ಇಂದು ಬ್ರಾಡ್ಗೇಜ್ ರೈಲು ಸಂಚಾರ ಉದ್ಘಾಟನೆ
ಕೋಲಾರ: ಸುಮಾರು 30 ವರ್ಷಗಳಿಂದ ಅಖಂಡ ಕೋಲಾರ ಜಿಲ್ಲೆಯ ಜನತೆ ನಿರೀಕ್ಷಿಸುತ್ತಿದ್ದ ಕೋಲಾರ-ಚಿಕ್ಕಬಳ್ಳಾಪುರ ಬ್ರಾಡ್ ಗೇಜ್ ರೈಲು ಮಾರ್ಗ ನ.8 ರ ಶುಕ್ರವಾರ ಲೋಕಾರ್ಪಣೆ ಆಗುತ್ತಿರುವುದರಿಂದ ಹೋರಾಟಗಾರರ ಕನಸು ನನಸಾಗುವಂತಾಗಿದೆ.
1912-13ನೇ ಇಸವಿಯಲ್ಲಿ ಅಖಂಡ ಕೋಲಾರ ಜಿಲ್ಲೆಯ ಪ್ರಜಾಪ್ರತಿನಿಧಿಗಳು ಆಗಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮೇಲೆ ಒತ್ತಡ ತಂದು ರೈಲು ಸೌಕರ್ಯ ಕೇಳಿದ್ದರು.
ಮಹಾರಾಜರು ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿದ ತಕ್ಷಣ ರೈತರು ಯಾವುದೇ ವಿರೋಧ ವ್ಯಕ್ತ ಪಡಿಸದೆ ಯೋಜನೆ ಅನುಷ್ಠಾನಕ್ಕೆ ತಮ್ಮ ಸ್ವಂತ ಭೂಮಿಯನ್ನು ಉಚಿತವಾಗಿ ನೀಡಿದರಲ್ಲದೆ, ರೈಲು ಮಾರ್ಗ ನಿರ್ಮಾಣಕ್ಕೆ ಕೈಲಾದಷ್ಟು ಹಣವನ್ನು ಕೊಡುವ ಮೂಲಕ ಔದಾರ್ಯವನ್ನು ತೋರಿದ್ದರು. ಪ್ರಾರಂಭದಲ್ಲಿ ಉಗಿಬಂಡಿಯನ್ನು ಪ್ರಯಾಣಿಕರ ಸೌಕರ್ಯಕ್ಕೆ ಒದಗಿಸಲಾಯಿತು. ಜೊತೆಗೆ ಸರಕು ಸಾಗಾಣೆಗಾಗಿ ವ್ಯಾಗೀನ್ ರೈಲನ್ನು ಓಡಿಸಲಾಯಿತು. ಆಗಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇರದಿದ್ದ ಪರಿಣಾಮ ರೈತರು, ಕೂಲಿ ಕಾರ್ಮಿಕರು, ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ರೈಲೇ ಆಧಾರವಾಗಿತ್ತು. 1970ರ ದಶಕದಲ್ಲಿ ಉಗಿ ಬಂಡಿಯ ಎಂಜನ್ ಆಗಾಗ ಕೈಕೊಡುತ್ತಿದ್ದರಿಂದ ದುರಸ್ತಿಗಾಗಿ ನಿಲ್ಲಿಸಲಾಗುತ್ತಿತ್ತು. ಉಗಿಬಂಡಿಯಿಂದ ಜನತೆಗೆ ಮತ್ತು ಇಲಾಖೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲವೆಂಬ ಕಾರಣಕ್ಕೆ 1979ರಲ್ಲಿ ರೈಲನ್ನು ನಿಲ್ಲಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದರು. ಇದರಿಂದ ಬೇಸತ್ತ ಆಗಿನ ಕೋಲಾರ ರೈಲು ನಿಲ್ದಾಣ ಕಚೇರಿಯ ಅಧಿಕಾರಿಗಳು ಬಡ ಪ್ರಯಾಣಿಕರ ಅನುಕೂಲಕ್ಕಾಗಿ ಮಹಾರಾಜರು ನೀಡಿರುವ ರೈಲು ಸೌಲಭ್ಯ ನಿಲ್ಲದಂತೆ ನೋಡಿಕೊಳ್ಳಿ ಎಂದು ರೈಲು ಪ್ರಯಾಣಿಕರಿಗೆ ಸಲಹೆ ನೀಡಿದ್ದರು.
ಆಗಿನ ರೈಲ್ವೆ ಅಧಿಕಾರಿ ಆಹದ್ ಎಂಬುವರು ತಮ್ಮ ಬಳಿ ಕೆಲಸ ಮಾಡುತ್ತಿದ್ದ ಮುನಿಸ್ವಾಮಿ ಅವರಿಗೆ ರೈಲು ನಿಲ್ಲದಂತೆ ತಾವು ಊರಿನ ಮುಖಂಡರೊಂದಿಗೆ ಮಾತನಾಡಿ ಎಂದು ಸಲಹೆ ನೀಡಿದ್ದರು. ಇದರಿಂದ ಪ್ರೇರಿತರಾದ ಮುನಿಸ್ವಾಮಿ ಹೇಗಾದರೂ ಮಾಡಿ ರೈಲನ್ನು ಉಳಿಸಿಕೊಳ್ಳಬೇಕೆಂದು ತಮಗೆ ಪರಿಚಯವಿದ್ದ ಪತ್ರಕರ್ತ ಎಂ.ಜಿ. ಪ್ರಭಾಕರ್ ಬಳಿ ವಿಷಯ ಮುಟ್ಟಿಸಿ ತಾನು ಅನಕ್ಷರಸ್ಥನಾಗಿದ್ದರಿಂದ ಪ್ರಭಾಕರ್ ಮೂಲಕ ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಆಗಿನ ರೈಲ್ವೆ ಸಚಿವರಿಗೆ ಪತ್ರ ಬರೆಸಿ ಹೋರಾಟಕ್ಕೆ ಎಂಜನ್ ಆದರಲ್ಲದೆ, ಹೋರಾಟಗಾರರನ್ನು ಡ್ರೈವರ್ಗಳನ್ನಾಗಿ ಉಪಯೋಗಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನ ಸೆಳೆಯುವಲ್ಲಿ ಸಫಲರಾದರು.
ವಾಟಾಳ್ ಹೋರಾಟ: ನ್ಯಾರೋಗೇಜ್ ರೈಲು ಮಾರ್ಗದಿಂದ ಇಲಾಖೆಗೆ ಲಾಭವಾಗುತ್ತಿಲ್ಲವೆಂಬ ನೆಪ ಹೇಳಿ ಸಣ್ಣ ರೈಲನ್ನು ನಿಲ್ಲಿಸಿದಾಗ ಇದೇ ಮುನಿಸ್ವಾಮಿ 1980ರಲ್ಲಿ ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ಬಳಿಗೆ ಎಂ.ಜಿ. ಪ್ರಭಾಕರ್ ಸೇರಿದಂತೆ ಅನೇಕರನ್ನು ಕರೆದೊಯ್ದು ಹೋರಾಟಕ್ಕೆ ಬರುವಂತೆ ಕೇಳಿಕೊಂಡಾಗ, ವಾಟಾಳ್ ನಾಗರಾಜ್ ಒಪ್ಪಿ ಕೋಲಾರ, ಬಂಗಾರಪೇಟೆ ಸೇರಿದಂತೆ ಅಖಂಡ ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಹೋಗಿ ಜನತೆಯೊಂದಿಗೆ ಪ್ರತಿಭಟನೆಗಳನ್ನು ನಡೆಸಿದರು.
ಹೋರಾಟ ನ್ಯಾಯ ಸಿಗುವ ತನಕ ನಿಲ್ಲಬಾರದೆಂಬ ಕಾರಣಕ್ಕೆ ನ್ಯಾರೋಗೇಜ್ ರೈಲು ಹೋರಾಟ ಕ್ರಿಯಾ ಸಮಿತಿಯನ್ನು ರಚಿಸಲಾಯಿತು, ಜಿಲ್ಲೆಯಾದ್ಯಂತ ಸಮಿತಿಗಳನ್ನು ರಚಿಸಿ ಹೋರಾಟದ ಕಿಚ್ಚು ಎಲ್ಲೆಡೆ ಹಬ್ಬುವಂತೆ ಮಾಡಲಾಯಿತು.
ಜನಪ್ರತಿನಿಧಿಗಳಿಗೆ ಹೋರಾಟದಲ್ಲಿ ನೇರವಾಗಿ ಭಾಗವಹಿಸಲು ರಾಜಕಾರಣ ಅಡ್ಡಿಯಾಗಿದ್ದರಿಂದ ಹೋರಾಟಗಾರರ ಹಿಂದೆ ನಿಂತು ಬೆಂಬಲ ಸೂಚಿಸುತ್ತಿದ್ದರು. ನ್ಯಾರೋಗೇಜ್ ರೈಲು ನಿಲ್ಲಿಸಬಾರದು, ಒಂದು ವೇಳೆ ಸಣ್ಣ ರೈಲು ನಿಲ್ಲಿಸಿದಲ್ಲಿ ಇದಕ್ಕೆ ಪರ್ಯಾಯವಾಗಿ ಬ್ರಾಡ್ ಗೇಜ್ ಮಾರ್ಗ ಕಲ್ಪಿಸಿ ದೊಡ್ಡ ರೈಲನ್ನು ಓಡಿಸಬೇಕೆಂದು ಪ್ರತಿಭಟನೆಗಳನ್ನು ಜಿಲ್ಲೆಗೆ ವ್ಯಾಪಿಸಲಾಯಿತು. ಬಂಗಾರಪೇಟೆಯ ರೈಲು ನಿಲ್ದಾಣದಲ್ಲಿ ಬೆಂಗಳೂರು-ಮದ್ರಾಸ್ ಮಾರ್ಗದ ಬೃಂದಾವನ ರೈಲನ್ನು ತಡೆದು ಪ್ರತಿಭಟಟಿಸಿದ್ದರಿಂದ ರೈಲ್ವೆ ಪೊಲೀಸರು ಮುನಿಸ್ವಾಮಿ, ಎಂ.ಜಿ. ಪ್ರಭಾಕರ್, ವಾಟಾಳ್ ನಾಗರಾಜು, ರಂಗರಾಮಯ್ಯ, ಗೋಪಿ, ಸಂಸದ ಡಾ. ವೆಂಕಟೇಶ್ ಸೇರಿದಂತೆ ನೂರಾರು ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಬೇಡಿಕೆ ಈಡೇರಿರಲಿಲ್ಲ: 1980ರ ಲ್ಲಿ ರೈಲು ಮಂತ್ರಿ ಆಗಿದ್ದ ಟಿ.ಎ.ಪೈ ಅವರಿಗೆ ಹೋರಾಟಗಾರರು ಮನವಿ ಪತ್ರ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರು. ಭರವಸೆ ನೀಡಿದ್ದ ಸಚಿವರು ತೀರಿಕೊಂಡಿದ್ದರಿಂದ ಕನಸು ನನಸಾಗಲಿಲ್ಲ. ಈ ಮಧ್ಯೆ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಸಂಸದರಿಗೆ ಸಂಸತ್ನಲ್ಲಿ ದನಿ ಎತ್ತಿ ನ್ಯಾಯ ಕೊಡಿಸುವಂತೆ ಕೋರಿದರೂ ಪ್ರಯೋಜನಾಗಿರಲಿಲ್ಲ.
ಕೇಂದ್ರದಲ್ಲಿ ರೇಲ್ವೆ ಸಚಿವರಾಗಿದ್ದ ನಮ್ಮ ರಾಜ್ಯದವರೇ ಆದ ಜಾಫರ್ ಷರೀಪ್ ಅವರು ಕೋಲಾರ-ಚಿಕ್ಕಬಳ್ಳಾಪುರ ರೈಲು ನಿಲುಡೆ ಆಗಿರುವುದರಿಂದ ನ್ಯಾರೋಗೇಜ್ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಿ ದೊಡ್ಡ ಓಡಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರಿಂದ ಆಸೆ ಈಡೇರಲಿಲ್ಲ. ಈ ನಡುವೆ ರೇಲ್ವೆ ಇಲಾಖೆ ಅಧಿಕಾರಿಗಳು 1993-94ರಲ್ಲಿ ಕೋಲಾರ ರೈಲು ಮಾರ್ಗದಲ್ಲಿನ ಹಳಿ(ಕಂಬಿ)ಗಳನ್ನು ತೆರವುಗೊಳಿಸಲು ಯತ್ನಿಸಿದಾಗ ವಿಷಯ ತಿಳಿದ ಹೋರಾಟಗಾರರು ತೀವ್ರವಾಗಿ ಪ್ರತಿಭಟಿಸಿದ್ದರಿಂದ ಅಧಿಕಾರಿಗಳು ವಾಪಸ್ ಹೋಗುವಂತಾಯಿತು. 1995ರಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದಿದ್ದಲ್ಲಿ ಪ್ರತಿ ಕಿಮೀಗೆ ಕೇವಲ 50 ಲಕ್ಷ ರು. ಖರ್ಚು ಆಗುತ್ತಿತ್ತು. ಜಾರ್ಜ್ ಫೆರ್ನಾಂಡಿಸ್ ರೈಲು ಮಂತ್ರಿ ಆಗಿದ್ದಾಗ ಪ್ರಾರಂಭಿಸಿದ ಕೊಂಕಣ ರೈಲು ಮಾರ್ಗದ 450 ಕಿಮೀ ಕಾಮಗಾರಿಯನ್ನು ಕೇವಲ 5 ವರ್ಷದಲ್ಲಿ ಮುಗಿಸಿ ರೈಲು ಓಡಿಸಿದ್ದರೆ 99.5 ಕಿಮೀ ವ್ಯಾಪಿಯ ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗಕ್ಕೆ 18 ವರ್ಷ ತೆಗೆದುಕೊಂಡಿರುವುದಲ್ಲದೆ, 400 ರಿಂದ 450 ಕೋಟಿ ರು.ವೆಚ್ಚ ಮಾಡಿರುವುದು ಸರಿಯಲ್ಲವೆಂದು ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

