ಕೋಲಾರ

ನಕಲಿ ಆದಾಯ ತೆರಿಗೆ ಅಧಿಕಾರಿಯಿಂದ ಪಂಗನಾಮ

Published On :

ಚಿಕ್ಕಬಳ್ಳಾಪುರ: ಬಾಡಿಗೆಗೆ ವಾಹನಬೇಕೆಂದು ಕಾರನ್ನು ತರಿಸಿಕೊಂಡ ಆಸಾಮಿಯೊಬ್ಬ ತಾನು ಆದಾಯ ತೆರಿಗೆ ಅಧಿಕಾರಿ ಎಂದೆಲ್ಲಾ ಹೇಳಿ ನಂಬಿಸಿ ಹಂತ ಹಂತವಾಗಿ ಹಣವನ್ನು ವಸೂಲಿ ಮಾಡಿಕೊಂಡು ಕೊನೆಗೆ ಅಮಾಯಕ ಕಾರು ಚಾಲಕನಿಗೆ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಬಿ.ಬಿ.ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ತಂಗಿದ್ದ ಚೆನ್ನೈ ಮೂಲದ ಚಂದ್ರಶೇಖರನ್ ಎನ್ನಲಾದ ವ್ಯಕ್ತಿಯೊಬ್ಬ ಕಳೆದ ಏ.29 ರಂದು ಬಾಡಿಗೆಗೆ ಕಾರು ಓಡಿಸುತ್ತಿರುವ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯ ಚಾಲಕನಿಗೆ ದೂರವಾಣಿ ಕರೆ ಮಾಡಿ ಲಾಡ್ಜೆಗೆ ಕರೆಸಿಕೊಂಡಿದ್ದ. ಇದರಿಂದ ಲಾಡ್ಜೆ ಬಂದ ಚಾಲಕನಿಗೆ, ತಾನು ಬೆಂಗಳೂರಿನ ವಿಭಾಗದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ವಿಸಿಟಿಂಗ್ ಕಾರ್ಡು ಕೊಟ್ಟು ಪರಿಚಯಿಸಿಕೊಂಡಿದ್ದು ಕೆಲಸದ ನಿಮಿತ್ತ ಜಿಲ್ಲಾದ್ಯಂತ ಸಂಚರಿಸಬೇಕಾಗಿರುವುದರಿಂದ ವಾಹನ ಬೇಕೆಂದು ತಿಳಿಸಿ ಇಂತಿಷ್ಟು ಬಾಡಿಗೆಯನ್ನು ಮಾತನಾಡಿಕೊಂಡಿದ್ದ. ಹಾಗೆಯೇ ಪ್ರತಿದಿನ ಕಾರಿನಲ್ಲಿ ತನಗೆ ಬೇಕಾದ ಕಡೆಯೆಲ್ಲಾ ಸುತ್ತಾಡುತ್ತ ಚಾಲಕನೊಂದಿಗೆ ಹೆಚ್ಚಿನ ಪರಿಚಯವಿಟ್ಟುಕೊಂಡ ಆತ, ಕೊನೆಗೆ ತನಗೆ ಸಂಬಳ ಬರುವುದು ತಡವಾಗಿದ್ದು ಮುಂದಿನ ತಿಂಗಳು ಸಂಬಳ ಬರುತ್ತದೆ ಎಂದೇಳಿ ಬಾಡಿಗೆಯನ್ನು ಕೊಡದೇ ಸ್ವತಃ ಚಾಲಕನಿಂದಲೇ 40 ಸಾವಿರ ರು ಹಣವನ್ನು ಪಡೆದುಕೊಂಡಿದ್ದ.
ಹಣವನ್ನು ಕೇಳುತ್ತಿರುವವನು ತೆರಿಗೆ ಇಲಾಖೆಯ ಅಧಿಕಾರಿಯಾಗಿರುವುದರಿಂದ ನನಗೆ ಹಣ ಬಾರದೇ ಎಲ್ಲಿ ಹೋಗುತ್ತದೆ ಎಂದು ಚಾಲಕ ಸುಮ್ಮನಾಗಿದ್ದ. ಆದರೆ, ಮೂರ್ನಾಲ್ಕು ತಿಂಗಳಾದರೂ ತನ್ನ ಹಣವನ್ನು ಕೊಡದ ಕಾರಣ ಆತಂಕಗೊಂಡು ಬಾಡಿಗೆ ಹಣದ ಜತೆಗೆ ತಾನು ನೀಡಿದ 40 ಸಾವಿರ ರು. ನೀಡುವಂತೆ ಚಾಲಕ ಒತ್ತಾಯಿಸಿದಾಗ ವಂಚಕ ಮದ್ರಾಸ್‌ನಲ್ಲಿ ಕೆಲಸ ಕೊಡಿಸುವ ಅಸ್ತ್ರವನ್ನು ಬಳಸಿಕೊಂಡ. ತಾನು ಕೊಡಿಸುವ ಕೆಲಸದಿಂದ ಒಳ್ಳೆಯ ಸಂಬಳ ಬರುವುದರಿಂದ ಕೊಡಬೇಕಾಗಿರುವ ಬಾಕಿ ಹಣವನ್ನು ಕೇಳದಂತೆ ಹೇಳಿ ಚೆನ್ನೈಗೆ ಹೋಗಲು ಚಾಲಕನನ್ನು ಸಜ್ಜುಗೊಳಿಸಿದ್ದ. ಇದರಂತೆ ಚೆನ್ನೈಗೆ ಹೋಗಲು ರೈಲ್ವೆ ಟಿಕೆಟ್ ಖರೀದಿಸಿ ಸಿದ್ಧತೆಗಳನ್ನು ಮಾಡಿಕೊಂಡು ಚಾಲಕ ಬಂದಾಗ ತೆರಿಗೆ ಇಲಾಖೆ ಅಧಿಕಾರಿ ಎಂದೇಳಿಕೊಂಡಿದ್ದ ಚಂದ್ರಶೇಖರನ್ ಲಾಡ್ಜ್‌ನಿಂದ ಪರಾರಿಯಾಗಿರುವುದು ತಿಳಿದು ಬಂದಿದೆ. ಇತ್ತ ಕಾರಿನ ಬಾಡಿಗೆ ಹಣದ ಜತೆಗೆ ಕೊಟ್ಟಿರುವ 40 ಸಾವಿರ ರು. ಸಾಲದ ಹಣವು ಹೋಗಿ ಇದೀಗ ಚಾಲಕ ತತ್ತರಿಸಿದ್ದಾನೆ. ನಗರ ಠಾಣೆಯ ಪೊಲೀಸರಿಗೆ ದೂರು ಕೊಟ್ಟು ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕನನ್ನು ಸೆರೆ ಹಿಡಿಯಲು ತೀವ್ರ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.