ಉನ್ನತ ತನಿಖೆಗೆ ಗಂಗಾಧರಯ್ಯಆಗ್ರಹ
ಗೌರಿಬಿದನೂರು: ಕಾಲೇಜು ವಿಧ್ಯಾರ್ಥಿನಿ ನೇತ್ರಾ ಸಾವು ಸಂಶಯಾಸ್ಪದವಾಗಿರುವ ಹಿನ್ನಲೆಯಲ್ಲಿ ಪ್ರಕರಣ ಸಿಒಡಿಗೆ ವಹಿಸಬೇಕೆಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ಗಂಗಾಧರಯ್ಯ ಆಗ್ರಹಿಸಿದರು.
ಪಟ್ಟಣದ ತ್ಯಾಗರಾಜ ಕಾಲೋನಿ ಕುರುಬರ ಸಂಘದ ಆವರಣದಲ್ಲಿ ಕನಕ ಜಯಂತಿ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿ ಸಾವಿನ ಬಗ್ಗೆ ಅನುಮಾನಗಳು ಜನತೆಯನ್ನು ಕಾಡುತ್ತಿರುವ ಕಾರಣ ಸರ್ಕಾರ ಕೂಡಲೆ ಪ್ರಕಣವನ್ನು ತನಿಖೆ ನಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದರು.
ಕನಕ ಜಯಂತಿಯನ್ನು ನ.20 ರಂದು ಅರ್ಥಪೂರ್ಣವಾಗಿ ತಾಲೂಕು ಆಡಳಿತದ ಸಹಯೋಗದೊಂದಿಗೆ ಸಂಘವೂ ಸಹಾ ಕೈಜೋಡಿಸಿ ಆಚರಿಸಲಿದ್ದು, ಅಂದು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸುವುದಾಗಿ ತಿಳಿಸಿದರು. ಸಂಘದ ಕಾರ್ಯದರ್ಶಿ ಲೆಂಕಪ್ಪ ಮಾತನಾಡಿದರು. ಖಜಾಂಚಿ ಮೈಲಾರಪ್ಪ, ಪ್ರೊ.ಕೆ. ರಾಮಾಂಜಿನೇಯಲು, ಬೀರಮಂಗಲ ಗಂಗಾಧರಪ್ಪ, ಗಂಗಪ್ಪ ಇದ್ದರು.
ಎಸ್ಎಫ್ಐ ಪ್ರತಿಭಟನೆ
ಗೌರಿಬಿದನೂರು: ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇಂತವರ ವಿರುದ್ಧ ಸರ್ಕಾರಗಳು ಶಿಕ್ಷೆಕೊಡುವುದರಲ್ಲಿ ವಿಫಲವಾಗಿವೆ ಎಂದು ಎಸ್ಎಫ್ಐ ಜಿಲ್ಲಾ ಸಹ ಸಂಚಾಲಕ ಎಸ್. ರಾಜಶೇಖರ್ ಆರೋಪಿಸಿದರು. ವಿದ್ಯಾರ್ಥಿನಿ ನೇತ್ರಾ ನಿಗೂಢ ಸಾವು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ವಿದ್ಯಾರ್ಥಿನಿ ಸಾವು ಜನರ ಪ್ರಕಾರ ಅಸಹಜ. ಪ್ರಭಾವಿಗಳ ಮಕ್ಕಳುವಿಧ್ಯಾರ್ಥಿನಿಯನ್ನು ನಂಬಿಸಿ ಕರೆದೊಯ್ದು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ, ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿಹಾಕಲು ಪಿತೂರಿ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ರವಿಚಂದ್ರಾರೆಡ್ಡಿ, ನರಸಿಂಹಮೂರ್ತಿ, ಕೃಷ್ಣೇಗೌಡ, ಶರಣ್, ಶ್ರೀನಿವಾಸ, ಶಶಿಕುಮಾರ್, ಲಕ್ಷ್ಮೀ, ಮಧುಶ್ರೀ, ಗೋಪಿನಾಥ್, ಜನಾರ್ದನ್ ಇದ್ದರು.
ಚಿಂತಾಮಣಿಯಲ್ಲಿ ಎಬಿವಿಪಿ ಪ್ರತಿಭಟನೆ
ಚಿಂತಾಮಣಿ: ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಗೌರಿಬಿದನೂರಿನ ವಿದ್ಯಾರ್ಥಿನಿ ನೇತ್ರಾಳ ಸಾವಿನ ಬಗ್ಗೆ ಆತ್ಮಹತ್ಯೆಯೆಂದು ಎಫ್ಐಆರ್ ಮಾಡಿರುವ ಬಗ್ಗೆ ಸಿಓಡಿ ತನಿಖೆ ಆಗಬೇಕೆಂದು ಎಬಿವಿಪಿ ನೂರಾರು ವಿದ್ಯಾರ್ಥಿಗಳು ಆಗ್ರಹಿಸಿ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಗೌರಿಬಿದನೂರಿನ ವಿದ್ಯಾರ್ಥಿನಿ ನೇತ್ರಾ ಸಾವು ಸಹಜ ಸಾವು ಎಂದು ಪೋಷಕರಿಗೆ ಹಲವು ರಾಜಕೀಯ ಮುಖಂಡರು ಒತ್ತಾಯಿಸಿ ಪೊಲೀಸರ ಮುಂದೆ ಸಹಜ ಸಾವೆಂದು ಬಿಂಬಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿರುವಿದರಿಂದ ಈ ಕೂಡಲೇ ಸರ್ಕಾರ ನೇತ್ರಾಳ ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕು ಮತ್ತು ಇದನ್ನು ಈ ಕೂಡಲೇ ಸಿಓಡಿ ತನಿಖೆ ಆಗಬೇಕೆಂದು ಒತ್ತಾಯಿಸಿ ನೂರಾರು ಎಬಿವಿಪಿ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಓಡಿ ತನಿಖೆಗೆ ಆಗ್ರಹಿಸಿ ಘೋಷಣೆಗಳು ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಂಜುನಾಥರೆಡ್ಡಿ ಸುರೇಶ್, ನವಾಜ್, ಸಯ್ಯದ್, ವಿಜಿ, ಮಂಜುನಾಥ್, ಸೌಮ್ಯ, ಹರ್ಷಿಯಾ, ಮಂಜುಳ, ರಾಧ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಆತ್ಮಹತ್ಯೆ: ಆತಂಕ
ಗೌರಿಬಿದನೂರು: ಇತ್ತೀಚೆಗೆ ತಾಲೂಕಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು ಪೋಷಕರಲ್ಲಿ ಆತಂಕ ಹುಟ್ಟಿಸಿದ್ದು ಹೆಣ್ಣುಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಹಿಂದುಮುಂದು ನೋಡುವ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ನೇತ್ರಾ ಎಂಬ ವಿದ್ಯಾರ್ಥಿನಿ ಅಕ್ಟೋಬರ್ 22ರಂದು ಕಾಲೇಜಿಗೆ ಹೋದವಳು ನವೆಂಬರ್ 1ರಂದು ಚಿಕ್ಕಬಳ್ಳಾಪುರದ ಕಣಿವೆಯಲ್ಲಿ ಶವವಾಗಿ ಪತ್ತೆಯಾಗಿ ಇದು ಆತ್ಮಹತ್ಯೆಯಲ್ಲ ಹತ್ಯೆ ಎಂಬ ಅನುಮಾನವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದು ತಾಲೂಕು ಕುರುಬರ ಸಂಘವು ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ. ಮತ್ತೆರಡು ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು ಇವಕ್ಕೆ ಪ್ರೇಮ ಪ್ರಕರಣವೆಂದು ವ್ಯಾಪಕವಾಗಿ ಸುದ್ದಿ ಹಬ್ಬಿದ್ದು, ಪೋಷಕರಿಗೆ ಸತ್ಯಗೊತ್ತಿದ್ದರೂ ನಿಜ ಕಾರಣವನ್ನು ಮರೆಮಾಚಲಾಗುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿರುವುದರಿಂದ ತಮ್ಮ ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸುವುದೇ ಬೇಡ ಎಂಬ ತೀರ್ಮಾನಕ್ಕೂ ಕೆಲವರು ಬಂದಿದ್ದಾರೆನ್ನಲಾಗಿದೆ.
ಆರೋಪಿಗಳ ಪತ್ತೆಗೆ ಆಗ್ರಹಿಸಿ ಎಸ್ಎಫ್ಐ ಪ್ರತಿಭಟನೆ
ಚಿಂತಾಮಣಿ: ನೇತ್ರಾಳ ಸಾವಿನ ಹಿಂದೆ ಇರುವ ರಸಹ್ಯವನ್ನು ಬಯಲು ಮಾಡಿ ತಪ್ಪಿತಸ್ಥರ ಆರೋಪಿಗಳ ಪತ್ತೆ ಹಚ್ಚಿ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಎಸ್ಎಫ್ಐ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ವೀರದಿಮ್ಮಮನ ಕಣಿವೆಯಲ್ಲಿ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನೇತ್ರಾಳ ಶವ ದೊರೆತಿದ್ದು,ಸಹಜ ಸಾವನ್ನು ಎಂದು ಬಿಂಬಿಸಲಾಗಿದೆಯೆಂದು ಎಸ್ಎಫ್ಐ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪಟ್ಟಣದಲ್ಲಿನ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ನೇತ್ರಾಳ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಕ:ಕೇರಿ ಮುಂಭಾಗದಲ್ಲಿ ವಿದ್ಯಾರ್ಥಿಗಳು ಹಲವು ತಾಸುಗಳ ಸಮಯ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ನ ಜಿಲ್ಲಾ ಮುಖಂಡ ಕುಂದಲಗುರ್ಕಿ ಮುನೇಂದ್ರ ಮಾತನಾಡಿ ನೇತ್ರಾ ಸಾವಿನ ಬಗ್ಗೆ ಸಿಓಡಿ ತನಿಖೆ ಆಗಬೇಕೆಂದು ಒತ್ತಾಯಿಸಿದರು. ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಅವರಿಗೆ ಮನವಿ ಪತ್ರವನ್ನು ನೀಡಿದರು. ಈ ಘಟನೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮದುಲತಾ, ಮುಖಂಡರಾದ ಬಾಬುರೆಡ್ಡಿ, ರವಿ, ರಜನಿಕಾಂತ್,ನರಸಿಂಹಮೂರ್ತಿ, ಸ್ವಾತಿ, ನಂದಿನಿ, ವೀಣಾ, ಲಥಾ, ಕಾವ್ಯ ಸೇರಿ ನೂರಾರು ವಿದ್ಯಾರ್ಥಿಗಳು ಇದ್ದರು.
ಪ್ರಾಂತ ರೈತ ಸಂಘದ ಧರಣಿ ಅಂತ್ಯ
ಗುಡಿಬಂಡೆ: 13ನೇ ಹಣಕಾಸು ಯೋಜನೆಯಲ್ಲಿ ಹಣ ದುರುಪಯೋಗವಾಗಿದ್ದು ತನಿಖೆ ಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ರೈತಸಂಘ ಮತ್ತು ಸಿಐಟಿಯು ಕಾರ್ಯಕರ್ತರು ತಾಲೂಕಿನ ಸೋಮೇನಹಳ್ಳಿ ಗ್ರಾಪಂ ಕಚೇರಿಗೆ ಬೀಗ ಹಾಕಿ ನಡೆಸುತ್ತಿದ್ದ ಪ್ರತಿಭಟನೆ ಅಧಿಕಾರಿಗಳು ನೀಡಿದ ಭರವಸೆಯಿಂದಾಗಿ ಅಂತ್ಯ ಕಂಡಿದೆ. ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತರೈತ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಬೇಡಿಕೆಗಳನ್ನು ಅಧಿಕಾರಿಗಳು ಈಡೆರಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಪ್ರತಿಭಟನೆ ವಾಪಸ್ಸು ಪಡೆಯುತ್ತಿದ್ದು, ಬೇಡಿಕೆಗಳ ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ತಾಪಂ ಉಪಾಧ್ಯಕ್ಷ ಆದಿನಾರಾಯಣಪ್ಪ, ಗ್ರಾಪಂ ಸದಸ್ಯ ಜೆ.ಆರ್. ವೆಂಕಟೇಶ್ ಇದ್ದರು.
ಬೀದಿ ನಾಯಿ ಹಾವಳಿ ತಪ್ಪಿಸಲು ಮನವಿ
ಶ್ರೀನಿವಾಸಪುರ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿ ನಾಗರಿಕರು ಭೀತಿಗೊಂಡಿದ್ದಾರೆ. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಸಂಚರಿಸಿ ನಾಗರಿಕರ ಮೇಲೆ ದಾಳಿ ಮಾಡುತ್ತಿವೆ. ಇದರ ಜೊತೆಗೆ ಕುರಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಈ ಬಗ್ಗೆ ಪುರಸಭೆಗೆ ತಿಳಿಸಿದರೂ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆರೋಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

