ಉಪನಗರವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ನ. 8
ರಾಜ್ಯ ರಾಜಧಾನಿ ಬೆಂಗಳೂರಿಗೆ ಪೂರಕವಾಗಿ ಚಿಕ್ಕಬಳ್ಳಾಪುರವನ್ನು ನೋಯಿಡಾ ನಗರದ ಮಾದರಿಯಲ್ಲಿ ಉಪ ನಗರವನ್ನಾಗಿ (ಸ್ಯಾಟಿಲೇಟ್ ಸಿಟಿ) ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.
ನಗರದ ನಂದಿ ರಂಗಮಂದಿರದಲ್ಲಿ ನೂತನ ಚಿಕ್ಕಬಳ್ಳಾಪುರ-ಕೋಲಾರ ರೈಲು ಸಂಚಾರಕ್ಕೆ ಚಾಲನೆ ನೀಡಿದ ಅವರು, ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಗಿ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದು ಜನರ ಮೇಲೆ ಬೀಳುತ್ತಿರುವ ಈ ಒತ್ತಡವನ್ನು ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ತಮ್ಮ ಗಮನದಲ್ಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರವನ್ನು ನಗರವನ್ನು ವಿಶೇಷ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.
ದಲಿತರಿಗೆ ಪುನರ್ವಸತಿ: ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಚಾಮರಾಜಪೇಟೆಯ ಅಂಬೇಡ್ಕರ್ ಕಾಲೋನಿಯಲ್ಲಿ ವಾಸವಾಗಿರುವ ನಿವಾಸಿಗಳನ್ನು ರೈಲ್ವೆ ನಿಲ್ದಾಣ ವಿಸ್ತರಣೆಗೆ ಒಕ್ಕಲೆಬ್ಬಿಸಲಾಗುತ್ತಿದೆ. ಅನೇಕ ವರ್ಷಗಳಿಂದ ವಾಸ ಮಾಡಿಕೊಂಡು ಬಂದಿರುವ ಈ ಜನರನ್ನು ಬೀದಿಪಾಲು ಮಾಡುವುದಿಲ್ಲ. ಈಗಾಗಲೇ ಜಿಲ್ಲಾಡಳಿತ ಸುಮಾರು 218 ಕ್ಕೂ ಹೆಚ್ಚು ಇಲ್ಲಿನ ಕುಟುಂಬಗಳಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸಲು 13 ಎಕರೆ ಜಾಗವನ್ನು ಗುರುತಿಸಿದೆ. ಇನ್ನೂ ಅಗತ್ಯವಿದ್ದರೆ ಜಾಗವನ್ನು ಗುರುತಿಸಲಾಗುವುದಲ್ಲದೇ ಮೂಲ ಸೌಕರ್ಯಗಳೊಂದಿಗೆ 30 ಕೋಟಿ ರು. ವೆಚ್ಚದಲ್ಲಿ ಕಾಲೋನಿಯ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಕೊಡಲಿದ್ದು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸರ್.ಎಂ.ವಿ.ಎಕ್ಸ್ ಪ್ರೆಸ್ ರೈಲಿಗಾಗಿ ಮನವಿ: ಮೈಸೂರು ಸಾಮ್ರಾಜ್ಯ ಆಡಳಿತದಲ್ಲಿ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ರಾಜ್ಯದ ರೈಲ್ವೆ ಅಭಿವೃದ್ಧಿಗೆ ತುಂಬಾ ಶ್ರಮಿಸಿದರು. ಇವರ ನೆನೆಪಿನಾರ್ಥ ಚಿಕ್ಕಬಳ್ಳಾಪುರದಿಂದ ಮೈಸೂರಿಗೆ ಹೊಸ ರೈಲನ್ನು ಪ್ರಾರಂಭಿಸಬೇಕು. ರೈಲಿಗೆ ಸರ್.ಎಂ.ವಿ. ಎಕ್ಸ್ಪ್ರೆಸ್ ಎಂಬ ಹೆಸರು ನಾಮಕರಣ ಮಾಡಬೇಕೆಂದು ಶಾಸಕ ಕೆ. ಸುಧಾಕರ್ ಒತ್ತಾಯಿಸಿದರು.
ಚಿಕ್ಕಬಳ್ಳಾಪುರ-ಕೋಲಾರ ರೈಲು ಸಂಚಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ರೈಲು ನಿಲ್ದಾಣ ಮತ್ತಷ್ಟು ಅಭಿವೃದ್ಧಿಯನ್ನು ಕಂಡು ಹೆಚ್ಚಿಗೆ ರೈಲ್ವೆ ಸೌಲಭ್ಯಗಳು ಜನರಿಗೆ ದೊರೆಯಬೇಕಾಗಿದೆ. ಈ ಭಾಗದಲ್ಲಿ ಜನಿಸಿದಂತಹ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ತಮ್ಮ ದೂರದೃಷ್ಟಿಯಿಂದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಚಿಕ್ಕಬಳ್ಳಾಪುರದ ಜನರಿಗೆ ರೈಲ್ವೆ ಸೌಲಭ್ಯ ಸಿಗುವಂತೆ ಮಾಡಿದ್ದರು. ಇದು ಮಾತ್ರವಲ್ಲದೇ ಅವರು ನೀಡಿದ ಅನೇಕ ಕೊಡುಗೆಗಳು ಮಾದರಿಯಾಗಿವೆ. ಈ ನಿಟ್ಟಿನಲ್ಲಿ ಅವರಿಗೆ ಗೌರವ ಸೂಚಿಸಲು ಸರ್.ಎಂ.ವಿ. ಎಕ್ಸ್ಪ್ರೆಸ್ ರೈಲು ಇರುವಂತೆ ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವರನ್ನು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ನಗರ ಜಿಲ್ಲಾ ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ತೀರಾ ಸೊರಗಿದೆ. ಯಾವುದೇ ರಸ್ತೆಗಳು, ಚರಂಡಿಗಳು ಸರಿಯಾಗಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದ ಜನರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಫ್ಲೋರೈಡ್ ನೀರಿನ ಸಮಸ್ಯೆಯೂ ಕಾಡುತ್ತಿದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣಲು ಮಾದರಿ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

