ಬಂಗಾರಪೇಟೆಯವರೆಗೆ ವಿಸ್ತರಿಸಲು ಸಮ್ಮತಿ
ಕೋಲಾರ: ಬೆಂಗಳೂರಿನಿಂದ ಹೊರಟು ಚಿಕ್ಕಬಳ್ಳಾಪುರ ಮೂಲಕ ಕೋಲಾರ ತಲುಪುವ ಹೊಸ ಪ್ಯಾಸೆಂಜರ್ ರೈಲನ್ನು ಬಂಗಾರಪೇಟೆಯವರೆಗೆ ವಿಸ್ತರಣೆ ಮಾಡಲು ಸಮ್ಮತಿಸುವುದಾಗಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನಖರ್ಗೆ ತಿಳಿಸಿದರು.
ಅವರು ಶುಕ್ರವಾರ ಕೋಲಾರದಲ್ಲಿ ಹಮ್ಮಿಕೊಂಡಿದ್ದ ನೂತನ ರೈಲು ನಿಲ್ದಾಣದ ಉದ್ಘಾಟನೆ ಹಾಗೂ ಹೊಸ ಪ್ಯಾಸೆಂಜರ್ ರೈಲಿನ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಬಂಗಾರಪೇಟೆ ಶಾಸಕ ಎಸೆ.ಎನ್.ನಾರಾಯಣಸ್ವಾಮಿ ಹೊಸ ರೈಲನ್ನು ಬಂಗಾರಪೇಟೆಯವರೆಗೆ ವಿಸ್ತರಣೆ ಮಾಡಲು ಒತ್ತಾಯಿಸಿದ್ದಾರೆ. ಇದಕ್ಕೆ ನನ್ನ ಸಹಮತವಿದೆ. ಆದರೆ, ಸೂಕ್ತವಾದ ಸಮಯವನ್ನು ನಿಗದಿ ಮಾಡಿ ಯೋಜನೆ ಅನುಷ್ಠಾನಕ್ಕೆ ತರುವುದು ನೈರುತ್ಯ ರೈಲ್ವೆ ಇಲಾಖೆಯ ಜನರಲ್ಮ್ಯಾನೇಜರ್ ಎ.ಕೆ. ಮಿತ್ತಲ್ ಅವರ ಜವಾಬ್ದಾರಿಯಾಗಿದೆ ಎಂದರು.
ಬೆಂಗಳೂರು-ಚಿಕ್ಕಬಳ್ಳಾಪುರ-ಕೋಲಾರ 78551, 52 ಪ್ಯಾಸೆಂಜರ್ ರೈಲು ಬೆಂಗಳೂರಿನಿಂದ ಬೆಳಿಗ್ಗೆ 8.45ಕ್ಕೆ ಹೊರಟು ಕೋಲಾರಕ್ಕೆ ಮಧ್ಯಾಹ್ನ 12-30ರಿಂದ 1 ಗಂಟೆಯೊಳಗೆ ಬಂದು ತಲುಪುತ್ತದೆ. ಇಲಾಖೆಯ ಅಧಿಕಾರಿಗಳಾದ ಎ.ಕೆ. ಮಿತ್ತಲ್ ಅವರು ತಮ್ಮ ಸಹಪಾಠಿಗಳೊಂದಿಗೆ ಚರ್ಚಿಸಿ ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಸದರಿ ರೈಲು ಹೊರಡುವಂತೆ ಮಾಡಿ ಕೋಲಾರಕ್ಕೆ ಮಧ್ಯಾಹ್ನ 12 ಗಂಟೆಗೆ ತಲುಪುವಂತೆ ಮಾಡಿದಲ್ಲಿ ಬಂಗಾರಪೇಟೆಗೆ ರೈಲು ವಿಸ್ತರಣೆ ಮಾಡಿ 45 ನಿಮಿಷಗಳ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಖರ್ಗೆಯವರು ನೀಡಿದ ಸೂಚನೆಗೆ ಇಲಾಖೆಯ ಜನರಲ್ಮ್ಯಾನೇಜರ್ ಎ.ಕೆ. ಮಿತ್ತಲ್ ಅವರು ತಲೆಯಾಡಿಸಿದಾಗ, ಅಧಿಕಾರಿಯೇನೋ ತಲೆ ಆಡಿಸಿ ಸಮ್ಮತಿಸಿದ್ದಾರೆ. ಆದರೆ, ನಮ್ಮ ಸೂಚನೆ ಜಾರಿಗೆ ಬಂದಾಗಲೇ ಎಲ್ಲರಿಗೂ ಸಂತೋಷವಾಗೋದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನುಡಿದರು.
ರೇಲ್ವೆ ಕೋಚ್ ಘಟಕ ಖಚಿತ: ಕೋಲಾರ ಜಿಲ್ಲೆಗೆ ಮಂಜೂರಾಗಿರುವ ರೈಲು ಕೋಚ್ ಕಾರ್ಖಾನೆಯ ನಿರ್ಮಾಣಕ್ಕೆ ಸಪ್ಲಿಮೆಂಟರಿ ಬಜೆಟ್ನಲ್ಲಿ ಹಣ ಒದಗಿಸುತ್ತೇನೆ. ರಾಜ್ಯ ಸರ್ಕಾರ ಈ ಯೋಜನೆಗೆ ಬೇಕಾದ ಭೂಮಿ ಮತ್ತು ತನ್ನ ಪಾಲಿನ ಹಣ ನೀಡಲು ಒಪ್ಪಿಕೊಂಡಿದೆ, ಲಾಭದಾಯಕ ಘಟಕವಾಗಿರುವುದರಿಂದ ಜಿಲ್ಲೆಯ ಜನತೆಯ ಕನಸು ನನಸು ಮಾಡುತ್ತೇನೆಂದು ಭರವಸೆ ನೀಡಿದರು.
ಕೆಜಿಎಫ್ನ ಮಾರಿಕುಪ್ಪಂನಿಂದ ಕುಪ್ಪಂವರೆಗೆ ರೈಲು ಮಾರ್ಗಕ್ಕೆ ಮಂಜೂರಾತಿ ನೀಡಲಾಗಿದೆ. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಸದರಿ ಯೋಜನೆಗೆ ಬೇಕಾದ ಭೂಮಿಯನ್ನು ಒದಗಿಸಲು ಆಂಧ್ರ ಮತ್ತು ತಮಿಳುನಾಡಿನ ಸರ್ಕಾರದ ಜೊತೆ ಮಾತನಾಡಿದೆ ಒಳ್ಳೆಯದು. ಯಾವುದೇ ಯೋಜನೆ ಜಾರಿಗೆ ತರಬೇಕಾದರೆ ಎಲ್ಲಾ ರೀತಿಯ ಸಿದ್ಧತೆ ಆಗಬೇಕಾಗುತ್ತದೆ. ಮಾತಿನ ರೈಲು ಓಡಿಸೋದು ಸುಲಭ, ನಿಜವಾದ ರೈಲು ಓಡಿಸೋದು ಕಷ್ಟವೆಂದು ಮಾರ್ಮಿಕವಾಗಿ ನುಡಿದರು.
ದೇಶದಲ್ಲಿ 69 ಸಾವಿರ ಕಿಮೀ ರೈಲು ಮಾರ್ಗವಿದೆ, 19 ಸಾವಿರ ರೈಲುಗಳು ಓಡಾಡುತ್ತಿವೆ, 14 ಲಕ್ಷ ಜನರು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆಂದ ಸಚಿವರು,ಸಾಮಾನ್ಯ ಜನತೆಯ ಮೇಲೆ ಭಾರ ಹಾಕದೆ ಇಲಾಖೆ ತನ್ನ ಯೋಜನೆಗಳನ್ನು ಜಾರಿಗೆ ತರುತ್ತಿದೆ, ಸುರಕ್ಷತೆಯನ್ನು ನೋಡಿಕೊಂಡು ರೈಲು ಓಡಿಸಬೇಕು. ಬಾಯಲ್ಲಿ ರೈಲು ಓಡಿಸಿದಷ್ಟು ಸುಲಭವಲ್ಲ ನಿಜವಾದ ರೈಲು ಓಡಿಸೋದು, ಒಂದು ರೈಲಿನ ಕಿಮ್ಮತ್ತು ಕನಿಷ್ಠ 30 ಕೋಟಿ ರು. ಒಂದು ಎಂಜನಿಗೆ 10 ಕೋಟಿ, ಎರಡಕ್ಕೆ 20 ಕೋಟಿ ರು. 8 ರಿಂದ 10 ಬೋಗಿಗಳಿಗೆ ಕನಿಷ್ಠ 8 ಕೋಟಿ ಬೇಕಾಗುತ್ತದೆ. ಒಂದು ಎಸಿ ಕೋಚಿಗೆ 1.50 ಕೋಟಿ ಖರ್ಚು ಬರುತ್ತದೆ ಎಂದು ಲೆಕ್ಕ ನೀಡಿದರು.
ನ.19ಕ್ಕೆ ಹೊಸ ರೈಲು: ಇಂದಿರಾಗಾಂಧಿಯವರ ಜನ್ಮದಿನವಾದ ನ.19 ರಂದು ಚಿಕ್ಕಮಗಳೂರಿನಿಂದ ಕಡೂರಿಗೆ ಹೊಸ ರೈಲು ಓಡಿಸಲಾಗುತ್ತದೆ. ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಇದರ ಸ್ಮರಣೆಗಾಗಿ ರೈಲು ಮಾರ್ಗ ನಿರ್ಮಿಸಲಾಗಿದ್ದು ನ.19 ರಂದು ಹೊಸ ರೈಲಿಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಲಾಗುತ್ತದೆ ಎಂದರು.
ಕೋಲಾರ-ಚಿಕ್ಕಬಳ್ಳಾಪುರ ನಡುವೆ 87 ಕಿಮೀ ಬ್ರಾಡ್ ಗೇಜ್ ರೈಲು ಮಾರ್ಗಕ್ಕೆ 2006-07ರಲ್ಲಿ ಮಂಜೂತಿ ಸಿಕ್ಕಿದ್ದು 2010ರ ಮಾರ್ಚ್ 31ರತನಕ 106 ಕೋಟಿ ರು. ಖರ್ಚು ಮಾಡಲಾಗಿದೆ. 440 ಕೋಟಿ ರು.ಗಳ ಒಟ್ಟು ಯೋಜನೆಯಲ್ಲಿ ರೇಲ್ವೆ ಇಲಾಖೆಯ ಪಾಲು 273 ಕೋಟಿಯಾಗಿದ್ದರೆ, ಉಳಿಕೆ ಹಣ ರಾಜ್ಯ ಸರ್ಕಾರದ್ದಾಗಿದೆ ಎಂದು ಹೇಳಿದರು. ಕೇಂದ್ರ ರೇಲ್ವೆ ಬಜೆಟ್ನಲ್ಲಿ ಪ್ರಕಟಿಸಲಾಗಿರುವ ಬಹುತೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಮತ್ತೆ ಜನತೆ ಯುಪಿಎ ಸರ್ಕಾರಕ್ಕೆ ಬರುವುದಕ್ಕೆ ಬೆಂಬಲ ನೀಡಿದಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

