ಅಂತರ್ಜಲ ಅಭಿವೃದ್ಧಿಯಾಗದೆ ಶುದ್ಧ ನೀರು ಪೂರೈಕೆ ಅಸಾಧ್ಯ
ಕ.ಪ್ರ.ವಾರ್ತೆ ಕೋಲಾರ ನ.7
ಮುಂದಿನ ಜನಾಂಗದ ಹಿತ ದೃಷ್ಟಿಯಿಂದ ಅಂತರ್ಜಲವನ್ನು ಅಭಿವೃದ್ಧಿಪಡಿಸದಿದ್ದರೆ ಶುದ್ಧವಾದ ಕುಡಿಯುವ ನೀರು ಒದಗಿಸಲು ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಸತ್ಯಬಾತ್ರ ಸಾಹು ಪ್ರತಿಪಾದಿಸಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಕುಡಿಯುವ ನೀರು ಭದ್ರತಾ ಯೋಜನೆಯಡಿ ಮುಳಬಾಗಿಲು ತಾಲೂಕಿನಲ್ಲಿ ಕೈಗೆತ್ತಿಕೊಂಡಿರುವ ಪೈಲಟ್ ಯೋಜನೆ ಉದ್ಘಾಟಿಸಿ ಮಾತನಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ರಾಷ್ಟ್ರೀಯ ಪ್ರಾಯೋಗಿಕ ಕುಡಿಯುವ ನೀರು ಭದ್ರತಾ ಯೋಜನೆಯಲ್ಲಿ ರಾಷ್ಟ್ರದ 638 ಜಿಲ್ಲೆಗಳಲ್ಲಿ ಒಟ್ಟು 837 ಬ್ಲಾಕ್ಗಳನ್ನು ಗುರುತಿಸಿ ಅಲ್ಲಿ ಮಳೆಕೊಯ್ಲು ಪದ್ಧತಿ, ಶುದ್ಧ ಕುಡಿಯುವ ನೀರು ಪೂರೈಕೆ, ಹನಿ ನೀರಾವರಿ, ಬೆಳೆ ಪದ್ಧತಿ, ಚೆಕ್ ಡ್ಯಾಮ್ ನಿರ್ಮಾಣ, ಕೃಷಿಗೆ ಕಡಿಮೆ ನೀರು ಬಳಕೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಾಯೋಜಿಕವಾಗಿ ರಾಷ್ಟ್ರದ 15 ಬ್ಲಾಕ್ಗಳಲ್ಲಿ ಪೈಲೆಟ್ ಯೋಜನೆ ಅನುಷ್ಠಾನಕ್ಕಾಗಿ ಪ್ರತಿ ಬ್ಲಾಕಿಗೆ 1 ಕೋಟಿ ರು.ನಂತೆ ಒಟ್ಟು 15 ಕೋಟಿ ರು.ಬಿಡುಗಡೆ ಮಾಡಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ಬ್ಲಾಕ್ಗೆ ಬಿಡುಗಡೆ ಮಾಡಿರುವ 1 ಕೋಟಿ ರು.ಗಳನ್ನು ಯೋಜನೆಯ ಅನುಷ್ಠಾನಾಧಿಕಾರಿಗಳು ಸರಿಯಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಸಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಸದರಿ ಯೋಜನೆ ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಜಾರಿಗೆ ಬಂದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧನೆ ಆಗಿಲ್ಲ. ಅಧಿಕಾರಿಗಳು ಈ ಬಗ್ಗೆ ಚಿಂತನೆ ಮಾಡಿ ಮುಂದಿನ ದಿನಗಳಲ್ಲಿ ಮುಳಬಾಗಿಲು ಬ್ಲಾಕ್ ಮಾದರಿಯಲ್ಲಿ ಯೋಜನೆ ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.
ಈ ಪೈಲಟ್ ಯೋಜನೆಗೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಾಗೂ ಅಂತರ್ಜಲಮಟ್ಟ ಕಡಿಮೆ ಇರುವ ಬ್ಲಾಕ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಂತಹ ಬ್ಲಾಕ್ಗಳಲ್ಲಿ ಶುದ್ಧ ನೀರು ಪೂರೈಕೆ ಮತ್ತು ನೈರ್ಮಲ್ಯ ಕಾಪಾಡಲು ಕಲ್ಯಾಣಿಗಳ ಪುನಶ್ಚೇತನ, ಚೆಕ್ಡ್ಯಾಮ್ ನಿರ್ಮಾಣ, ಹನಿನೀರಾವರಿ, ಕಡಿಮೆ ನೀರು ಬಳಕೆ ಕೃಷಿ ಪದ್ಧತಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ಆಗಮಿಸಿದ್ದ ನೋಡಲ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಬ್ಲಾಕ್ ರಾಷ್ಟ್ರಕ್ಕೆ ಮಾದರಿಯಾಗಿ ಕೆಲಸ ನಿರ್ವಹಿಸಿದ್ದು ಇದನ್ನು ಇತರೆ ರಾಜ್ಯದ ನೋಡಲ್ ಅಧಿಕಾರಿಗಳು ತಮ್ಮ ಬ್ಲಾಕ್ಗಳಲ್ಲಿ ಅನುಷ್ಠಾನಕ್ಕೆ ತರಲು ಶ್ರಮಿಸಬೇಕೆಂದು ತಿಳಿಸಿದರು.
ಮುಳಬಾಗಿಲು ತಾಲೂಕಿನ ಸಾಧನೆ: ಪೈಲೆಟ್ ಯೋಜನೆಗೆ ಆಯ್ಕೆಯಾಗಿರುವ ಮುಳಬಾಗಿಲು ಬ್ಲಾಕ್ನಲ್ಲಿ 42,413 ಕುಟುಂಬಗಳಿದ್ದು ಅದರಲ್ಲಿ 9,081 ಕುಟುಂಬಗಳು ಶೌಚಾಲಯವನ್ನು ಹೊಂದಿವೆ. ತಾಲೂಕಿನಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 26,643 ಅರ್ಜಿಗಳು ಬಂದಿದ್ದು ಅವುಗಳಲ್ಲಿ 4,070 ಶೌಚಾಲಯಗಳು ಪೂರ್ಣಗೊಂಡಿವೆ. ಇನ್ನು 1,732 ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ ಎಂದು ಜಿಪಂ ತಾಂತ್ರಿಕ ವಿಭಾಗದ ಕಾರ್ಯಪಾಲಕ ಅಭಿಯಂತರದೇವರಾಜ್ ಹಿರಿಯ ಅಧಿಕಾರಿಗಳಿಗೆ ಪವರ್ ಪ್ರಝಂಟೇಷನ್ ಮೂಲಕ ವಿವರಿಸಿದರು.
ಮುಳಬಾಗಿಲು ತಾಲೂಕಿನಲ್ಲಿ 134 ಕೆರೆಗಳ ಪುನರುಜ್ಜೀವನ, 41 ಕಲ್ಯಾಣಿಗಳು, 33 ನಾಲ ಬದುಗಳು, 48 ನೀರು ಮರುಪೂರಣ ಗುಣಿಗಳು, 32 ಚೆಕ್ಡ್ಯಾಂಗಳು, 114 ಕೃಷಿ ಹೊಂಡಗಳು, 294 ಹನಿ ನೀರಾವರಿ ಫಾರಂಗಳು, 4,440 ಮನೆಗಳಿಗೆ ನಲ್ಲಿ ನೀರು ಅಳವಡಿಕೆಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದರು. ಕೇಂದ್ರ ಸರ್ಕಾರದ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ನಿರ್ದೇಶಕ ಎಂ.ಎಂ. ಸಿಂಗ್, ರಾಷ್ಟ್ರೀಯ ನೋಡಲ್ ಅಧಿಕಾರಿ ಷಣ್ಮುಗ ಸುಂದರಂ, ನೀರು ಅಭಿವೃದ್ಧಿ ತಜ್ಞ ಮನೀಷ್ ಕುಮಾರ್, ನೀರು ಮತ್ತು ನೈರ್ಮಲ್ಯ ತಜ್ಞ ಸುಶೀಲ್ ಸ್ಯಾಮುಯಲ್, ನೈರ್ಮಲ್ಯ ತಜ್ಞ ಎಂ. ಕುಳ್ಳಪ್ಪ, ರಾಜ್ಯ ನೀರು ಮತ್ತು ನೈರ್ಮಲ್ಯ ನಿರ್ದೇಶಕ ನವೀನ್ ರಾಜ್ ಸಿಂಗ್, ರಾಜ್ಯ ಪಂಚಾಯತ್ರಾಜ್ ತಾಂತ್ರಿಕ ವಿಭಾಗದ ಮುಖ್ಯ ಎಂಜಿನಿಯರ್ ಜಗನ್ನಾಥ್ ರೆಡ್ಡಿ, ರಾಜ್ಯ ನೀರು ಮತ್ತು ನೈರ್ಮಲ್ಯ ಸಂಸ್ಥೆಯ ಹೆಚ್ಚುವರಿ ನಿರ್ದೇಶಕಿ ಮೀರಾ ನಾಗರಾಜ್, ರಾಜ್ಯ ನೋಡಲ್ ಅಧಿಕಾರಿ ಚಂದ್ರಶೇಖರ್ ಇದ್ದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರ್ ಉಲ್ಲಾ ಸ್ವಾಗತಿಸಿ ಮುಳಬಾಗಿಲು ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ದೆಹಲಿಯಿಂದ ಆಗಮಿಸಿದ್ದ ಅಧಿಕಾರಿಗಳ ಗಮನಕ್ಕೆ ತಂದರು. ಕಾರ್ಯಕ್ರಮದ ನಂತರ ಅಧಿಕಾರಿಗಳು ಮುಳಬಾಗಿಲು ತಾಲೂಕಿಗೆ ಭೇಟಿ ನೀಡಿ ಪೈಲೆಟ್ ಯೋಜನೆಯಡಿ ಆಗಿರುವ ಸಾಧನೆಯನ್ನು ತಿಳಿದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

