ವಿದ್ಯಾರ್ಥಿನಿ ನೇತ್ರಾ ನಿಗೂಢ ಸಾವು: ಭುಗಿಲೆದ್ದ ಆಕ್ರೋಶ
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ವಿದ್ಯಾರ್ಥಿನಿಯೊಬ್ಬಳ ಅನುಮಾನಾಸ್ಪದ ಸಾವು ಜಿಲ್ಲಾದ್ಯಂತ ತೀವ್ರ ಗದ್ದಲವನ್ನುಂಟು ಮಾಡುತ್ತಿದೆ. ಎಸ್ಎಫ್ ಐ, ಎಬಿವಿಪಿ ಸೇರಿದಂತೆ ಅನೇಕ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದು ದಿನೇ ದಿನೇ ಹೋರಾಟದ ಕಾವು ಹೆಚ್ಚಾಗುತ್ತಿದೆ.
ಗೌರಿಬಿದನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೇತ್ರಾಳ ಅನುಮಾನಾಸ್ಪದ ಸಾವು ವಿವಾದ ಉಂಟು ಮಾಡಿದೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವಂತೆ ನಿಜವಾಗಿಯೂ ನೇತ್ರಾ ಸ್ವಯಂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಪ್ರೀತಿಯ ಹೆಸರಿನಲ್ಲಿ ಆಕೆಯನ್ನು ನಂಬಿಸಿ ದೈಹಿಕ ಹಿಂಸೆ ನೀಡಿದ ನಂತರ ಕೊಲೆ ಮಾಡಲಾಗಿದೆ. ಇದರಲ್ಲಿ ಭಾಗಿಯಾಗಿರುವವರಲ್ಲಿ ಪ್ರಭಾವಿ ರಾಜಕೀಯ ಮುಖಂಡರೊಬ್ಬರ ಮಗನ ಪ್ರಮುಖ ಪಾತ್ರವಿರುವುದರಿಂದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಇದರ ಭಾಗವಾಗಿ ಮೃತಳ ಅಮಾಯಕ ಪೋಷಕರ ಮೇಲೆ ಒತ್ತಡ ಹೇರಿದ ಪ್ರಭಾವಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ದ್ವಂದ್ವ ಹೇಳಿಕೆ ಕೊಡಿಸಿದ್ದಾರೆ ಎಂಬ ಆರೋಪಗಳು ವಿವಾದಕ್ಕೆ ಕಾರಣವಾಗಿವೆ.
ಸಾವಿನ ಅನುಮಾನ: ಚಿಕ್ಕಬಳ್ಳಾಪುರ ತಾಲೂಕಿನ ವೀರದಿಮ್ಮಮ್ಮನ ಕಣಿವೆ ನಿರ್ಜನ ಪ್ರದೇಶದಲ್ಲಿ ನ.1 ರಂದು ಯುವತಿಯೊಬ್ಬಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಲ್ಲಿನ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಮೃತಳು ಗೌರಿಬಿದನೂರಿನ ಕಲ್ಲರಹಳ್ಳಿ ಬಡಾವಣೆಯ ನಾರಾಯಣಪ್ಪ ಮಗಳು ನೇತ್ರಾ ಎಂದು ತಿಳಿದು ಬಂತು. ಈ ಸಂದರ್ಭದಲ್ಲಿ ಮೃತಳ ತಂದೆ ಆಗಾಗ ಹೊಟ್ಟೆ ನೋವು ಬರುತ್ತಿದ್ದರಿಂದ ವಿಷ ಸೇವಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ತಿಳಿಸಿದ್ದರು. ಆದರೆ, ನೇತ್ರಾಳ ಸಾವಿನ ನಡುವೆ ನಡೆದ ಕೆಲ ಘಟನೆಗಳು ಅನುಮಾನಗಳನ್ನು ಹುಟ್ಟು ಹಾಕಿದಲ್ಲದೇ ಒತ್ತಡಕ್ಕೆ ಸಿಲುಕಿದಂತಿರುವ ಮೃತಳ ಪೋಷಕರ ವರ್ತನೆ ಅನೇಕ ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದೆ.
ನೇತ್ರಾ ಹೊಟ್ಟೆ ನೋವಿನಿಂದ ಸ್ವಯಂ ಆತ್ಮಹತ್ಯೆ ಮಾಡಿಕೊಂಡಳೇ, ಇಲ್ಲವೇ ಪ್ರೀತಿಯ ಬಲೆಯಲ್ಲಿ ವಂಚನೆಗೆ ಗುರಿಯಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳೇ ಅಥವಾ ಆಕೆಯನ್ನು ದುರುಳರು ವೀರದಿಮ್ಮಮ್ಮನ ಕಣಿವೆಗೆ ಕರೆದುಕೊಂಡು ಬಂದು ದೈಹಿಕ ಹಿಂಸೆ ನೀಡಿ ಕೊಲೆ ಮಾಡಿದರೆ, ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆಯೇ ಎನ್ನುವುದೇ ಇದೀಗ ಜಿಲ್ಲೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ನಡುವೆ ಮೃತಳ ಪೋಷಕರು ಕೈಗೆ ಸಿಗದೇ ದೂರ ಉಳಿಯುತ್ತಿರುವುದು, ಸಂಬಂಧಿಕರು ಬಾಯಿ ಬಿಡದಿರುವುದು ಇನ್ನೂ ತೀವ್ರವಾದ ಹೋರಾಟಗಳಿಗೆ ನಾಂದಿ ಹಾಡಿವೆ.
ಸಂಘಟನೆಗಳ ಆರೋಪ: ನೇತ್ರಾಳ ಸಾವಿನ ಹಿಂದೆಯಿರುವ ಸತ್ಯಾಂಶವನ್ನು ಮುಚ್ಚಿ ಹಾಕಲು ರಾಜಕೀಯ ಮುಖಂಡರು ಪ್ರಭಾವ ಬೀರುತ್ತಿದ್ದಾರೆ. ಮೃತಳ ಪೋಷಕರೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸುವ ಮೂಲಕ ಸುಳ್ಳು ಹೇಳಿಕೆ ಕೊಡಿಸುತ್ತಿದ್ದಾರೆ ಎನ್ನುವುದು ಸಂಘಟನೆಗಳ ಗಂಭೀರ ಆರೋಪವಾಗಿದೆ. ಮೃತಳ ತಂದೆಗೆ ನೇತ್ರಾಳ ಕಾಣಿಯಾಗಿರುವ ಬಗ್ಗೆ ಅನೇಕ ಬಾರಿ ದೂರವಾಣಿ ಮೂಲಕ ಮಾಹಿತಿ ಕೇಳಿದ ಅನಾಮಧೇಯ ವ್ಯಕ್ತಿಗಳು ನಂತರ ವೀರದಿಮ್ಮಮ್ಮನ ಕಣಿವೆಯಲ್ಲಿ ನೇತ್ರಾ ಸಾವನ್ನಪ್ಪಿರುವ ಬಗ್ಗೆ ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಶವ ಪತ್ತೆಯಾಗಿದ್ದು ನೇತ್ರಾಳ ಬಗ್ಗೆ ವಿಚಾರಿಸುತ್ತ ಮಾಹಿತಿ ನೀಡಿದ ಅನಾಮಧೇಯ ವ್ಯಕ್ತಿಗಳು ಯಾರು ಎನ್ನುವುದು ನಿಗೂಢವಾಗಿದೆ.
ಇಲ್ಲಿಗೆ ನೇತ್ರಾಳನ್ನು ಯಾರೋ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮತ್ತೊಂದೆಡೆ ನೇತ್ರಾಳ ಸಾವಿನ ಹಿಂದೆಯಿರುವ ತಮ್ಮವರಿಗೆ ಏನೂ ಆಗಬಾರದೆಂದು ರಾಜಕೀಯ ಮುಖಂಡರು ಪ್ರಭಾವ ಹೇರುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸುತ್ತಿವೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ನೇತ್ರಾ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ ತಾಲೂಕಿನ ವೀರದಿಮ್ಮಮ್ಮನ ಕಣಿವೆ ನಿರ್ಜನ ಪ್ರದೇಶಕ್ಕೆ ಒಂಟಿಯಾಗಿ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ. ಮಲೆನಾಡಿನಂತಿರುವ ವೀರದಿಮ್ಮಮ್ಮನ ಕಣಿವೆಗೆ ಯಾರಾದರೂ ಆಕೆಯನ್ನು ಕರೆದುಕೊಂಡು ಬಂದಿರಲೇಬೇಕು.
ಪ್ರಮುಖವಾಗಿ ಮೃತಳ ಪೋಷಕರಿಂದ ಮಾಹಿತಿ ಪಡೆದುಕೊಳ್ಳಲು ಅನಾಮಧೇಯ ಕರೆಗಳು ಬಂದಿರುವುದು ನೇತ್ರಾಳ ಸಾವಿನಲ್ಲಿ ಅನ್ಯರ ಕೈವಾಡವಿರುವುದರ ಬಗ್ಗೆ ಪುಷ್ಟಿ ನೀಡುತ್ತಿದೆ ಎಂದೆಲ್ಲಾ ಅನುಮಾನ ವ್ಯಕ್ತಪಡಿಸುವವರು, ರಾಜಕೀಯ ಪ್ರಭಾವ ಬೀರುತ್ತಿರುವುದರಿಂದ ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗುವ ಭರವಸೆಯಿಲ್ಲ. ಪ್ರಭಾವಿಗಳು ಸತ್ಯಾಂಶ ಹೊರಗೆ ಬಾರದಂತೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ.
ಆದರೆ, ಸಣ್ಣಪುಟ್ಟ ವಿಷಯಗಳಿಗೂ ದೊಡ್ಡದಾಗಿ ಪ್ರತಿಕ್ರಿಯೆ ನೀಡುತ್ತಿದ್ದ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸದ್ಯ ಸುಮ್ಮನಿದ್ದರೂ ನಾನಾ ಸಂಘಟನೆಗಳು ತೀವ್ರವಾಗಿ ಜಿಲ್ಲಾದ್ಯಂತ ಹೋರಾಟಗಳು ನಡೆಸುತ್ತಿವೆ. ಆದರೆ, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನವನ್ನು ಹುಟ್ಟಿಸಿರುವ ನೇತ್ರಾಳ ಸಾವಿನ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತ ಕೂರದೇ ತನಿಖೆ ಕೈಗೊಂಡು ಜನರಲ್ಲಿನ ಗೊಂದಲವನ್ನು ಬಗೆಹರಿಸಬೇಕಾಗಿದೆ. ಇಲ್ಲದಿದ್ದಲ್ಲಿ ಹೋರಾಟಗಳು ಇನ್ನೂ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪವನ್ನು ಪಡೆದುಕೊಳ್ಳುವಂತಹ ವಾತಾವರಣ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವುದು ವಾಸ್ತವಾಂಶವಾಗಿದೆ.
ಗುಡಿಬಂಡೆಯಲ್ಲಿ ಎಸ್ಎಫ್ಐ ಧರಣಿ
ಗುಡಿಬಂಡೆ: ವಿದ್ಯಾರ್ಥಿನಿ ನೇತ್ರಾ ಸಾವು ಅನುಮಾನಾಸ್ಪದವಾಗಿರುವುದರಿಂದ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ತಾಲೂಕು ಎಸ್ಎಫ್ಐ ಸಂಘಟನೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿತು.
ಎಸ್ಎಫ್ಐ ಸಂಘಟನೆ ತಾಲೂಕು ಅಧ್ಯಕ್ಷ ಈಶ್ವರಪ್ಪ ಮಾತನಾಡಿ ನೇತ್ರಾ ಕಳೆದ ಅ.22 ರಂದು ಕಾಣೆಯಾಗಿದ್ದರೂ ಆಕೆಯ ಪೋಷಕರು ಅ.26 ರಂದು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ವ್ಯಾಫ್ತಿಯ ಕಣಿವೆ ಬಳಿ ನೇತ್ರಾ ಶವ ಸಿಕ್ಕಾಗ ಪೋಷಕರು ಹೊಟ್ಟೆ ನೋವಿನಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆಕೆ ನಿಜವಾಗಿಯೂ ಹೊಟ್ಟೆ ನೋವಿನಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕಿದ್ದರೆ ಕಣಿವೆ ಬಳಿ ಯಾಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು. ಶವ ಸಿಕ್ಕ ಬಳಿಕ ಮರಣೋತ್ತರ ಪರೀಕ್ಷೆ ಮಾಡದೇ ಶವಸಂಸ್ಕಾರ ಏಕೆ ಮಾಡಲಾಯಿತು. ನೇತ್ರಾ ಸಾವು ನಿಗೂಡದಿಂದ ಕೂಡಿದೆ. ಆಗಾಗಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಘಟನೆಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ತಾಲೂಕು ಕಚೇರಿ ಮುಂದೆ ಬಂದು ಪ್ರತಿಭಟಿಸಿ, ನಂತರ ತಹಸೀಲ್ದಾರ ಶೈಲಜಾರಿಗೆ ಮನವಿ ಪತ್ರ ಸಲ್ಲಿಸಿದರು. ಈ ಪ್ರತಿಭಟನೆ ನೇತೃತ್ವವನ್ನು ಸಂಘಟನೆಯ ತಾಲೂಕು ಕಾರ್ಯದರ್ಶಿ ಸಿ.ವಿ. ಮಂಜುನಾಥ, ನರಸಿಂಹಮೂರ್ತಿ, ಬಾಬು, ಬಾಲಾಜಿ, ರಾಣಿ, ಗೀತಾ, ಮಂಜುಳಾ ಸೇರಿದಂತೆ ಹಲವರು ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

