ಕೋಲಾರ

ವಿಷಾಹಾರ ಸೇವನೆ; ಇಬ್ಬರು ಸಾವು, ನಾಲ್ವರು ಅಸ್ವಸ್ಥ

Published On :

ಗುಡಿಬಂಡೆ: ವಿಷಪೂರಿತ ಆಹಾರ ಸೇವಿಸಿದ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟು ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಆರ್. ಚೊಕ್ಕನಹಳ್ಳಿಯಲ್ಲಿ ಶುಕ್ರವಾರ ಸಂಭವಿಸಿದೆ.
ಮೃತರನ್ನು ದಂಪತಿಗಳಾದ ಲಕ್ಷ್ಮಮ್ಮ (55) ಮತ್ತು ನರಸಪ್ಪ (61) ಎಂದು ಗುರುತಿಸಲಾಗಿದೆ. ಇವರ ಸಂಬಂಧಿ ಲಕ್ಷ್ಮಯ್ಯ (43), ನಂಜುಂಡಪ್ಪ (54) ಮತ್ತು ಲಲಿತಮ್ಮ (38) ಎಂಬುವವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಸದ್ಯ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಮಧ್ಯಾಹ್ನ ಮುದ್ದೆ, ಅನ್ನ ಮತ್ತು ಬದನೆಕಾಯಿ ಸಾಂಬಾರು ತಯಾರಿಸುತ್ತಿದ್ದ ಸಂದರ್ಭದಲ್ಲಿ ಸಾಂಬಾರಿನಲ್ಲಿ ಹಲ್ಲಿ ಬಿದ್ದಿತ್ತು. ಇದನ್ನು ನೋಡಿದರೂ ನಿರ್ಲಕ್ಷ್ಯ ವಹಿಸಿದ್ದು ಸ್ವತಃ ಲಕ್ಷ್ಮಮ್ಮ ಸಾಂಬಾರಿನಿಂದ ಹಲ್ಲಿಯನ್ನು ತೆಗೆದು ಹಾಕಿದರು ಎನ್ನಲಾಗಿದೆ. ಎಂದಿನಂತೆ ಕುಟುಂಬಸ್ಥರೆಲ್ಲಾ ಸೇರಿ ಮಧ್ಯಾಹ್ನ ಊಟವನ್ನು ಸೇವಿಸಿ ತೋಟದ ಕೆಲಸಕ್ಕೆ ಹೋದಾಗ ಒಬ್ಬೊಬ್ಬರಾಗಿಯೇ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಇವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮಮ್ಮ ಮತ್ತು ನರಸಪ್ಪ ಮೃತಪಟ್ಟಿದ್ದಾರೆ. ಉಳಿದವರು ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಸಾಂಬಾರಿನಲ್ಲಿ ಹಲ್ಲಿ ಬಿದ್ದಿತ್ತು. ಅದನ್ನು ನಮ್ಮ ತಾಯಿಯೇ ಬಿಸಾಡಿದ್ದರು. ಆಹಾರವನ್ನು ಸೇವಿಸಿದ ನಂತರ ಎಲ್ಲರೂ ಅಸ್ವಸ್ಥರಾಗಿದ್ದರು. ತಕ್ಷಣ ಅವರೆನ್ನೆಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು ಎಂದು ಮೃತ ಲಕ್ಷ್ಮಮ್ಮರವರ ಮಗ ಆನಂದ್ ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಷಪೂರಿತ ಆಹಾರ ಸೇವನೆಯಿಂದ ಅಥವಾ ಸಾಂಬಾರಿನಲ್ಲಿ ಹಲ್ಲಿ ಬಿದ್ದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿತೇ ಎನ್ನುವುದನ್ನು ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ ಪತಿ ಬಂಧನ
ಮುಳಬಾಗಲು: ತಾಲೂಕಿನ ಚಾಮರೆಡ್ಡಿಹಳ್ಳಿ ಗ್ರಾಮದ ವಿವೇಶ್ ಎಂಬವರನ್ನು ವರದಕ್ಷಿಣೆ ಕಿರುಕುಳದ ಹಿನ್ನಲೆಯಲ್ಲಿ ಮುಳಬಾಗಲು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕುರುಬರಹಳ್ಳಿ ವಾಸಿ ಪದ್ಮಾವತಿಯನ್ನು ವಿವಾಹವಾಗಿದ್ದ ಅವರು ವರದಕ್ಷಿಣೆಗಾಗಿ ಹಿಂಸೆ ನೀಡುತ್ತಿದ್ದಾರೆಂದು ಆಕೆ ಮುಳಬಾಗಲು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆರೋಪಿಯನ್ನು ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣಪ್ಪ  ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಟೊಮೋಟೋ ವ್ಯಾಪಾರಿ ಸಾವು
ಕೋಲಾರ: ನಗರದ ಗಂಗೋತ್ರಿ ಲಾಡ್ಜ್ನ್‌ಲ್ಲಿ ತಂಗಿದ್ದ ತಮಿಳುನಾಡು ಮೂಲದ ಟಾಮೋಟೋ ವ್ಯಾಪಾರಿಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.ಮೃತಪಟ್ಟಿರುವ ವ್ಯಕ್ತಿಯನ್ನು ಸೆಲ್ವರಾಜ್ ಎಂದು ಗುರುತಿಸಲಾಗಿದೆ. ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಹೃದಾಯಘಾತದಿಂದ ವ್ಯಕ್ತಿ ಸತ್ತಿರಬಹುದೆಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಶವ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ನಿಜಕಾರಣ ತಿಳಿಯಲು ಸಾಧ್ಯವೆಂದು ತಿಳಿಸಿದ್ದಾರೆ.
ಅಪಘಾತ; ಇಬ್ಬರಿಗೆ ಗಾಯ
ಚಿಂತಾಮಣಿ: ಸರಕು ಸಾಗಾಣಿಕೆ ಟೆಂಪೋ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರಿಬ್ಬರು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬರಿ ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಗಿರಿ ಮತ್ತು ಅಜಯ್ ಎಂಬವರು ಬೈಕಿನಲ್ಲಿ ಹೋಗುತ್ತಿದ್ದಾಗ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ಗಂಭೀರ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರು ಟೆಂಪೊ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ವೈದ್ಯ ವಿದ್ಯಾರ್ಥಿ ಕೊಲೆ ಯತ್ನ ಪ್ರಕರಣ; ಆಂಧ್ರ ಪೊಲೀಸರಿಂದ ವಿಚಾರಣೆ
ಕೋಲಾರ: ಕಳೆದ ಎರಡು ದಿನಗಳ ಹಿಂದೆ ಕೋಲಾರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನ 9 ಸೆಮಿಸ್ಟರ್ ವಿದ್ಯಾರ್ಥಿ ಕಾಮೇಶ್ವರ ಸಾಯಿ ಪ್ರಸಾದ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗಾಗಿ ಶುಕ್ರವಾರ ಆಂದ್ರ ಪ್ರದೇಶದ ವಿಶೇಷ ಪೊಲೀಸ್ ತಂಡ ಕೋಲಾರಕ್ಕೆ ಭೇಟಿ ನೀಡಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದೆ. ಕಾಮೇಶ್ವರ್ ಸಾಯಿ ಪ್ರಸಾದ್ ಸೀಮಾಂಧ್ರ ಮತ್ತು ತೆಲಂಗಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನಲೆಯಲ್ಲಿ ಸತ್ತಿರಬಹುದೆಂಬ ವದಂತಿ ಹಬ್ಬಿರುವುದರಿಂದ ಆಂಧ್ರ ಪೊಲೀಸರು ಸತ್ಯಸಂಗತಿ ತಿಳಿಯಲು ಕೋಲಾರಕ್ಕೆ ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಕಾಮೇಶ್ವರ್ ಇತ್ತೀಚೆಗೆ ಕಾಲೇಜಿಗೆ ಸರಿಯಾಗಿ ಹೋಗುತ್ತಿರಲಿಲ್ಲ. ಮಾನಸಿಕವಾಗಿ ಖಿನ್ನನಾಗಿದ್ದ. ತಾಯಿಯು ಮಗನ ಆರೈಕೆಗಾಗಿ ಹೈದರಾಬಾದಿನ ಮೆಹಬೂಬ್ ನಗರದಿಂದ ಕೋಲಾರಕ್ಕೆ ಬಂದು ಮಗನಿದ್ದ ಖಾಸಗಿ ರೂಮ್ನುಲ್ಲಿ ಇದ್ದು ಕೆಲವು ದಿನಗಳ ಹಿಂದೆ ಊರಿಗೆ ಹಿಂದಿರುಗಿದ್ದರು ಎಂದು ಪ್ರಕರಣದ ತನಿಖೆಗಾಗಿ ನೇಮಕ ಮಾಡಿರುವ ಜಿಲ್ಲಾ ಪೊಲೀಸರ ವಿಶೇಷ ತಂಡದ ಮೂಲಗಳು ತಿಳಿಸಿವೆ. ಕಾಮೇಶ್ವರ್ ತಾನಾಗಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾನೆಯೇ ಅಥವಾ ಯಾರಾದರೂ ಹತ್ಯೆ ಮಾಡಲು ಪೆಟ್ರೋಲ್ ಸುರಿದಿದ್ದಾರೆಯೇ ಎಂಬುದು ತಿಳಿಯಲು ಪೊಲೀಸರು ಪ್ರಯತ್ನ ಮುಂದುವರೆಸಿದ್ದಾರೆ. ಪ್ರಸ್ತುತ ಕಾಮೇಶ್ವರ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಆಂಧ್ರ ಪ್ರದೇಶದ ಪೊಲೀಸರು ಯಾವುದೇ ಮಹತ್ವದ ಮಾಹಿತಿ ಇಲ್ಲದೆ ಆಂಧ್ರಕ್ಕೆ ವಾಪಸ್ ಹೋಗಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.