ಕಾಮಗಾರಿಗಳ ತ್ವರಿತ ಮುಗಿಸಲು ಆದ್ಯತೆ
ಚಿಕ್ಕಬಳ್ಳಾಪುರ: ಈಗಾಗಲೇ ರಾಜ್ಯದಲ್ಲಿ 10 ಸಾವಿರ ಕೋಟಿ ರು.ವೆಚ್ಚದಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಆದ್ಯತೆ ಕೊಡುವುದಲ್ಲದೇ ಹೊಸ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರದಿಂದ ರೈಲ್ವೆ ಇಲಾಖೆ ಬಯಸುವ ಅನುದಾನ, ಭೂಮಿಯನ್ನು ಸಕಾಲಕ್ಕೆ ಕೊಟ್ಟು ಅಭಿವೃದ್ಧಿಗೆ ಸಹಕರಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.
ನಗರದ ನಂದಿ ರಂಗಮಂದಿರದಲ್ಲಿ ನೈರುತ್ಯ ರೈಲ್ವೆ ವತಿಯಿಂದ ಆಯೋಜಿಸಿದ್ದ ನೂತನ ಚಿಕ್ಕಬಳ್ಳಾಪುರ-ಕೋಲಾರ ಬ್ರಾಡ್ ಗೇಜ್ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ತಮ್ಮ ರಾಜ್ಯದವರೇ ಹೆಚ್ಚಿಗೆ ಕೇಂದ್ರ ರೈಲ್ವೆ ಸಚಿವರಾಗಿ ಜವಾಬ್ದಾರಿಯನ್ನು ನಿರ್ವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಆದರೂ ರಾಜ್ಯ ರೈಲ್ವೆ ಅಭಿವೃದ್ಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆಯಾಗಿಲ್ಲ. ಇನ್ನೂ ಅಭಿವೃದ್ಧಿಯನ್ನು ಕಾಣಬೇಕಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ಪುಟ್ಟಪರ್ತಿ ಮಾರ್ಗವಾಗಿ ಬ್ರಾಡ್ ಗೇಜ್ ರೈಲು ಹಳಿ ನಿರ್ಮಾಣಕ್ಕಾಗಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು ಹಿಂದಿನ ಬಜೆಟ್ನಲ್ಲಿ ತಿಳಿಸಿದ್ದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಬಯಸುವ ಎಲ್ಲಾ ರೀತಿಯ ಸಹಕಾರ ನೀಡಿ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದು ತಿಳಿಸಿದರು.
ಭೂ ಸ್ವಾಧೀನ ಮಾಡಿ ಸ್ವಾಮಿ: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದಲ್ಲಿ ರೈಲ್ವೆ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಇಲ್ಲಿನ ಸರ್ಕಾರ ಅಗತ್ಯವಿರುವ ಭೂಮಿಯನ್ನು ನೀಡಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕು. ಅಗತ್ಯವಿರುವ ಜಾಗವನ್ನು ಕೊಡದಿದ್ದರೆ ಕೇಂದ್ರ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಸ್ವಾಮಿ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.
218 ಕ್ಕೂ ಹೆಚ್ಚು ಯೋಜನೆ: ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರೈಲ್ವೆ ಯೋಜನೆಗಳ ಕುರಿತು ಹೊಸ ಪ್ರಸ್ತಾಪಗಳು ಬರುತ್ತಲೆ ಇವೆ. ಕಳೆದ ಬಜೆಟ್ ಸಂದರ್ಭದಲ್ಲಿ ಹೊಸ ಹಳಿ ನಿರ್ಮಾಣ, ಹೊಸ ರೈಲು ಸಂಚಾರ ಪ್ರಾರಂಭ ಸೇರಿದಂತೆ ಸುಮಾರು 218 ಕ್ಕೂ ಹೆಚ್ಚು ಯೋಜನೆಗಳನ್ನು ಸೇರಿಸಲು ಒತ್ತಾಯ ಕೇಳಿ ಬಂದಿತ್ತು. ಆದರೆ, ಕೇಳಿದೆನ್ನೆಲ್ಲಾ ಕೊಡಲು ಸಾಧ್ಯವಿಲ್ಲ. ಒಂದು ವೇಳೆ ಕೊಡಬೇಕಾದರೆ ಸುಮಾರು 1 ಲಕ್ಷ 78 ಸಾವಿರ ಕೋಟಿ ರು.ಬೇಕಾಗುತ್ತದೆ ಎಂದ ಅವರು, ರಾಜ್ಯದಲ್ಲಿ 14 ಹೊಸ ಯೋಜನೆಗಳು ಬಾಕಿ ಇದ್ದು ಇದಕ್ಕಾಗಿ ಭೂ ಸ್ವಾಧೀನ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಪೆಟ್ರೋಲಿಯಂ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ಬಾಗೇಪಲ್ಲಿ-ಪುಟ್ಟಪರ್ತಿ ಮಾರ್ಗದ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಕೇಂದ್ರ ರೈಲ್ವೆ ಸಚಿವರನ್ನು ಕೋರಿದರು. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೋಟೆಯಲ್ಲಿ ಡಿ.ವಿ. ಗುಂಡಪ್ಪ ವಿಶ್ವವಿದ್ಯಾನಿಲಯಕ್ಕೆ 200 ಎಕರೆ ಮೀಸಲಿಟ್ಟಿದ್ದು ಆದಷ್ಟು ಬೇಗ ಶಂಕುಸ್ಥಾಪನಾ ಕಾರ್ಯವನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆಯ ಉಪ ಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಶಾಸಕರಾದ ಕೆ. ಸುಧಾಕರ್, ಎ.ಎನ್. ಸುಬ್ಬಾರೆಡ್ಡಿ, ಜೆ.ಕೆ. ಕೃಷ್ಣಾರೆಡ್ಡಿ, ಎಂ. ರಾಜಣ್ಣ, ವಿಪ ಸದಸ್ಯರಾದ ವೈ.ಎ. ನಾರಾಯಣ್ವಾಮಿ, ನಜೀರ್ ಅಹಮದ್, ನೈರುತ್ಯ ರೈಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕ ಮಿತಲ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

