ಉದ್ಘಾಟನೆ ಕಾಣದ ತರಕಾರಿ ಮಾರುಕಟ್ಟೆ
ರಾಜೇಂದ್ರ ವೈದ್ಯ
ಮಾಲೂರು: ಇಲ್ಲಿನ ಪುರಸಭೆ ಸಾರ್ವಜನಿಕರ ಉಪಯೋಗಕ್ಕಾಗಿ 97 ಲಕ್ಷ ರು.ಗಳಲ್ಲಿ ನಿರ್ಮಿಸಿರುವ ನೂತನ ತರಕಾರಿ ಮಾರುಕಟ್ಟೆ ಪೂರ್ಣಗೊಂಡು ವರ್ಷ ಕಳೆದರೂ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಟ್ಟಡ ಉದ್ಘಾಟನೆಗೊಳ್ಳದೆ ಸಾರ್ವಜನಿಕರ ಶೌಚಾಲಯವಾಗಿ ಮಾರ್ಪಟ್ಟಿದೆ.
ಹಿಂದಿನ ಬಿಜೆಪಿ ಆಡಳಿತದಲ್ಲಿ ಪುರಸಭೆ ಅಧ್ಯಕ್ಷೆಯಾಗಿದ್ದ ನೀಲಾಚಂದ್ರ ಅವರ ಕಾಲಾವಧಿಯಲ್ಲಿ ಅಂದಿನ ಶಾಸಕ ಕೃಷ್ಣಯ್ಯ ಶೆಟ್ಟರು ಅವ್ಯವಸ್ಥೆಯ ಆಗರವಾಗಿದ್ದ ತರಕಾರಿ ಮಾರುಕಟ್ಟೆಯನ್ನು ಸುಸಜ್ಜಿತವಾಗಿ ನಿರ್ಮಿಸಲು 97 ಲಕ್ಷ ರು.ಗಳ ಕಾಮಗಾರಿಗೆ ಚಾಲನೆ ನೀಡಿದ್ದರು. ಅಂದಿನ ಪುರಸಭೆ ಅಧ್ಯಕ್ಷರ ಮೇಲಾಟದಲ್ಲಿ 42 ಮಳಿಗೆವುಳ್ಳ ತರಕಾರಿ ಮಾರುಕಟ್ಟೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲು 5 ವರ್ಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿತ್ತು, ಈಗ ಕಾಮಗಾರಿ ಪೂರ್ಣಗೊಂಡು ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ತರಕಾರಿ ಮಾರುಕಟ್ಟೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಹಿಂದೆ ಇದ್ದ ತರಕಾರಿ ಮಾರುಕಟ್ಟೆಯನ್ನು ತೆರವುಗೊಳಿಸಲು ಮಾರುಕಟ್ಟೆಯಲ್ಲಿದ್ದ ಅಂಗಡಿಯವರಿಗೆ ತಾತ್ಕಾಲಿಕವಾಗಿ ಪುರಸಭೆ ಮುಂಭಾಗದ ಮಹಾರಾಜ ವೃತ್ತದಲ್ಲಿ ಅಂಗಡಿ ತೆರಯಲು ಅವಕಾಶ ನೀಡಲಾಗಿತ್ತು. ಕಳೆದೈದು ವರ್ಷದಿಂದ ರಸ್ತೆಯಲ್ಲೇ ತಳವೂರಿರುವ ತರಕಾರಿ ಅಂಗಡಿಗಳಿಂದ ಪಟ್ಟಣದ ಹೃದಯ ಭಾಗವಾದ ಮಹಾರಾಜ ವೃತ್ತದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರ ಜತೆಯಲ್ಲಿ ತರಕಾರಿ ಮಂಡಿಗಳು ಇಲ್ಲೇ ಸುತ್ತಮುತ್ತ ಇರುವುದರಿಂದ ಸಂಜೆ ವೇಳೆಗೆ ಐವತ್ತುಕ್ಕೂ ಹೆಚ್ಚು ತರಕಾರಿ ತುಂಬಿದ ವಾಹನಗಳಿಂದ ರಸ್ತೆ ತುಂಬಿಹೋಗಿ ಪಾದಚಾರಿಗಳಿಗೆ ಚಲಿಸಲು ಅಸಾಧ್ಯವಾಗುತ್ತಿದೆ. ಈ ಬಗ್ಗೆ ಹಲಾವರು ಬಾರಿ ಪುರಸಭೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ರಘುರಾಮ್. ಈ ಬಗ್ಗೆ ಕನ್ನಡ ಪ್ರಭ ಮುಖ್ಯಾಧಿಕಾರಿ ರೇಣುಕಾರವರನ್ನು ಸಂಪರ್ಕಿಸಿದಾಗ ಕಳೆದ ವರ್ಷವೇ ತರಕಾರಿ ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಫೈಲು ಜಿಲ್ಲಾ ಯೋಜನಾಧಿಕಾರಿ ಇಲಾಖೆಯಲ್ಲಿದೆ.ನಾನು ಅಧಿಕಾರ ವಹಿಸಿಕೊಂಡ ಎಳು ತಿಂಗಳಲ್ಲಿ ಐದು ಬಾರಿ ಕಟ್ಟಡ ಉದ್ಘಾಟನೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರೂ ಇಲಾಖೆಯಿಂದ ಆದೇಶದ ಉತ್ತರ ಬಂದಿಲ್ಲ. 97 ಲಕ್ಷ ರು.ಗಳಲ್ಲಿ ನಿರ್ಮಿಸಿರುವ ಸಂಕಿರಣದ ಉದ್ಘಾಟನೆ ನಿಧಾನವಾಗುತ್ತಿರುವುದರಿಂದ ಪುರಸಭೆಗೆ ಪ್ರತಿ ತಿಂಗಳು ಬಾಡಿಗೆ ರೂಪದಲ್ಲಿ ಬರುತ್ತಿದ್ದ ಒಂದು ಲಕ್ಷ ರು.ಗಳಿಗೂ ಹೆಚ್ಚು ವರಮಾನಕ್ಕೆ ಖೋತಾವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೂಡನೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಪುರಸಭೆಗಳು ಕೈಗೊಳ್ಳುವ ಎಲ್ಲ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಯೋಜನಾಧಿಕಾರಿಗಳ ಅನುಮತಿ ಪಡೆದು ಅಲ್ಲಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಬೇಕಾಗಿದೆ. ಆದರೆ ಯೋಜನಾಧಿಕಾರಿಗಳ ಇಲಾಖೆಯಿಂದ ಸುಲಭವಾಗಿ ಫೈಲುಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗುತ್ತಿಲ್ಲ ಎನ್ನುವುದು ಹೆಸರು ಹೇಳಲು ಇಚ್ಚಿಸದ ಪುರಸಭೆ ಅಧಿಕಾರಿಗಳ ಮಾತು. ಕಳೆದ ಒಂದುವರೆ ವರ್ಷದಿಂದ ಪೂರ್ಣವಾಗಿರುವ ತರಕಾರಿ ಮಾರುಕಟ್ಟೆಯ ಫೈಲು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗದೆ ಯೋಜನಾಧಿಕಾರಿಗಳ ಕಚೇರಿಯಲ್ಲೇ ಕೊಳೆಯುತ್ತಿದೆ ಎಂದರೆ ಇದರ ಅರ್ಥವೇನು ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು ಶಾಸಕ ಮಂಜುನಾಥ್ ಗೌಡರು ಹಾಗೂ ಜಿಲ್ಲಾಧಿಕಾರಿ ರವಿ ಅವರು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ಹಣ ಸದುಪಯೋಗವಾಗುವಂತೆ ಮಾಡಬೇಕು ಎಂದು ಅಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

