ಕೋಲಾರ

ಫಿಲಿಫೈನ್ಸ್‌ನಲ್ಲೂ ಭೂ ಚೇತನ ಜಾರಿ ಯತ್ನ

Published On :

ಕ.ಪ್ರ.ವಾರ್ತೆ ,  ಕೋಲಾರ ,  ನ.13
ಕರ್ನಾಟಕದಲ್ಲಿ ಭೂ ಚೇತನ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಅನುಷ್ಟಾನಕ್ಕೆ ತರಲಾಗಿದ್ದು ಇದೇ ರೀತಿಯಲ್ಲಿ ಫಿಲಿಫೈನ್ಸೆ ದೇಶದಲ್ಲೂ ಯೋಜನೆ ಜಾರಿಗೆ ಪ್ರಯತ್ನಿಸುವುದಾಗಿ ಫಿಲಿಪೈನ್ಸೆನ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತಿಳಿಸಿದರು.
ಕರ್ನಾಟಕ ಪ್ರವಾಸ ಕೈಗೊಂಡಿರುವ ಫಿಲಿಫೈನ್ಸೆ ದೇಶದ ಕೃಷಿ ವಿಜ್ಞಾನಿಗಳಾದ ರ್ಯಾನ್ಯೊಟೊ, ಹೆಚ್.ಎಲ್. ಲಯೂನ್, ಜೆಯಬಿ.ಸುನೇಲ್, ರೆ.ಹೆಚ್.ಲೆಕ್ಸ್, ಜೋಸೆಫ್ ಹಾಗೂ ರೊಜೇಲ್ಸ್ ಅವರು ಬುಧವಾರ ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಚೌಡದೇನಹಳ್ಳಿ ಮತ್ತಿತರ ಕಡೆ ರೈತರ ಹೊಲಗಳಿಗೆ ಭೇಟಿ ನೀಡಿ ಭೂ ಚೇತನದಿಂದ ಆಗಿರುವ ಪ್ರಯೋಜನದ ಬಗ್ಗೆ ರೈತರಿಂದ ಮಾಹಿತಿ ಪಡೆದರು.
ಭೂಚೇತನ ಯೋಜನೆಯ ಉದ್ದೇಶ ಹಾಗೂ ಕಾರ್ಯತಂತ್ರಗಳ, ಮಣ್ಣು ಪರೀಕ್ಷೆ ಆಧಾರದ ಮೇಲೆ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ, ಅವುಗಳನ್ನು ಸರಿದೂಗಿಸಲು ಅಳವಡಿಸಬೇಕಾದ ವಿಧಾನಗಳು, ಲಘು ಪೋಷಕಾಂಶಗಳ ಬಳಕೆ ಹಾಗೂ ಸಮತೋಲನ ಪೋಷಕಾಂಶಗಳನ್ನು ಒದಗಿಸಲು ಸಾವಯವ ಗೊಬ್ಬರ ಬಳಕೆ ಇತರೆ ವಿಷಯಗಳ ಬಗ್ಗೆ ತಂಡ ಜಿಲ್ಲಾ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿತು.
ನರಸಾಪುರ ಹೋಬಳಿಯ ಚೌಡದೇನಹಳ್ಳಿಯಲ್ಲಿ ಸೊಣ್ಣೇಗೌಡ ಎಂಬುವರು  ಟ್ರ್ಯಾಕ್ಟರ್ ಚಾಲಿತ ಬಿತ್ತನೆ ಕಾರ್ಯದ ಮೂಲಕ ಬೆಳೆದಿರುವ ರಾಗಿ ಬೆಳೆ, ಸುಗಟೂರು ಹೋಬಳಿಯ ನಾಗನಾಳ ಗ್ರಾಮದ ಮಂಜುಳ ಅವರು ಬೆಳೆದಿರುವ ರಾಗಿ ಮತ್ತು ಅವರೆ ಅಂತರಬೆಳೆ, ತೊಟ್ಲಿ ಗ್ರಾಮದ ರೈತರ ಮುಸುಕಿನ ಜೋಳ ಹಾಗೂ ಚಿಟ್ನಹಳ್ಳಿ ಗ್ರಾಮದ ಅಶ್ವಥ್ಥಪ್ಪ ಬೆಳೆದಿರುವ ತೊಗರಿ ಬೆಳೆ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರಲ್ಲದೆ, ರೈತರೊಂದಿಗೆ ಬೆಳೆಯ ವಿಚಾರವಾಗಿ ಚರ್ಚಿಸಿದರು.
ಜಂಟಿ ಕೃಷಿ ನಿರ್ದೇಶಕ ಚಿಕ್ಕಣ್ಣ, ಸಹಾಯಕ ಕೃಷಿ ನಿರ್ದೇಶಕಿ ಎಂ. ಗಾಯಿತ್ರಿ, ನರಸಾಪುರ ಹೋಬಳಿಯ ಕಣಷಿ ಅಧಿಕಾರಿ ಕೆ. ಮಂಜುನಾಥ, ಸುಗಟೂರು ಹೋಬಳಿಯ ಸಹಾಯಕ ಕೃಷಿ ಅಧಿಕಾರಿ ಎನ್. ಸುನಿಲ್ ಕುಮಾರ್, ಇಕ್ರಿಸ್ಯಾಟ್ ಸಂಸ್ಥೆಯ ವೈಜ್ಞಾನಿಕ ಅಧಿಕಾರಿ  ಶ್ರೀಗೌರಿ, ತಾಂತ್ರಿಕ ಸಂಶೋಧಕ ಹೆಚ್.ವಿ. ಶಂಕರಪ್ಪ ಹಾಗೂ ಬಸವರಾಜ್, ಕೃಷಿ ಇಲಾಖೆಯ ರೈತರ ಅನುವುಗಾರರು ಮತ್ತು ರೈತರು ಹಾಜರಿದ್ದರು.
ಲಘು ಲವಣಾಂಶಗಳ ಬಳಕೆಯಿಂದ ಕೋಲಾರ ಜಿಲ್ಲೆಯ ರೈತರು ಹೆಚ್ಚು ಇಳುವರಿಯನ್ನು ಕಂಡುಕೊಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಫಿಲಿಫೈನ್ಸೆ ವಿಜ್ಞಾನಿಗಳು ಕರ್ನಾಟಕದ ತುಮಕೂರು ಇನ್ನಿತರ ಕಡೆಯೂ ಭೂ ಚೇತನ ಉತ್ತಮ ರೀತಿಯಲ್ಲಿ ರೈತರಿಗೆ ಅನುಕೂಲವಾಗಿದ್ದು, ನಮ್ಮ ದೇಶದಲ್ಲೂ ಈ ರೀತಿಯ ಪದ್ಧತಿ ಜಾರಿಗಾಗಿ ನಮ್ಮ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.