಮಶೇಖರ್, ಎಸ್, ರಾಜೇಂದ್ರಬಾಬು, ಎಂ. ಕೃಷ್ಣಪ್ಪ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.