ಪಾದಯಾತ್ರೆಗೆ ಚಾಲನೆ
ಮಾಲೂರು: ವರ್ತೂರು ಕೆರೆ ನೀರನ್ನು ಶುದ್ಧೀಕರಿಸಿ ಮಾಲೂರು-ಬಂಗಾರಪೇಟೆ ತಾಲೂಕಿನ ಕೆರೆಗಳಿಗೆ ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಶೀಘ್ರ ಜಾರಿ ಮಾಡಬೇಕೆಂಬ ಮನವಿ ಸಲ್ಲಿಸಲು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಅವರ ಬೆಂಬಲಿಗರು ಮಾಲೂರಿನಿಂದ ಬೆಂಗಳೂರಿನ ವಿಧಾನ ಸೌಧದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಗ್ರಾಮದೇವತೆ ಮಾರಿಕಾಂಭ ದೇವಾಲಯದಲ್ಲಿ ವಿಶೇಷ ಪೊಜೆ ಸಲ್ಲಿಸಿ ಪಾದಯಾತ್ರಗೆ ಚಾಲನೆ ನೀಡಿದ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟ್ರ್ ಅವರು ಈ ಯೋಜನೆಗೆ 150 ಕೋಟಿ ರು.ಗಳನ್ನು ಮಂಜೂರು ಮಾಡಿದ್ದರು. ಆದರೆ ರಾಜ್ಯದಲ್ಲಿ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಬಂದಿದ್ದು, ಈಗಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ನೆನಗುದಿಗೆ ಬಿದ್ದಿದೆ ಎಂದರು. ಪಾದಯಾತ್ರೆ ಹೊಸಕೋಟೆ ಹಾಗೂ ಅಲಸೂರಿನಲ್ಲಿ ವಿಶ್ರಾಂತಿ ನಂತರ 14 ರಂದು ಮುಖ್ಯಮಂತ್ರಿಗಳನ್ನು ಕೇಂದ್ರ ಸಚಿವರ ಸಮ್ಮುಖದಲ್ಲಿ ಭೇಟಿ ಮಾಡಿ ಯೋಜನೆ ಚಾಲನೆ ನೀಡುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಪಾದಯಾತ್ರೆಯಲ್ಲಿ ಜಿಪಂ ಸದಸ್ಯ ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ, ಕೃಷ್ಣಪ್ಪ, ಲೋಕೇಶ್, ಗೋಪಾಲ್ಗೌಡ, ಮಾಸ್ತಿ ಚಂದ್ರಪ್ಪ ಭಾಗವಹಿಸಿದ್ದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಕೆಜಿಎಫ್: ಮಕ್ಕಳ ದಿನಾಚರಣೆ ಪ್ರಯುಕ್ತ ನಗರದ ವಿವಿಧ ಶಾಲೆಗಳಲ್ಲಿ ಸೇರಿದಂತೆ ಮಹಾವೀಜ್ ಜೈನ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು.
ಟಿಪ್ಪುಸುಲ್ತಾನ್, ಮದಕರಿನಾಯಕ, ಅಶೋಕ್ ಚಕ್ರವರ್ತಿ, ವೀರ ಶಿವಾಜಿ ಹಾಗೂ ಮಹಾರಾಜ ಮಹಾರಾಣಿ, ಪ್ರಾಣಿಗಳ ವೇಶಭೂಷಣಗಳನ್ನು ತೊಟ್ಟು ವಿವಿಧ ಪಾತ್ರಗಳಲ್ಲಿ ಭಾಗವಹಿಸಿದ್ದರು. ವೇದಿಕೆಯ ಮೇಲೆ ವಿವಿಧ ರೀತಿಯ ವೇಷಗಳೊಂದಿಗೆ ಮೆರೆದ ಪುಟಾಣಿ ಮಕ್ಕಳ ಆಕರ್ಷಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಕ್ಕಳ ತೆದೆ ತಾಯಂದಿರು ಮತ್ತು ಪೋಷಕರು ನೆರೆದಿದ್ದರು.
ಅದೇ ರೀತಿ ಶಾಲಾ ಶಿಕ್ಷಕ ಶಿಕ್ಷಕಿಯರು ಮತ್ತು ಮಹಾವೀರ್ ಜೈನ್ ಶಾಲೆಯ ಮುಖ್ಯಸ್ಥರು ಮಕ್ಕಳ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿವಿಧ ಸಾಂಸ್ಕೃತಿಕ ಮತ್ತು ನಾಟಕಗಳಲ್ಲಿ ಪಾಲ್ಗೊಂಡಿದ್ದ ಪುಟಾಣಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಾತು.
ಮೊನ್ಸಾಂಟೋದಿಂದ ಕುಡಿವ ನೀರು ಪೊರೈಕೆ
ಗೌರಿಬಿದನೂರು: ಮೊನ್ಸಾಂಟೋ ಮತ್ತು ಎಎಫ್ಟಿಆರ್ಒ ಸಂಸ್ಥೆ ಕಲ್ಲಿನಾಯಕನಹಳ್ಳಿಯಲ್ಲಿ ಬೋರ್ವೆಲ್ ಹಾಕಿಸುವ ಮೂಲಕ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸಿದೆ ಎಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು. ತಾಲೂಕಿನ ತೊಂಡೇಭಾವಿ ಹೋಬಳಿ ಕಲ್ಲಿನಾಯಕನಹಳ್ಳಿಯಲ್ಲಿ ಬೋರ್ವೆಲ್ಗೆ ಚಾಲನೆ ನೀಡಿ ಮಾತನಾಡಿ, ಮಾನ್ಸಾಂಟೋ ಕಂಪನಿಯಿಂದ ಶುದ್ಧ ಕುಡಿಯುವ ನೀರನ್ನು ವ್ಯವಸ್ಥೆಗಳಿಸಿರುವುದು ಗ್ರಾಮೀಣ ಜನರಿಗೆ ಆರೋಗ್ಯವನ್ನು ಹೆಚ್ಚಿಸಲಿದೆ ಎಂದರು.
ಮೊನ್ಸ್ಯಾಂಟೊ ಮತ್ತು ಆಕ್ಷನ್ ಫಾರ್ ಫುಡ್ ಫ್ರೊಡೆಕ್ಷನ್(ಎಎಫ್ಪಿಆರ್ಒ) ಪಾಲುದಾರಿಕೆಯಲ್ಲಿ ಬೋರ್ವೆಲ್ ಸ್ಥಾಪಿಸಿದೆ. ಸಂಸ್ಥೆ ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು. ಮೊನ್ಸ್ಯಾಂಟೊ ಇಂಡಿಯಾ ಜೋಳ, ತರಕಾರಿ ಮತ್ತು ಹತ್ತಿ ಬೀಜಗಳನ್ನು ಉತ್ಪಾದಿಸುತ್ತಿದೆ. ಮೊಬೈಲ್ ಆಧಾರಿತ ಕೃಷಿ ಮಾಹಿತಿ ಸೇವೆ ನೀಡುತ್ತಿದೆ. 800,000ಕ್ಕೂ ಹೆಚ್ಚು ರೈತರು ಬಿತ್ತನೆ ಮಾಡಿದ್ದಾರೆ. 6 ರಾಜ್ಯ ಸರ್ಕಾರಗಳೊಂದಿಗೆ ಖಾಸಗಿ ಸರ್ಕಾರಿ ಸಹಭಾಗಿತ್ವ ಹೊಂದಿದೆ ಎಂದರು.
ಸ್ಮಶಾನದಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹ
ಶಿಡ್ಲಘಟ್ಟ: ಪಟ್ಟಣದ ದಲಿತರ ಸ್ಮಶಾನದಲ್ಲಿ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಅಂತ್ಯ ಸಂಸ್ಕಾರಕ್ಕಾಗಿ ಶೇ.22.75 ರ ಅನುಧಾನದಲ್ಲಿ ಸಹಾಯಧನ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಚನ್ನರಾಯಪ್ಪ ಅವರಿಗೆ ಸಿದ್ದಾರ್ಥನಗರದ ನಾಗರಿಕರು ಮನವಿ ಸಲ್ಲಿಸಿದರು. ಪಟ್ಟಣದ ಸಿದ್ದಾರ್ಥನಗರ, ಎ.ಕೆ. ಕಾಲೋನಿ ಸೇರಿದಂತೆ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿರುವ ದಲಿತ ಕುಟುಂಬಗಳಲ್ಲಿ ಮೃತರಾದ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕಾಗಿ ಕನಿಷ್ಠ ರು. 5000 ಸಹಾಯಧನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕೆ. ಮಂಜುನಾಥ್, ರಾಮು, ಸುಹೇಲ್, ವಿ. ವೆಂಕಟೇಶ್, ದೇವರಾಜು, ಯೇಸುರತ್ನಂ, ನರಸಿಂಹ, ಮುರಳಿ ಇದ್ದರು.
ಕಂಗಾನಹಳ್ಳಿಯಲ್ಲಿ ಸೀತಾರಾಂಜನೇಯ ಸ್ವಾಮಿ ದೇಗುಲದಲ್ಲಿ ಪಂಡರಿ ಭಜನೆ
ಚಿಂತಾಮಣಿ: ತಾಲೂಕಿನ ಕಂಗಾನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸೀತಾರಾಂಜನೇಯ ಸ್ವಾಮಿ ದೇಗುಲದಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ಹುಣ್ಣಿಮೆ ಪ್ರಯುಕ್ತ ಪಂಡರಿ ಭಜನೆ ನಾಯನಹಳ್ಳಿ ಶ್ರೀ ಕೋದಂಡ ರಾಮಸ್ವಾಮಿ ಭಜನಾ ಮಂಡಳಿ ಹಮ್ಮಿಕೊಳ್ಳಲಾಗಿದೆ.
ಹುಣ್ಣಿಮೆ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಾಮಿಯವರಿಗೆ ಅಭಿಷೇಕ ಮತ್ತು ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಆದುದರಿಂದ ಭಕ್ತಾಧಿಗಳು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕಂಗಾನಹಳ್ಳಿ ಶ್ರೀ ಸೀತಾರಾಂಜನೇಯ ಸ್ವಾಮಿ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದ್ದಾರೆ.
ಸಿಬಿಐನಿಂದ ತಪ್ಪಿಸಿಕೊಳ್ಳಲು ಕೃಷ್ಣಯ್ಯಶೆಟ್ಟಿ ನಾಟಕ: ಮಂಜುನಾಥ್
ಟೇಕಲ್: ಮಾಜಿ ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಸಿಬಿಐನಿಂದ ತಪ್ಪಿಸಿಕೊಳ್ಳಲು ಕಾಂಗ್ರೇಸ್ ಸೇರಲು ಮುಂದಾಗಿದ್ದಾರೆ ಎಂದು ಶಾಸಕ ಮಂಜುನಾಥಗೌಡ ಆರೋಪಿಸಿದರು. ಅವರು ಟೇಕಲಲ್ನ ಬನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪನವರನ್ನು ಬೆಂಬಲಿಸಲು ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ ವರ್ತೂರು ಕೆರೆಯ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿದರು. ಬಿ.ಜಿ. ಮುನಿಶಾಮಿಗೌಡ, ಹನುಮಂತಪ್ಪ, ಕೆ.ಬಿ. ನಾರಾಯಣಸ್ವಾಮಿ, ಶೆಟ್ಟಹಳ್ಳಿ ರಾಮಮೂರ್ತಿ, ಬಿ.ಜಿ. ಸತೀಶ್, ಟೇಕಲ್ ಆಂಜಿನಪ್ಪ ಇದ್ದರು.
ಕನಕ ಜಯಂತಿ; ಪೂರ್ವಭಾವಿ ಸಭೆ
ಮಾಲೂರು: ಕನಕ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲು ಸಹಕರಿಸಬೇಕೆಂದು ಶಾಸಕ ಕೆ.ಎಸ್. ಮಂಜುನಾಥ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಕನಕ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಾಲೆ ಕಾಲೇಜುಗಳಲ್ಲಿ ಶಿಕ್ಷಣ ಇಲಾಖೆ ಸಹಕಾರದಲ್ಲಿ ಕನಕರ ವಿಚಾರ ಸಂಕಿರಣ, ಪ್ರಭಂಧ ಸ್ವರ್ಧೆಗಳನ್ನು ಆಯೋಜಿಸಿ ವಿಜೇತರನ್ನು ಕನಕ ಜಯಂತಿ ಕಾರ್ಯಕ್ರಮದಲ್ಲಿ ಗೌರವಿಸಲು ತೀರ್ಮಾನಿಸಿರುವುದಾಗಿ ಹೇಳಿದರು. ತಹಸೀಲ್ದಾರ್ ಡಾ.ಸುಧಾ ಮಾತನಾಡಿ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕನಕ ಜಯಂತಿ ದಿನ ದಾಸಶ್ರೇಷ್ಠರ ಭಾವಚಿತ್ರಕ್ಕೆ ಗೌರವದ ಪೂಜೆ ಸಲ್ಲಿಸಿ ನಂತರ ಎಲ್ಲ ಅಧಿಕಾರಿಗಳು ಪಟ್ಟಣದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಕುರುಬ ಸಮುದಾಯದ ಮುಖಂಡ ಎಂ.ವಿ. ಹನುಮಂತಯ್ಯ, ಅಂಜನಿ ಸೋಮಣ್ಣ ಮಾತನಾಡಿದರು. ಕ್ಷೇತ್ರಾಶಿಕ್ಷಣಾಧಿಕಾರಿ ಸುಬ್ರಮಣಿ, ತೋಟಾಗಾರಿಕ ಇಲಾಖೆ ಅಧಿಕಾರಿ ಆನಂದ್, ಇಒ ಸಂಜೀವಯ್ಯ, ಪ್ರಾಂಶುಪಾಲ ವೆಂಕಟೇಶಪ್ಪ, ರಾಮಕೃಷ್ಣ, ಎಟ್ಟಕೋಡಿ ವೀರಭದ್ರಪ್ಪ ಇದ್ದರು.
ಹಳೇ ದ್ವೇಷ; ಮಾರಕಾಸ್ತ್ರಗಳಿಂದ ಹಲ್ಲೆ
ಕೆಜಿಎಫ್: ಹಳೇ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ. ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಹೆನ್ರೀ ಎಂಬುವರ ಮನೆಯ ಮೇಲೆ ಅದೇ ವ್ಯಾಪ್ತಿಯ ನಿವಾಸಿಗಳಾದ ವಿನೋದ್, ನಾಯಗನ್, ಶಾಹುಲ್ ಮತ್ತು ರೂಬಿನ್ ಎಂಬವರು ಹಳೇ ದ್ವೇಷದ ಹಿನ್ನಲೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಧಿಸಿ ಹೆನ್ರೀ ಅವರು ಆಂಡ್ರಸನ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಕುಪಿತಗೊಂಡ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಹೆನ್ರೀ ಕೆಲಸ ಮಾಡುತ್ತಿದ್ದ ಅಂಗಡಿಯ ಬಳಿ ಬಂದು ಲಾಂಗ್ ಮಚ್ಚುಗಳಿಂದ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಕುರಿತು ಸೋಮವಾರ ಸಂಜೆ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಫಟ್ ಅವರು ನಗರ ವೀಕ್ಷಣೆಗೆ ಆಗಮಿಸಿದ್ದ ವೇಳೆ ಹೆನ್ರೀ ಮತ್ತು ಅವರ ಪತ್ನಿ ದೂರು ನೀಡಿದ ಹಿನ್ನಲೆಯಲ್ಲಿ ಆಂಡ್ರಸನ್ಪೇಟೆ ಮತ್ತು ರಾಬರ್ಟ್ಸನ್ಪೇಟೆ ಪೊಲೀಸ್ ಅಧಿಕಾರಿಗಳಿಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅವರ ಆದೇಶದ ಮೇರೆಗ ಕೊಲೆ ಯತ್ನ ದೂರು ದಾಖಲಿಸಿಕೊಂಡ ಪೊಲೀಸರು ವಿನೋದ್ ಮತ್ತು ನಾಯಗನ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

