ಆಹಾರ ಸಾಮಗ್ರಿ ಗೋದಾಮುಗಳಲ್ಲಿ ಸಿಸಿ ಕ್ಯಾಮರಾ
ಕ.ಪ್ರ.ವಾರ್ತೆ ಕೋಲಾರ ನ. 10
ಜಿಲ್ಲೆಯಾದ್ಯಂತ ಇರುವ ವಿವಿಧ ಇಲಾಖೆಗಳಿಗೆ ಸೇರಿದ ವಿದ್ಯಾರ್ಥಿ ನಿಲಯಗಳಲ್ಲಿನ ಗಂಭೀರ ಸಮಸ್ಯೆಗಳನ್ನು ನಿವಾರಿಸಲು ಭಾನುವಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಗೋದಾಮುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಸೇರಿದಂತೆ ಸಮಗ್ರ ಸುಧಾರಣೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವುದೇ ದೂರುಗಳು ಬರದಂತೆ ಎಚ್ಚರ ವಹಿಸಲು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚಿಸಿದರು.
ಜಿಲ್ಲೆಯಲ್ಲಿ 14 ಮಂದಿ ಅಡುಗೆಯವರು ಹಾಸ್ಟೆಲ್ ವಾರ್ಡನ್ಗಳಾಗಿ ಕೆಲಸ ಮಾಡುತ್ತಿರುವ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಗುರುಮೂರ್ತಿ ಸಭೆಯ ಗಮನಕ್ಕೆ ತಂದಾಗ ಅಡುಗೆ ಸಿಬ್ಬಂದಿಯನ್ನು ವಾರ್ಡನ್ ಕೆಲಸದಿಂದ ಕೂಡಲೇ ಮುಕ್ತಗೊಳಿಸಿ, ಆಸಕ್ತಿ ಇರುವ ಶಿಕ್ಷಕರಿಗೆ ವಾರ್ಡನ್ ಜವಾಬ್ದಾರಿ ವಹಿಸುವಂತೆ ತಿಳಿಸಿದರು.
ಶಿಕ್ಷಕರನ್ನು ವಾರ್ಡನ್ ಆಗಿ ನಿಯೋಜನೆ ಮಾಡುವುದಕ್ಕೆ ಯಾವ ನ್ಯಾಯಾಲಯವೂ ನಿರಾಕರಣೆ ಮಾಡುವುದಿಲ್ಲ. ಈ ಬಗ್ಗೆ ಡಿಡಿಪಿಐ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸಲಹೆ ನೀಡಿದರು.
ಜಿಪಂ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಜುಲ್ಫೀಖಾರ್ ಉಲ್ಲಾ ಮಾತನಾಡಿ, ಈಗಾಗಲೇ ಹಾಸ್ಟೆಲ್ಗಳಿಗೆ ಶಿಕ್ಷಕರನ್ನು ವಾರ್ಡನ್ ಆಗಿ ನಿಯೋಜಿಸಲು ಪಟ್ಟಿ ಸಿದ್ಧಪಡಿಸಲಾಗಿದೆ. ಸಂಬಂಧಪಟ್ಟ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಮೂರು ದಿನಗಳಲ್ಲಿ ಶಿಕ್ಷಕರಿಗೆ ಹಾಸ್ಟೆಲ್ ಮೇಲ್ವಿಚಾರಕರ ಜವಾಬ್ದಾರಿ ವಹಿಸಿ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಹಾಸ್ಟೆಲ್ಗಳಿಗೆ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವ ವಿಚಾರಕ್ಕೆ ಸಂಬಂಧಪಟ್ಟ ಗೋದಾಮುಗಳಿಗೆ ಸಿಸಿ ಟಿವಿ ಅಳವಡಿಸಬೇಕು, ದೃಶ್ಯಾವಳಿಯ ಪ್ರತಿಯನ್ನು ಪ್ರತಿ ತಿಂಗಳು ತಮಗೆ, ಜಿಪಂ ಸಿಇಒ, ಸಮಾಜ ಕಲ್ಯಾಣಾಧಿಕಾರಿಗಳು, ಬಿಸಿಎಂ ಜಿಲ್ಲಾ ಅಧಿಕಾರಿಗೆ ನೀಡಬೇಕು, ಸರಬರಾಜುದಾರು ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಗೆ ಮರು ಗುತ್ತಿಗೆ ನೀಡಬಾರದು, ಹಾಸ್ಟೆಲಲ್ಗಳಿಗೆ ನೇರವಾಗಿ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರಸಿಂಹಪ್ಪ ಬಂಗಾರಪೇಟೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಯಾಗಿ ನೇಮಿಸಿದ್ದು, ಕೋಲಾರಕ್ಕೂ ಹೆಚ್ಚುವರಿ ಜವಾಬ್ದಾರಿ ನೀಡಿ ಎರಡು ವಾರ ಕಳೆದರೂ ಒಂದು ದಿನವೂ ಭೇಟಿ ನೀಡಿಲ್ಲ ಎಂಬ ದೂರು ಬಂದಾಗ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ತಾಲೂಕು ಸಮಾಜ ಕಲ್ಯಾಣಾಧಿಕಾರಿಯ ಜವಾಬ್ದಾರಿಯಿಂದ ತಕ್ಷಣ ಹಿಂದಕ್ಕೆ ಕರೆಯಿಸಿಕೊಳ್ಳಿ ಎಂದು ತಾಕೀತು ಮಾಡಿದರು.
ನೀರಿನ ಸೌಲಭ್ಯ: ಹಾಸ್ಟೆಲ್ಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಕೊಳವೆ ಬಾವಿ ಕೊರೆಯಿಸಲು ಟಾಸ್ಕ್ಫೋರ್ಸ್ ಅಥವಾ ಎನ್.ಆರ್.ಡಿ.ಡ.ಬ್ಯೂ.ಪಿ ಯೋಜನೆಯಡಿ ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅದುವರೆಗೆ ಹಾಸ್ಟೆಲ್, ಶಾಲೆ, ಅಂಗನವಾಡಿಗಳಿಗೆ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಿಂದ ನಿಗದಿತ ಶುಲ್ಕ ಪಾವತಿಸಿ ಶುದ್ಧ ನೀರು ಪಡೆಯುವಂತೆ ಸೂಚಿಸಿದರು.
ಹಾಸ್ಟೆಲ್ಗಳಲ್ಲಿ ಹೊರಗುತ್ತಿಗೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ನೌಕರರಿಗೆ ನಿಗದಿಪಡಿಸಿರುವ ಮಾಸಿಕ 4,436 ರು.ಗಳಂತೆ ನೀಡದೆ ಕಡಿಮೆ ನೀಡುತ್ತಿರುವುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಇನ್ನು ಮುಂದೆ ಅಡುಗೆ ಸಿಬ್ಬಂದಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಈ ತಿಂಗಳಿನಿಂದಲೇ ನೇರವಾಗಿ ಅವುಗಳ ಖಾತೆಗೆ ಸಂಬಳ ಪಾವತಿಸುವಂತೆ ತಿಳಿಸಿದರು. ಹಾಸ್ಟೆಲ್ ವ್ಯವಸ್ಥೆಯನ್ನು ಹದೆಗೆಡಿಸಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಿ, ಏನಾದರೂ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ಧೈರ್ಯ ತುಂಬಿದರು.
ಜಿಲ್ಲೆಯ ಕೆಲ ಹಾಸ್ಟೆಲ್ಗಳಲ್ಲಿ ಹಿಂದೆ ಖರೀದಿಸಿದ್ದ ಅಲ್ಯೂಮೀನಿಯಂ ಪಾತ್ರೆಗಳನ್ನು ಬಳಸದೆ ಮೊಟ್ಟೆ ಕಟ್ಟಿದ್ದಾರೆಂದು ಸಭೆಯಲ್ಲಿ ಹಾಜರಿದ್ದ ಜನಪ್ರತಿನಿಧಿಗಳು ದೂರಿದಾಗ ಜಿಲ್ಲಾಧಿಕಾರಿಗಳು ಇರುವ ಪಾತ್ರೆಗಳನ್ನು ಬಳಕೆ ಮಾಡಿ, ಇಲ್ಲದ ಸಾಮಾಗ್ರಿಗಳಿಗೆ ಮಾತ್ರ ಬೇಡಿಕೆ ಸಲ್ಲಿಸಿದಲ್ಲಿ ಟೆಂಡರ್ ಕರೆಯುವುದಾಗಿ ತಿಳಿಸಿದರು. ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಒಬ್ಬ ಕಾಯಂ ಅಧಿಕಾರಿಯನ್ನು ನೇಮಕ ಮಾಡೋದಕ್ಕೆ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂಬ ನೋವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ ಅಧಿಕಾರಿಗಳನ್ನು ನೀಡುವಂತೆ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇನೆ. ಆದರೆ, ಜಿಲ್ಲೆಗೆ ಬರುವುದಕ್ಕೆ ಕೆಲವರು ಹಿಂದೇಟು ಹಾಕುತ್ತಿರುವುದರಿಂದ ಸಿಬ್ಬಂದಿಯ ಕೊರತೆ ನಿವಾರಣೆ ಆಗುತ್ತಿಲ್ಲವೆಂದರು. ಎಸ್ಸಿಎಸ್ಟಿ ಹಾಸ್ಟೆಲ್ ದುರಸ್ತಿಗೆ 2.50 ಕೋಟಿ ರು. ಅನುದಾನ ಲಭ್ಯವಿದೆ. ದುರಸ್ತಿ ಕಾರ್ಯ ನಡೆಸಬೇಕಿರುವ ಹಾಸ್ಟೆಲ್ಗಳ ವಿವರ , ಎಂಜಿನಿಯರ್ಗಳಿಂದ ಕ್ರಿಯಾಯೋಜನೆ ರೂಪಿಸಿ 15 ದಿನದೊಳಗೆ ಇಲಾಖೆ ಅನುಮೋದನೆ ಪಡೆಯುವಂತೆ ಸೂಚಿಸಿದರು. ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಕೆ. ನಾಗರಾಜ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್, ಜಿಪಂ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ಕಿಟ್ಟಪ್ಪ, ಅ.ಮು. ಲಕ್ಷ್ಮೀನಾರಾಯಣ, ಎಸ್.ಬಿ. ಮುನಿವೆಂಕಟಪ್ಪ, ರಾಮಸ್ವಾಮಿರೆಡ್ಡಿ, ಯಲ್ಲಮ್ಮ ಸೇರಿದಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಹಾಸ್ಟೆಲ್ಗಳ ಮೇಲ್ಚಿಚಾರಕರು ಸಭೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

