'ಸರೋಜಿನಿ ವರದಿ ಶೀಘ್ರ ಜಾರಿಯಾಗಲಿ'
ಕೋಲಾರ: ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಡಾ. ಸರೋಜಿನಿ ಮಹಿಷಿ ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿಯನ್ನು ಕೂಡಲೇ ಜಾರಿಗೆ ತರಬೇಕು. ನ್ಯಾಯಾಲಯ ಕಲಾಪಗಳು ಕನ್ನಡದಲ್ಲಿಯೇ ನಡೆಯಬೇಕು ಹಾಗೂ ಬ್ಯಾಂಕ್, ರೇಲ್ವೆ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಬೇಕು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ವಕೀಲ ಕೆ. ನರೇಂದ್ರಬಾಬು ಆಗ್ರಹಿಸಿದ್ದಾರೆ. ನಗರದ ಕ್ಲಾಕ್ ಟವರ್ಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 58ನೇ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಬಳಕೆಯನ್ನು ಕಡ್ಡಾಯವಾಗಿ ಹಾಗೂ ಅತಿ ಹೆಚ್ಚಾಗಿ ಬಳಸುವ ಮೂಲಕವಷ್ಟೇ ಭಾಷೆಯನ್ನು ಜೀವಂತವಾಗಿಯಲ್ಲದೇ ಪ್ರಭಾವ ಪೂರ್ಣವಾಗಿಡಲು ಸಾಧ್ಯ. ಇದಕ್ಕೆ ಪೂರಕವಾಗಿ ವಿವಿಧ ಪ್ರಗತಿಪರ ಯೋಜನೆಗಳನ್ನು ಆಡಳಿತವು ಹಮ್ಮಿಕೊಳ್ಳುವುದು ಅಗತ್ಯ. ಸಾಕಷ್ಟು ಕಚೇರಿಗಳಲ್ಲಿ, ಸಂದರ್ಭಗಳಲ್ಲಿ ಕನ್ನಡ ಬದಲಾಗಿ ಇನ್ನಿತರೆ ಭಾಷೆಗಳ ಬಳಕೆ ಮಾಡುವುದರಿಂದಷ್ಟೇ ಕನ್ನಡದ ಆಧ್ಯತೆ ಇಳಿಮುಖವಾಗಲು ಆಸ್ಪದವಾಗುತ್ತಿದೆ ಎಂದು ಅವರು ವಿಷಾದಿಸಿದರು.
ಮಾಜಿ ಸಚಿವ ಕೆ.ಎ.ನಿಸಾರ್ ಅಹ್ಮದ್ ಮಾತನಾಡಿ ಕನ್ನಡ ರಾಜ್ಯೋತ್ಸವವು ಇಡೀ ರಾಜ್ಯ ಜನತೆಯ ಹಬ್ಬವಾಗಿದೆ. ಇದನ್ನು ನಾವೆಲ್ಲರೂ ಕೂಡಿ ಆಚರಿಸೋಣ. ಇದೇ ಸಂದರ್ಭದಲ್ಲಿ ನಾವೆಲ್ಲರೂ ಒಂದೆಡೆ ಕುಳಿತು ಇರುವ ಕುಂದು-ಕೊರತೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಸಾಮೂಹಿಕ ಪ್ರಯತ್ನ ಮಾಡೋಣ. ಇದರಲ್ಲಿ ಯಾವುದೇ ಕ್ಷುಲ್ಲಕ ರಾಜಕಾರಣಕ್ಕೆ, ಗುಂಪುಗಾರಿಕೆಗೆ, ಪಟ್ಟಭದ್ರ ಹಿತಾಸಕ್ತಿಗೆ, ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡಬಾರದು. ನಮ್ಮಲ್ಲಿ ಒಗ್ಗಟ್ಟು ಮೂಡುವವರೆಗೂ ನಮ್ಮ ಭಾಷೆ ಕನ್ನಡ ಉಳಿಕೆ, ಬೆಳಿಕೆ ಅಸಾಧ್ಯ ಎಂದು ಹೇಳಿದರು.
ಸಮಾಜಸೇವಕ ಹಾಗೂ ಕಾರ್ಯಕ್ರಮದ ಆಯೋಜಕ ಎಂ. ಇಮ್ರಾನ್ ಮಾತನಾಡಿ ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮಲ್ಲಿ ಮೊದಲು ಅಂಕುರಿಸಬೇಕು. ಆಗಷ್ಟೇ ನಾವು ನಮ್ಮ ಭಾಷೆಯನ್ನು ಪ್ರೀತಿಸಲು, ಇತರರ ಭಾಷೆಯನ್ನು ಗೌರವಿಸಲು ಸಾಧ್ಯ. ಆದ್ದರಿಂದ ಮೊದಲು ನಮ್ಮನ್ನು ನಾವು ಭಾತೃತ್ವ ದೃಷ್ಟಿಯಿಂದ ನೋಡೋಣ. ಆಗ ಕನ್ನಡ ಬಾಷೆ, ಕರ್ನಾಟಕದ ನೆಲ, ನೀರು, ಗಾಳಿ ನಮ್ಮದು, ನಮ್ಮವರದ್ದು ಎಂಬ ಅಭಿಮಾನ ತಾನಾಗಿಯೇ ಬೆಳೆಯುತ್ತದೆ ಎಂದು ಸಾರಿದರು.
ಜನವಾದಿ ಮಹಿಳೆ ಸಂಘಟನೆಯ ಅಧ್ಯಕ್ಷೆ ವಿ. ಗೀತಾ, ಭೀಮಸೇನೆ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಟಿ. ವಿಜಯಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

