ಕೋಲಾರ

ಪೊಲೀಸರ ಆರೋಗ್ಯ ಸಮಸ್ಯೆ ನಿವಾರಣೆಗೆ ಕ್ರಮ

Published On :

 ಕೆ. ರಮೇಶ್
ಬಂಗಾರಪೇಟ: ಕರ್ತವ್ಯದಲ್ಲಿ ಪೊಲೀಸರು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯ ಕಂಡುಕೊಳ್ಳಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಅಧ್ಯಯನವನ್ನು ಕೆಜಿಎಫ್ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಾಗಿದೆ.
ಪೊಲೀಸರು ಜೀವನ ಶೈಲಿಯ ಬಗ್ಗೆ ಅಧ್ಯಯನ ನಡೆಸಿರುವ ಸ್ವತಃ ವೈದ್ಯರೂ ಆಗಿರುವ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ರವರ ನೇತೃತ್ವದ ನಾಲ್ವರ ವೈದ್ಯರ ತಂಡ ಅಧ್ಯಯನದ ಪ್ರಮುಖ ಅಂಶಗಳನ್ನೊಳಗೊಂಡ ವರದಿಯನ್ನು ಇತ್ತೀಚಿಗೆ ಗೃಹ ಸಚಿವ ಕೆ.ಜೆ. ಜಾರ್ಜ್ ರವರಿಗೆ ಸಲ್ಲಿಸಿದೆ.
ಪೊಲೀಸರು ಸದಾ ಕರ್ತವ್ಯದಲ್ಲಿರುತ್ತಾರೆ, ದಿನವಿಡೀ ಒತ್ತಡ ಹಾಗೂ ಸಮಾಜದ ವಿವಿಧ ಸ್ಥರಗಳ ವ್ಯಕ್ತಿಗಳೊಡನೆ ವ್ಯವಹರಿಸುವ ಪೊಲೀಸರು ಕರ್ತವ್ಯದಲ್ಲಿ ಸಂಯಮ ಕಾಪಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಕಾಲ ಕಾಲಕ್ಕೆ ಊಟ, ತಿಂಡಿ ಮತ್ತು ವಿಶ್ರಾಂತಿ ಇಲ್ಲದೆ ದೈಹಿಕವಾಗಿಯೂ ಬಳಲುತ್ತಾರೆ ಇಂತಹ ಸಂದರ್ಭದಲ್ಲಿ ಅವರಿಂದ ಉತ್ತಮ ಕೆಲಸ ನಿರೀಕ್ಷಿಸುವುದು ಹೇಗೆ ಎಂಬ ಸಮಸ್ಯೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಾಡುತ್ತಿದೆ.
ತಮ್ಮ ಐಪಿಎಸ್ ಜೀವನದಲ್ಲಿ ಮೊದಲ ಬಾರಿಗೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ಡಾ. ರೋಹಿಣಿ ಕಟೋಚ್ ತಮ್ಮ ಮೂಲ ವೃತ್ತಿ ಮತ್ತು ಈಗಿನ ವೃತ್ತಿಗಳನ್ನು ಸಂಯೋಜಿಸಿಕೊಂಡು ಕಾಡುವ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಕೋಲಾರದ ದೇವರಾಜ್ ಅರಸ್ ವೈದ್ಯಕೀಯ ಮತ್ತು ಸಂಶೋಧನಾ ಅಕಾಡಮಿ ವೈದ್ಯರಾದ ಡಾ.ಬಿ.ಜಿ. ರಂಗನಾಥ್, ಡಾ. ಮುನಿನಾರಾಯಣ್, ಡಾ. ರಾಘವೇಂದ್ರ ಪ್ರಸಾದ್ ಮತ್ತು ಡಾ. ಮಾಧವಿರೆಡ್ಡಿ ಅವರ ಸಹಕಾರದಿಂದ ಕಳೆದ ಒಂದು ವರ್ಷದಿಂದ ಅಧ್ಯಯನ ನಡೆಸಿದ ಡಾ. ರೋಹಿಣಿ ಪೊಲೀಸ್ ಒತ್ತಡ ಮತ್ತು ಆರೋಗ್ಯ ಸಮಸ್ಯೆ ನಿವಾರಣೆಗೆ ಸೂತ್ರವನ್ನು ಕಂಡುಹಿಡಿದಿದ್ದಾರೆ.
ಪೊಲೀಸರಿಗೆ ನಿಯಮಿತವಾದ ಆರೋಗ್ಯ ತಪಾಸಣೆ ನಡೆಸುವುದು, ಪ್ರಮುಖವಾದ ಮಧುಮೇಹ, ಸ್ಥ್ಥೂಲಕಾಯಿಲೆ ಮತ್ತು ರಕ್ತದೊತ್ತಡದಂತಹ ಕಾಯಿಲೆಯನ್ನು ಪ್ರಾಂರಭಿಕ ಹಂತದಲ್ಲೇ ಗುರುತಿಸಿ ಅದನ್ನು ಹೋಗಲಾಡಿಸುವುದು, ಇಲ್ಲವೆ ನಿಯಂತ್ರಿಸಲು ಸೂಕ್ತ ಆರೋಗ್ಯ ಕ್ರಮ ಕೈಗೊಳ್ಳುವುದು ಪ್ರತಿ ಪೊಲೀಸ್ ಠಾಣೆಯಲ್ಲಿಯೂ ವಾರಕ್ಕೆ 5ದಿನಗಳ ಕಾಲ ಸಾಮೂಹಿಕ ವ್ಯಾಯಾಮ ಮಾಡುವುದು, ಯೋಗ ತರಬೇತಿ, ಕೌನ್ಸಿಲಿಂಗ್ ಮೊದಲಾದ ಕ್ರಮಗಳ ಮೂಲಕ ಪೊಲೀಸರ ಜೀವನ ಶೈಲಿಯನ್ನು ಉತ್ತಮಪಡಿಸುವುದು ಅಧ್ಯಯನದ ಮೂಲ ಉದ್ದೇಶವಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಕೆಜಿಎಫ್ ಜಿಲ್ಲೆಯಲ್ಲಿರುವ 740ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಪ್ರಾಯೋಗಿಕವಾಗಿ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಬ್ ಇನ್ಸ್ ಪೆಕ್ಟರ್ಗಳು ಸೇರಿದಂತೆ ಎಲ್ಲಾ ಹಂತದ ಪೊಲೀಸ್ ಸಿಬ್ಬಂದಿ ಈ ಪ್ರಯೋಗಕ್ಕೆ ಒಳಗಾಗುತ್ತಾರೆ, ಪೊಲೀಸ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಸ್ಥವಾಗಿರಲು ಅವರ ಕುಟುಂಬ ವರ್ಗದವರ ಸಹಕಾರ ಅತ್ಯಗತ್ಯ ಈ ದಿಸೆಯಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ವಿವರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.