ರೈತರಿಗೆ ತಂಗುದಾಣ ನಿರ್ಮಾಣಕ್ಕೆ ಅನುಮೋದನೆ
ಕೋಲಾರ: ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೇರೆಡೆಯಿಂದ ಬರುವ ರೈತರಿಗೆ ಮತ್ತು ಜಾನುವಾರುಗಳಿಗೆ ವಿಶ್ರಾಂತಿ ಪಡೆಯಲು ಎಪಿಎಂಸಿಗೆ ಸೇರಿದ ಜಾಗದಲ್ಲಿ ತಂಗುದಾಣ ನಿರ್ಮಿಸಲು ಎಪಿಎಂಸಿಯ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಕೊಳ್ಳಲಾಗಿದೆ.
ಕೋಲಾರದ ಎಪಿಎಂಸಿ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷೆ ಕೆ.ಆರ್. ರಾಜೇಶ್ವರಿ ಹರೀಶ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಪಿಎಂಸಿ ವ್ಯಪಾರ-ವಹಿವಾಟಿಗಾಗಿ ಬರುವ ರೈತರು ಮತ್ತು ತರಕಾರಿ, ಹಣ್ಣು ಹಾಗೂ ಇನ್ನಿತರೆ ಪದಾರ್ಥಗಳನ್ನು ಸಾಗಾಣೆ ಮಾಡಲು ಉಪಯೋಗಿಸುವ ಜಾನುವಾರುಗಳಿಗೆ ವಿಶ್ರಾಂತಿ ಪಡೆಯಲು ತಂಗುದಾಣದ ಅವಶ್ಯಕತೆ ಇದೆ ಎಂದು ಆಡಳಿತ ಮಂಡಳಿಯ ಸದಸ್ಯರು ನೀಡಿದ ಸಲಹೆಯನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿ ನಿರ್ಣಣ ಕೊಂಡಿದೆ.
ಆಹಾರ ಧಾನ್ಯಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಗೋದಾಮುಗಳ ಪರಿಶೀಲನೆ ಮಾಡುವುದೂ ಸೇರಿದಂತೆ, ಮಾರುಕಟ್ಟೆಯಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿಕಾಮಗಾರಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಕೋಲಾರ ನಗರ ವ್ಯಾಪ್ತಿಯ ದೊಡ್ಡಪೇಟೆ, ಪ್ರಧಾನ ಅಂಚೆ ಕಚೇರಿ ರಸ್ತೆ, ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಐವತ್ತಕ್ಕೂ ಹೆಚ್ಚು ಅಕ್ರಮ ಗೋದಾಮುಗಳಿವೆ. ಇಲ್ಲಿ ಕಾನೂನು ಬಾಹಿರವಾಗಿ ವಿವಿಧ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಕೊಟ್ಟಿರುವ ದೂರಿನ ಬಗ್ಗೆ ಇಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಇಂತಹ ಗೋದಾಮುಗಳ ಪರಿಶೀಲನೆ ಮಾಡಿ ಲೋಪ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಯಿತು.
ಕೋಲಾರ ನಗರ ವ್ಯಾಪ್ತಿಯಲ್ಲಿ ಚಿಲ್ಲರೆ ವರ್ತಕರು ನಿಗದಿತ ಪ್ರಮಾಣದ ಆಹಾರ ಧಾನ್ಯಗಳನ್ನು ಇಟ್ಟುಕೊಂಡು ಮಾರಾಟ ಮಾಡಬಹುದು. ಯಾವುದೇ ದೊಡ್ಡ ಪ್ರಮಾಣದ ಗೋದಾಮುಗಳನ್ನು ನಗರದಲ್ಲಿ ಇರಿಸಿಕೊಳ್ಳಲು ಎಪಿಎಂಸಿ ಕಡೆಯಿಂದ ಯಾರಿಗೂ ಅನುಮತಿಯನ್ನು ಕೊಟ್ಟಿಲ್ಲ. ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳ ಶೇಖರಣೆಯನ್ನು ಎಪಿಎಂಸಿ ಆವರಣದಲ್ಲಿನಲ್ಲಿ ಪರವಾನಗಿ ಹೊಂದಿರುವ ಗೋದಾಮುಗಳಲ್ಲೇ ಮಾಡಬೇಕೆಂಬ ನಿಯಮವಿದೆ. ಆದರೂ ಕೆಲ ವರ್ತಕರು ಕೋಲಾರ ನಗರದಲ್ಲೇ ಗೋದಾಮುಗಳಲ್ಲಿ ಅಹಾರ ಧಾನ್ಯಗಳನ್ನು ಅಕ್ರಮವಾಗಿ ಇರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆಂದು ದೂರುಗಳು ಬಂದಿರುವ ಹಿನ್ನಲೆಯಲ್ಲಿ ಗೋದಾಮುಗಳ ಪರಿಶೀಲನೆ ನಡೆಸುವುದು ಅನಿವಾರ್ಯ ಎಂದು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೇಂದ್ರ ಸರ್ಕಾರದ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಎಸ್.ಸಿ. ಪಿ ಯೋಜನೆಯ ಅಡಿಯಲ್ಲಿ 22 ಲಕ್ಷ ರುಪಾಯಿಗಳ ವೆಚ್ಚದಲ್ಲಿ 100 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಗೋದಾಮುಗಳನ್ನು ನಿರ್ಮಿಸುವುದು ಮತ್ತು ಟಿ.ಎಸ್.ಪಿ ಯೋಜನೆಯ ಅಡಿಯಲ್ಲಿ 11ಲಕ್ಷ ರುಪಾಯಿ ವೆಚ್ಚದಲ್ಲಿ ಅಷ್ಟೇ ಸಾಮರ್ಥ್ಯದ ಒಂದು ಗೋದಾಮನ್ನು ನಿರ್ಮಿಸುವುದಕ್ಕೆ ನಿರ್ಣಯವನ್ನು ಕೈಗೊಳ್ಳಲಾಯಿತಲ್ಲದೆ, 50 ಲಕ್ಷ ರುಪಾಯಿ ವೆಚ್ಚದಲ್ಲಿ ಮುಚ್ಚಿದ ಹರಾಜು ಕಟ್ಟೆಯ ನಿರ್ಮಾಣ ಮಾಡುವುದಕ್ಕೂ ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.
ಎಪಿಎಂಸಿ ಅನುದಾನದಲ್ಲಿ 1.10 ಕೋಟಿ ರು.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು, ಗೋದಾಮುಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು ಶ್ರಮಿಕರ ಭವನಕ್ಕೆ 15 ಲಕ್ಷ ರು.ವೆಚ್ಚಕ್ಕೆ, ಜಾನುವಾರುಗಳ ಶೆಡ್ಗೆ 5 ಲಕ್ಷ, ಸಿಮೆಂಟ್ ರಸ್ತೆಗಳಿಗೆ 40 ಲಕ್ಷ, ಸಭಾಂಗಣ ನಿರ್ಮಾಣಕ್ಕಾಗಿ 25 ಲಕ್ಷ, ಮಾರುಕಟ್ಟೆಯ ಮೂರು ಕಡೆ ಕಮಾನುಗಳ ನಿರ್ಮಾಣಕ್ಕಾಗಿ 10 ಲಕ್ಷ ರು. ನೀಡಲು ಸಭೆಯು ಸಮ್ಮತಿಸಿತು. ಸಭೆಯಲ್ಲಿ ಎಪಿಎಂಸಿ ಸದಸ್ಯರು, ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

