ರಾಜಕೀಯ ದುರುದ್ದೇಶದಿಂದ ಹೋರಾಟ
ಬಾಗೇಪಲ್ಲಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಶಾದಿಭಾಗ್ಯ ಯೋಜನೆಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ರಾಜಕೀಯ ದುರುದ್ದೇಶದಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ತಾಲೂಕಿನ ಗೂಳೂರು ನಿಡುಮಾಮಿಡಿ ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿ, ಸಮಾಜಮುಖಿ ಸಲಹೆಗಳನ್ನು ಯಾರೇ ನೀಡಿದರೂ ರಾಜ್ಯ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳತ್ತದೆ. ಜನರ ನಿರೀಕ್ಷೆಗೆ ಅನುಗುಣವಾಗಿ ಉತ್ತಮ ಆಡಳಿತ ನೀಡುವುದೇ ನಮ್ಮ ಉದ್ದೇಶ. ಇಂಥ ಸಂದರ್ಭದಲ್ಲಿ ಟೀಕೆ ಟಿಪ್ಪಣಿ ಬರುವುದು ಸಹಜವಾದರೂ ಜನರ ಹಿತವೇ ಮುಖ್ಯವಾಗುತ್ತದೆ ಎಂದರು.
ಭರವಸೆಗಳ ಈಡೇರಿಕೆ: ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ನೀಡಿದ ಭರವಸೆಗಳನ್ನು ಸೇರಿಸಿಕೊಂಡು ಕಳೆದ ಬಜೆಟ್‌ನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಲಾಯಿತು. ಈಗಾಗಲೇ ಕೊಟ್ಟ ಭರವಸೆಗಳಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ, ರೈತರ ಸಾಲ ಮನ್ನಾ ಸೌಲಭ್ಯ ಸೇರಿದಂತೆ ಅನೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಇದೇ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗಾಗಿ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತರುವುದರ ಬಗ್ಗೆಯೂ ತಿಳಿಸಲಾಗಿತ್ತು. ಬಜೆಟ್ ಚರ್ಚೆಯ ಸಂದರ್ಭದಲ್ಲಿ ಶಾದಿಭಾಗ್ಯ ಯೋಜನೆಯ ಬಗ್ಗೆ ಚರ್ಚಿಸುವಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರೂ ಇದ್ದರು.
ಆದರೆ, ಆಗ ಅವರು ವಿರೋಧಿಸದೇ ಸುಮ್ಮನಿದ್ದು ಈಗ ರಾಜಕೀಯ ದುರುದ್ದೇಶದಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಎಲ್ಲ ಬಡ ಹೆಣ್ಣು ಮಕ್ಕಳಿಗೂ ಅನುಕೂಲವಾಗುವಂತೆ ಶಾದಿ ಭಾಗ್ಯ ಯೋಜನೆಯನ್ನು ವಿಸ್ತರಿಸುವ ಬಗ್ಗೆ ತಿಳಿಸಲಾಗಿದೆ ಎಂದರು.
ಮೌಢ್ಯದ ಗೊಂದಲ ಬೇಡ: ರಾಜ್ಯ ಸರ್ಕಾರ ಮೌಢ್ಯ ಮುಕ್ತ ಸಮಾಜ ನಿರ್ಮಾಣ ಮಾಡಲು ಈಗಲೂ ಬದ್ಧವಾಗಿದೆ. ಮೂಢನಂಬಿಕೆ ಪ್ರತಿಬಂಧಕ ಕರಡಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ನಂತರವಷ್ಟೇ ಸಮಾಜದ ದಿಕ್ಕು ತಪ್ಪಿಸುವ ಮೌಢ್ಯ ಪದ್ಧತಿಗಳನ್ನು ಮಾತ್ರ ನಿರ್ಮೂಲನೆ ಮಾಡಲಾಗುತ್ತದೆ ಎಂದರು.
ಈಗ ಕೇವಲ ಮೂಢನಂಬಿಕೆ ಪ್ರತಿಬಂಧಕ ಕರಡಿನ ವರದಿಯನ್ನು ಪಡೆದುಕೊಳ್ಳಲಾಗಿದೆಯಷ್ಟೇ. ಮುಂದೆ ಪ್ರಬಲ ಕಾಯ್ದೆಯನ್ನಾಗಿಸಲು ವರದಿಯ ಬಗ್ಗೆ ಸುವಿಸ್ತಾರವಾಗಿ ಚರ್ಚೆ ನಡೆಸಲಾಗುತ್ತದಲ್ಲದೇ ಜನರ ಅಭಿಪ್ರಾಯಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ. ಸಮಗ್ರ ಜನಾಭಿಪ್ರಾಯವನ್ನು ತಿಳಿದುಕೊಂಡು ಆ ನಂತರ ಜನರ ದಿಕ್ಕು ತಪ್ಪಿಸುವ ಮೂಢ ಪದ್ಧತಿಗಳನ್ನು ಮಾತ್ರ ದೂರ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿದರು.
ಆಂಧ್ರದ ಗಡಿಭಾಗದಲ್ಲಿರುವ ನಿಡುಮಾಮಿಡಿ ಮಠ ಅನೇಕ ವರ್ಷಗಳಿಂದ ಉತ್ತಮವಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಮಠಕ್ಕೆ 2 ಕೋಟಿ ನೀಡುವುದಾಗಿ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

