ದೇವಾಲಯಕ್ಕೆ ಬೀಗ: ಅರ್ಚಕರಿಗೆ ನೋಟಿಸ್
ಗುಡಿಬಂಡೆ: ತಸ್ತೀಕ್ ಹಣ ಪಾವತಿ ವಿಳಂಬದ ಹಿನ್ನೆಲೆಯಲ್ಲಿ ತಾಲೂಕಿನ ಸೋಮೇನಹಳ್ಳಿಯ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯಕ್ಕೆ ಅರ್ಚಕರು ಬೀಗ ಹಾಕಿ ಪ್ರತಿಭಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಜರಾಯಿ ಇಲಾಖೆ ಅರ್ಚಕರಿಗೆ ನೋಟಿಸ್ ಜಾರಿ ಮಾಡಲು ಮುಂದಾಗಿದೆ. ಇಲಾಖೆ ತನಗೆ ಯಾವುದೇ ತಸ್ತೀಕ್ ಹಣ ನೀಡಿಲ್ಲವೆಂದು ಆರೋಪಿಸಿ ಬುಧವಾರ ದೇವಾಲಯದಲ್ಲಿ ಪೂಜೆ ಸ್ಥಗಿತಗೊಳಿಸಿ ಬೀಗ ಹಾಕಿ ಗ್ರಾಮದ ನಾಡ ಕಚೇರಿ ಅಧಿಕಾರಿ ಬಳಿ ತೆರಳಿ ಬೀಗದ ಕೈಯನ್ನು ತೆಗೆದುಕೊಳ್ಳುವಂತೆ ಹೇಳಿದರು ಎನ್ನಲಾಗಿದೆ. ಆದರೆ ಅಧಿಕಾರಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ತಮಗಿಲ್ಲವೆಂದು ತಿಳಿಸಿದ್ದರಿಂದ ಅರ್ಚಕ ದೇವಾಲಯದ ಬಳಿ ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಶಾಸಕ ಎಸ್.ಎನ್. ಸುಬ್ಬಾರೆಡ್ಡಿಯವರಿಗೆ ಸುದ್ದಿ ಮುಟ್ಟಿಸಿದಾಗ ಶಾಸಕರು ದೂರವಾಣಿ ಮೂಲಕ ಅರ್ಚಕರನ್ನು ಸಮಾಧಾನ ಪಡಿಸಿ ಸಮಸ್ಯೆ ಪರಿಸಹರಿಸುವ ಭರವಸೆ ನೀಡಿದರು ಎನ್ನಲಾಗಿದೆ.
ಅಧಿಕಾರಿ ಹೇಳಿದ್ದು: ದೇವಾಲಯ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಸರ್ಕಾರದ ಆಸ್ತಿ. ಹೀಗಾಗಿ ದೇವಾಲಯಕ್ಕೆ ಬೀಗ ಹಾಕಿರುವುದು ನಿಯಮಗಳ ಪ್ರಕಾರ ಕಾನೂನು ಬಾಹಿರ. ಅರ್ಚಕರ ನೇಮಕಾತಿ ಆದೇಶ 30 ಮೇ 2013 ರಿಂದ ಜಾರಿಯಲ್ಲಿದ್ದು, ನಿಯಮಗಳ ಪ್ರಕಾರ ಅಂದಿನಿಂದ ಸಂಬಳ ನೀಡಲು ಸಾಧ್ಯ ಹಾಗೂ ಕಾನೂನು ಉಲ್ಲಂಘಿಸಿ ದೇವಾಲಯಕ್ಕೆ ಬೀಗ ಹಾಕಿದ ವಿಚಾರಕ್ಕೆ ಸಂಬಂಧಪಟ್ಟಂತೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಅರ್ಚಕರಿಗೆ ನೋಟಿಸ್ ಜಾರಿ ಮಾಡಲಾಗುವುದೆಂದು ತಹಸೀಲ್ದಾರ್ ಶೈಲಜಾ ತಿಳಿಸಿದ್ದಾರೆ.
ಕೌಟುಂಬಿಕ ಕಲಹ; ಗೃಹಣಿ ಸಾವು
ಬಂಗಾರಪೇಟೆ: ಪತಿ ಮತ್ತು ಪತ್ನಿಯರ ನಡುವೆ ಕೌಟಂಬಿಕ ಕಲಹ ಹಿನ್ನೆಲೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಪತ್ನಿ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪಟ್ಟಣದ ಎಂಎಲ್ಎ ಬಡಾವಣೆಯ ನಿವಾಸಿ ಪುಂಡಲಿಕ ವಾರದ್ ಎಂಬವರ ಪತ್ನಿ ಸುವರ್ಣವಾರದ್ (28) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸುವರ್ಣವಾರದ್ ಗುಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದರು.ಪತಿ ಹೊಸಕೋಟೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು, ಮದುವೆಯಾದಾಗಿನಿಂದಲೂ ಇಬ್ಬರ ನಡುವೆ ಸಾಮರಸ್ಯವಿರಲಿಲ್ಲ ಎನ್ನಲಾಗಿದೆ. ಈ ಸಂಬಂಧ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು,ಬುಧವಾರ ರಾತ್ರಿ ಬೆಂಕಿ ಹಚ್ಚಿಕೊಂಡಿದ್ದಳು ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಮರಳು; 7 ಲಾರಿಗಳ ವಶ
ಶ್ರೀನಿವಾಸಪುರ: ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮರುಳುದಂಧೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಿದ್ದರೂ ಶ್ರೀನಿವಾಸಪುರದ ಪೊಲೀಸರ ಕುಮ್ಮಕ್ಕಿನಿಂದ ರಾಜಾರೋಷವಾಗಿ ನಡೆಯುತ್ತಿದ್ದ ಮರುಳು ಸಾಗಾಣಿಕೆಯ 7 ಲಾರಿಗಳನ್ನು ವಶಪಡಿಸಿಕೊಂಡು ಮರುಳನ್ನು ಪಿಡಬ್ಲ್ಯೂಡಿ ಇಲಾಖೆ ವಶಕ್ಕೆ ನೀಡಿದ್ದಾರೆ. ಮರುಳು ದಂಧೆಯಲ್ಲಿ ತಾಲೂಕಿನ ರಾಜಕಾರಣಿಗಳು, ಪೊಲೀಸರು ಹಾಗೂ ಬಲಾಢ್ಯರು ಶಾಮೀಲಾಗಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲಾಧಿಕಾರಿಗಳ ಒತ್ತಡಕ್ಕೆ ಮಣಿದ ತಾಲೂಕು ದಂಡಾಧಿಕಾರಿಗಳು ಸಾರ್ವಜನಿಕರ ಸಹಕಾರದಿಂದ 7 ಮರುಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜೆಡಿಎಸ್ ತೊರೆದು ವರ್ತೂರ್ ಬಣಕ್ಕೆ ಸೇರ್ಪಡೆ
ಕೋಲಾರ: ತಾಲೂಕಿನ ದೊಡ್ಡಹಸಳ ಗ್ರಾಪಂ ವ್ಯಾಪ್ತಿಯ ಕೆಲ ಮುಖಂಡರು ಬುಧವಾರ ಜೆಡಿಎಸ್ ತೊರೆದು ಶಾಸಕ ವರ್ತ್ತೂರು ಪ್ರಕಾಶ್ ಬಣಕ್ಕೆ ಸೇರ್ಪಡೆಗೊಂಡರು. ಚನ್ನಪ್ಪನವರ ನಾರಾಯಣಪ್ಪ, ವೆಂಕಟರಾಂ, ರಾಮಾಂಜಿ, ಕನ್ನಡಪ್ಪ, ಕಿಟ್ಟಪ್ಪ, ರಾಮಣ್ಣ, ದೋಬಿ ಕೃಷ್ಣಪ್ಪ, ಅಶ್ವಥಪ್ಪ ಮತ್ತಿತರರು ಜೆಡಿಎಸ್ ತೊರೆದು ವರ್ತೂರು ಬಣಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಹಾಲಿ ಅಧ್ಯಕ್ಷೆ ಮಂಜುಳಾ ಗಂಗರಾಜ್, ಉಪಾಧ್ಯಕ್ಷ ರಘು, ಮಂಜುನಾಥ್, ರಾಮಪ್ಪ, ಮುಳವಾಗಿಲಪ್ಪ, ಚಿಕ್ಕಮುನಿಯಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

