ಕೋಲಾರ

'ಪ್ರೇಕ್ಷಣೀಯ ಸ್ಥಳವಾಗಲಿ'

Published On :

ಬಾಗೇಪಲ್ಲಿ: ಒಂದು ಸಾವಿರ ವರ್ಷಗಳ ಪರಂಪರೆಯುಳ್ಳ ಗೂಳೂರು ನಿಡುಮಾಡಿ ಮಹಾಸಂಸ್ಥಾನ ಪೀಠ ಹಿಂದುಳಿದಿದ್ದು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವತ್ತ ಸರ್ಕಾರ ಗಮನ ಹರಿಸಬೇಕೆಂದು ಗೂಳೂರು ನಿಡುಮಾಡಿ ಮಹಾಸಂಸ್ಥಾನ ಪೀಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮಿ ಒತ್ತಾಯಿಸಿದರು.
ಶ್ರೀ ಜಚನಿ ಅವರ 155ನೇಯ ಜಯಂತಿ ಅಂಗವಾಗಿ ನ.13 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಾಲೂಕಿನ ಗೂಳೂರು ಹೋಬಳಿ ಕೇಂದ್ರದ ನಿಡುಮಾಡಿ ಮಹಾಸಂಸ್ಥಾನ ಪೀಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆ ಮತ್ತು ಸ್ಥಳೀಯ ಮುಖಂಡರ ಸಲಹೆ ಸೂಚನೆ ಪಡೆಯುವ ನಿಟ್ಟಿನಲ್ಲಿ ಇಂದು ನಿಡುಮಾಡಿ ಮಹಾಸಂಸ್ಥಾನ ಪೀಠದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀ ಜಚನಿ ರವರು 1939ರಲ್ಲಿ ಮೈಸೂರು ಸಂಸ್ಥಾನದ ನಾಲ್ಮಡಿ ಕೃಷ್ಣರಾಜ ಒಡಿಯರ್ ಅವರ ಒಪ್ಪಿಗೆಯಿಂದ ಈ ಮಠಕ್ಕೆ ಪೀಠಾಧಿಪತಿಗಳಾಗಿ ಪೀಠದ ಶಾಖೆಗಳ ಸುಧಾರಣೆ ಮಾಡಿದರು. ಸಾಮಾಜಿಕ ಬದಲಾವಣೆಗಳಿಗೆ ಪ್ರಯತ್ನ ಮಾಡಿದರು, ದಲಿತರ ಬಗ್ಗೆ ಅವರು ಕೈಗೊಂಡ ನಿರ್ಣಯಗಳು ಅಂದಿನ ಕಾಲಕ್ಕೆ ಮಾದರಿಯಾಗಿತ್ತು. 1948 ರ ಫೆಬ್ರವರಿ ತಿಂಗಳಲ್ಲಿ ನಡೆದ ರಥಸಪ್ತಮಿಯಂದು ಸಾರ್ವತ್ರಿಕವಾಗಿ ದಲಿತರಿಗೆ ಮಠದಲ್ಲಿ ಪ್ರವೇಶವನ್ನು ಕಲ್ಪಿಸುವ ಮೂಲಕ ಪರಿವರ್ತನೆಯ ಕಾರ್ಯಕ್ಕೆ ಮೊದಲಿಗರಾದರು.
ಅಂದಿನ ಮುಖ್ಯಮಂತ್ರಿಗಳಾಗಿದ್ದ ಕೆ.ಸಿ. ರೆಡ್ಡಿ ಅವರು ಆ ದಿನದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಂತರದ ದಿನಗಳಲ್ಲಿ ಅನೇಕ ಮುಖ್ಯಮಂತ್ರಿಗಳು ಬೆಂಗಳೂರು ಮಠಕ್ಕೆ ಭೇಟಿ ನೀಡಿದ್ದಾರೆ. ಆದರೆ ಮೂಲ ಪೀಠವಾಗಿರುವ ಗೂಳೂರು ನಿಡುಮಾಮಿಡಿ ಮಹಾ ಸಂಸ್ಥಾನ ಪೀಠಕ್ಕೆ ನಂತರ ಯಾವ ಮುಖ್ಯಮಂತ್ರಿಗಳು ಭೇಟಿ ನೀಡಿಲ್ಲ. ಸುಮಾರು 65 ವರ್ಷಗಳ ನಂತರ ಈ ಪೀಠಕ್ಕೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಭೇಟಿ ನೀಡುತ್ತಿದ್ದಾರೆ ಎಂದರು.
ನ.13 ರಂದು ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕೆ ಸಚಿವ ಶ್ರೀ ಜಚನಿಯವರ ಭಾಷಣಗಳು ಎಂಬ ಪುಸ್ತಕ ಬಿಡುಗಡೆ ಮಾಡುತ್ತಾರೆ. ಅರಿವಿನ ಹಾದಿಯಲ್ಲಿ ಎಂಬ ಪುಸ್ತಕವನ್ನು ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಬಿಡುಗಡೆಗೊಳಿಸುತ್ತಾರೆ. ಈ ಸಮಾರಂಭದಲ್ಲಿ ಕೇಂದ್ರ ಸಚಿವ ಡಾ.ಎಂ. ವೀರಪ್ಪಮೊಯಿಲಿ, ಕೆ.ಎಚ್. ಮುನಿಯಪ್ಪ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಆಹಾರ ಮತ್ತು ನಾಗರಿಕ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಭಾಗವಹಿಸಲಿದ್ದಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್. ನರಸಿಂಹನಾಯ್ಡು, ಉಪನ್ಯಾಸಕ ಡಾ.ಕೆ.ಎಂ. ನಯಾಜ್ ಅಹಮ್ಮದ್, ಅಬ್ದುಲ್ಲಾ, ಲಕ್ಷ್ಮೀನರಸಿಂಹಪ್ಪ, ಅಂಜಿನಪ್ಪ, ನರಸಿಂಹಪ್ಪ, ಜಿ. ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.