ಯಜಮಾನ್ರು ಇದ್ದಿದ್ದರೆ ಖುಷಿ ಪಡ್ತಿದ್ರು
ಕೋಲಾರ: ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ನ.8ರಿಂದ ಮತ್ತೆ ರೈಲು ಸಂಚಾರ ಆರಂಭವಾಗ್ತಿರೊ ವಿಷಯ ಕೇಳಿ ಸಂತೋಷವಾಯ್ತು. ಈ ಸಂದರ್ಭದಲ್ಲಿ ನಮ್ಮ ಯಜಮಾನ್ರು ಇದ್ದಿದ್ದರೆ ಖುಷಿ ಪಡ್ತಿದ್ರು ಎಂದು ದೊಡ್ಡ ರೈಲಿಗಾಗಿ ಹೋರಾಡಿದ ನಿವೃತ್ತ ರೇಲ್ವೆ ನೌಕರ ಮುನಿಸ್ವಾಮಿಯವರ ಪತ್ನಿ ರತ್ನಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು. ತಮ್ಮ ಮನೆಯಲ್ಲಿ ಗುರುವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಮನೆಯ ನಿರ್ವಹಣೆಗಾಗಿ ನಮ್ಮ ಯಜಮಾನ್ರು ತುಂಬ ಕಷ್ಟ ಪಟ್ಟಿದ್ದಾರೆ. ನಿವೃತ್ತಯಾದ ಮೇಲೆ ವಿಶ್ರಾಂತಿ ಪಡೆಯಲಿ ಎಂಬುದು ನನ್ನ ಆಸೆಯಾಗಿತ್ತು. ಆದರೆ, ಸಣ್ಣ ರೈಲು ನಿಂತಿದ್ದರಿಂದ ಬೇಸರ ಪಟ್ಟಿದ್ದ ಇವರು, ದೊಡ್ಡ ರೈಲಿಗಾಗಿ ಹಗಲು ಇರಳು ದುಡಿದಿದ್ದಾರೆಂದು ಗಂಡನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನನಗೆ ಮತ್ತು ಮಕ್ಕಳಿಗೆ ಹೋರಾಟ ಮಾಡೋದು ಇಷ್ಟವಿರಲಿಲ್ಲ. ಯಜಮಾನ್ರ ಆರೋಗ್ಯ ಬೇರೆ ಸರಿಯಿರಲಿಲ್ಲ, ಹಾಗಾಗಿ ಮನೆ ಬಿಟ್ಟು ಹೋಗದಂತೆ ಹೇಳ್ತಿದ್ದೀವಿ. ಆದರೂ ನಮಗೆ ಗೊತ್ತಿಲ್ಲದೆ ಹೊರಗೆ ಹೋಗಿ ಬಂದು ರಾತ್ರಿ ಊಟ ಮಾಡೋವಾಗ ಹೊರಗೆ ನಡೆದದ್ದನ್ನು ಹೇಳಿ ತಮ್ಮ ಸಿಟ್ಟು ಕರಗಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ಜಾಮೀನು ಕೊಡಿಸಲು ಸಹಕಾರ
ರೇಲ್ವೆ ಹೋರಾಟ ಸಂದರ್ಭದಲ್ಲಿ ಪೊಲೀಸರು ನಮ್ಮ ಮೇಲೆ ಕೇಸುಗಳನ್ನು ಹಾಕಿದ್ದರು. ಕೋಲಾರ ನ್ಯಾಯಾಲಯದಲ್ಲಿ ಜಾಮೀನು ಪಡೆಯಬೇಕಾಗಿತ್ತು. ನಮ್ಮ ಹೆಸರು ಕರೆಯುವುದಕ್ಕೆ ಕೊಂಚ ವಿಳಂಬವಾಗಿತ್ತು. ಟೀ ಕುಡಿಯಲೆಂದು ನ್ಯಾಯಾಲಯದಿಂದ ಹೊರಗಡೆಗೆ ಬಂದಿದ್ದಾಗ ನಮ್ಮ ಹೆಸರು ಕರೆದಿದ್ದರು. ನಾವು ಹಾಜರಾಗಲಿಲ್ಲವೆಂಬ ಸಿಟ್ಟಿನಿಂದ ನ್ಯಾಯಾಧೀಶರು ನಮ್ಮನ್ನು ಕಸ್ಟಡಿಗೆ ಕಳುಹಿಸುವಂತೆ ಆದೇಶಿಸಿದ್ದರು. ಆಗ ರೈತ ಮುಖಂಡರೂ ಆಗಿದ್ದ ಆರ್. ವೆಂಕಟರಾಮಯ್ಯ ಇನ್ನಿತರ ಹಿರಿಯ ವಕೀಲರು ನಮ್ಮ ಪರವಾಗಿ ನ್ಯಾಯಾಧೀಶರ ಬಳಿ ಹೋಗಿ ಕ್ಷಮೆಯಾಚಿಸಿದ್ದರಿಂದ ನ್ಯಾಯಾಧೀಶರು ಕಸ್ಟಡಿಗೆ ನೀಡಿದ್ದ ಆದೇಶ ಹಿಂದಕ್ಕೆ ಪಡೆದು ಜಾಮೀನು ಮುಂದುವರೆಸಿದ್ದರು ಎಂದು ರೇಲ್ವೆ ಹೋರಾಟ ಸಮಿತಿಯ ಮುಖಂಡರಲ್ಲಿ ಒಬ್ಬರಾದ ಎಂ.ಜಿ. ಪ್ರಭಾಕರ್ ತಮ್ಮ ಅನುಭವ ತಿಳಿಸಿದರು.
ರೇಲ್ವೆ ಹೋರಾಟಗಾರರಿಗೆ ವರ್ತಕರು, ಸಂಘ ಸಂಸ್ಥೆಗಳ ಮುಖಂಡರು ಬೆಂಬಲ ನೀಡಿದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ರೈಲಿಗಾಗಿ ಗ್ರಾಮೀಣ ಪ್ರದೇಶದ ಜನರು ಕೈಜೋಡಿಸಿದರು, ಸ್ವಂತ ಹಣದಿಂದ ಹೋರಾಟಕ್ಕೆ ಇಳಿಯುತ್ತಿದ್ದರು. ಪ್ರತಿಭಟನೆಗೆ ಕರೆ ನೀಡಿದ ಕೂಡಲೇ ತಮ್ಮ ಎಲ್ಲಾ ಕೆಲಸ ಕಾರ್ಯ ಬದಿಗಿಟ್ಟು ಬರುತ್ತಿದ್ದರು. ಹೋರಾಟದ ದಿಕ್ಕು ತಪ್ಪಿಸಲು ನಮ್ಮ ಮೇಲೆ ಕೆಲವರು ಇಲ್ಲಸಲ್ಲದ ಆರೋಪ, ಟೀಕೆ ಮಾಡುತ್ತಿದ್ದರಾದರೂ ಯಾವುದಕ್ಕೂ ಜಗ್ಗದೆ ಹೋರಾಟ ಮಾಡಿದ್ದೇವೆಂದು ಹಿಂದಿನ ಘಟನೆಗಳನ್ನು ಮೆಲಕು ಹಾಕಿದರು. ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್, ಹೋರಾಟಗಾರರ ಕನಸು ನನಸಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ರೈಲು ಯಾವುದೇ ಕಾರಣಕ್ಕೂ ನಿಲ್ಲಬಾರದು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಇಲಾಖೆಯವರು ವಿಶ್ವಾಸಕ್ಕೆ ಪಾತ್ರರಾಗಬೇಕೆಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

