ತಡವಾದರೂ ಮಕ್ಕಳ ಕೈ ಸೇರಲಿರುವ ಸೈಕಲ್ಗಳು
ಕನ್ನಡಪ್ರಭ ವಾರ್ತೆ, ಕೋಲಾರ, ನ.17
ರಾಜ್ಯ ಸರ್ಕಾರ ತಡವಾದರೂ 8ನೇ ತರಗತಿ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ಸಿದ್ಧತೆ ನಡೆಸಿದೆ.
ಬಿಜೆಪಿ ಸರ್ಕಾರವಿದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ಓದುವ ಮಕ್ಕಳಿಗೆ ಸೈಕಲ್ ಭಾಗ್ಯವನ್ನು ಜಾರಿಗೆ ತಂದಿದ್ದರು. ಈ ಯೋಜನೆ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗಲೂ ಜಾರಿಯಲ್ಲಿತ್ತು.
ಕಾಂಗ್ರೆಸ್ ಸರ್ಕಾರ ಬಂದ ನಂತರ ಸೈಕಲ್ ಭಾಗ್ಯ ಯೋಜನೆಗೆ ಅನುಮೋದನೆ ಪಡೆಯಲು ವಿಳಂಬವಾಗಿತ್ತು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದರಿಂದ ತೊಂದರೆ ಆಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ಪ್ರತಿಯೊಂದು ತಾಲೂಕಿನ ಬಿಇಒಗಳಿಂದ ಬೇಡಿಕೆ ಪಟ್ಟಿ ತರಿಸಿಕೊಂಡು ಅನುದಾನ ಬಿಡುಗಡೆ ಮಾಡಿರುವುದರಿಂದ ಸೈಕಲ್ಗಳನ್ನು ವಿತರಣೆ ಮಾಡಲು ಕೋಲಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಲೂಧಿಯಾನದ ಜಿ.ಟಿ. ರೋಡ್ನಲ್ಲಿರುವ ಮೆ.ಏವನ್ ಸೈಕಲ್ಸ್ ಲಿನಿಂದ ಸೈಕಲ್ ಬಿಡಿ ಭಾಗಗಳನ್ನು ತರಿಸಿಕೊಂಡು ಜೋಡಣೆ ಕಾರ್ಯಕ್ಕೆ ಚಾಲನೆ ನೀಡಿದೆ.
ಅ.10ರಂದೇ ಸುತ್ತೋಲೆ: ಕೋಲಾರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಧುಗಿರಿ, ಶಿವಮೊಗ್ಗ, ರಾಮನಗರ, ತುಮಕೂರು, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಹಾಸನ, ಮಂಡ್ಯ, ಮೈಸೂರು, ಉಡುಪಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಮೆ.ಏವನ್ ಸೈಕಲ್ ಕಂಪನಿಯಿಂದ ಹಾಗೂ ಲೂಧಿಯಾನದ ಮೆ. ಹೀರೋ ಸೈಕಲ್ಸ್ ಕಂಪನಿಯಿಂದ ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಸಿರಸಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಸೈಕಲ್ಗಳನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದೆ.
2013-14ನೇ ಸಾಲಿಗೆ ಸೈಕಲ್ಗಳನ್ನು ವಿತರಣೆ ಮಾಡುವಾಗ ಮೊದಲು ಹಿಂದಿನ ಸಾಲಿನಲ್ಲಿ ಉಳಿಕೆ ಆಗಿರುವ ಸೈಕಲ್ಗಳನ್ನು ವಿತರಣೆ ಮಾಡಿ ನಂತರ ಹೊಸ ಫಲಾನುಭವಿಗಳಿಗೆ ಸೈಕಲ್ ವಿತರಣೆ ಮಾಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಕಳೆದ ಅಕ್ಟೋಬರ್ 10ರಂದೇ ಸುತ್ತೋಲೆಯನ್ನು ಕಳುಹಿಸಿದ್ದಾರೆ.
ಸರಜರಾಜು ವಿಳಂಬ: ನಗರಸಭೆ, ನಗರ ಪಾಲಿಕೆ ಸರಹದ್ದಿನಲ್ಲಿ ಬರುವ ಶಾಲೆಗಳ ಮಕ್ಕಳನ್ನು ಮತ್ತು ಬಸ್ಪಾಸ್ ಹಾಗೂ ಹಾಸ್ಟೆಲ್ ಸೌಲಭ್ಯ ಹೊಂದಿರುವ ಮಕ್ಕಳನ್ನು ಹೊರತುಪಡಿಸಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 8ನೇ ತರಗತಿಯ ಎಲ್ಲಾ ಮಕ್ಕಳಿಗೂ ಸೈಕಲ್ಗಳನ್ನು ಉಚಿತವಾಗಿ ನೀಡಲು ಸೂಚಿಸಲಾಗಿದೆ.
2013ರ ಅಕ್ಟೋಬರ್ 31ರೊಳಗೆ ಸೈಕಲ್ಗಳನ್ನು ವಿತರಣೆ ಮಾಡಿ ವರದಿ ಸಲ್ಲಿಸುವಂತೆ ಬಿಇಒಗಳಿಗೆ ಸೂಚಿಸಲಾಗಿತ್ತಾದರೂ ಕಂಪನಿಯಿಂದ ಸೈಕಲ್ಗಳು ಸರಬರಾಜು ಆಗುವುದು ವಿಳಂಬವಾಗಿರುವುದರಿಂದ ತಡವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಡಿಡಿಪಿಐ ಪದ್ಮನಾಭ್ ತಿಳಿಸಿದ್ದಾರೆ.
ಈ ಬಾರಿ ಸರ್ಕಾರ ಬಾಲಕಿಯರಿಗೆ ಕೆಂಪು ಬಣ್ಣದ ಹಾಗೂ ಬಾಲಕರಿಗೆ ನೀಲಿ ಬಣ್ಣದ ಸೈಕಲ್ಗಳನ್ನು ವಿತರಣೆ ಮಾಡಲಿದೆ. ಮಕ್ಕಳಿಗೆ ಸೈಕಲ್ಗಳನ್ನು ಯಾವುದೇ ಲೋಪವಿಲ್ಲದೆ ವಿತರಣೆ ಮಾಡಿ ದೃಢೀಕರಣ ಪತ್ರವನ್ನು ಸಕಾಲಕ್ಕೆ ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಕ್ಕಳಿಗೆ ಅರಿವು: ಸೈಕಲ್ಗಳನ್ನು ಪ್ರತಿ ಶಾಲಾ ಹಂತದಲ್ಲಿ ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸ್ಥಳೀಯ ಸರ್ಕಾರಿ ನೌಕರರನ್ನೊಳಗೊಂಡ ತ್ರಿ-ಸದಸ್ಯ ಸಮಿತಿಯನ್ನು ರಚಿಸಿಕೊಂಡು ಸೈಕಲ್ಗಳನ್ನು ಮಕ್ಕಳಿಗೆ ವಿತರಣೆ ಮಾಡಲು ತಿಳಿಸಲಾಗಿದೆಯಲ್ಲದೆ ಗುಣಮಟ್ಟದ ಕಡೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.
8ನೇ ತರಗತಿಯಲ್ಲಿ ಪಡೆಯುವ ಸೈಕಲ್ ಕನಿಷ್ಠ 10ನೇ ತರಗತಿಯನ್ನು ಪೂರ್ಣಗೊಳಿಸುವವರೆಗೆ ಸುರಕ್ಷಿತವಾಗಿ ಕಾಪಾಡಿಕೊಳ್ಳುವಂತೆ ಮಕ್ಕಳಿಗೆ ಅರಿವು ಮೂಡಿಸುವಂತೆಯೂ ಆಯುಕ್ತರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ 135 ಬಾಲಕಿಯರು ಮತ್ತು 117 ಬಾಲಕರು ಸೇರಿದಂತೆ ಒಟ್ಟು 252 ವಿದ್ಯಾರ್ಥಿಗಳಿಗೆ ಸೈಕಲ್ಗಳನ್ನು ವಿತರಣೆ ಮಾಡಿಲ್ಲ. ಮೊದಲು ಹಿಂದಿನ ಸಾಲಿನ ಸೈಕಲಲ್ಗಳನ್ನು ವಿತರಣೆ ಮಾಡಿ ನಂತರ ಹೊಸಬರಿಗೆ ನೀಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ನೀಡಿದ್ದಾರೆ.
2013-14ನೇ ಸಾಲಿಗೆ 8032 ಬಾಲಕಿಯರಿಗೆ ಮತ್ತು 7457 ಮಂದಿ ಬಾಲಕರು ಸೇರಿ ಒಟ್ಟು 15489 ಮಕ್ಕಳಿಗೆ ಸೈಕಲ್ ವಿತರಣೆ ಮಾಡಬೇಕಾಗಿದೆ. ಹಿಂದಿನ ಸಾಲಿನ ಬಾಕಿ ಹಾಗೂ ಹೊಸದಾಗಿ ನೀಡಬೇಕಾಗಿರುವ ಸೈಕಲ್ಗಳ ವಿವರ ಇಂತಿದೆ.
ಬಂಗಾರಪೇಟೆ ತಾಲೂಕು- 1392 ಬಾಲಕಿಯರು, 1247 ಬಾಲಕರು, ಒಟ್ಟು 2630. ಕೆಜಿಎಫ್- 996(ಹೆ), 914(ಗ), ಒಟ್ಟು 1910, ಕೋಲಾರ-1827(ಹೆ), 1595(ಗಂ), ಒಟ್ಟು 3422.
ಮಾಲೂರು- 1316(ಹೆ), 1243(ಗಂ), ಒಟ್ಟು 2559. ಮುಳಬಾಗಿಲು- 1516(ಹೆ), 1527(ಗಂ), ಒಟ್ಟು 3043. ಶ್ರೀನಿವಾಸಪುರ- 1120( ಹೆ), 1048(ಗಂ) ಒಟ್ಟು 2168 ಸೇರಿದಂತೆ ಬಾಲಕಿಯರಿಗೆ 8167, ಬಾಲಕರಿಗೆ 7574 ಸೇರಿ ಒಟ್ಟು 15741 ಸೈಕಲ್ಗಳನ್ನು ಕೋಲಾರ ಜಿಲ್ಲೆಯಲ್ಲಿ ವಿತರಣೆ ಮಾಡಬೇಕಾಗಿದೆ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

