ಮತದಾರರ ಚೀಟಿಯಲ್ಲಿನ ತಪ್ಪು ಸರಿಪಡಿಸಲು ಒತ್ತಾಯ
ಕೋಲಾರ: ಸರ್ಕಾರಿ ದಾಖಲಾತಿಗಳಲ್ಲಿ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ವರ್ಗ ಮಾಡಿರುವ ತಪ್ಪುಗಳನ್ನು ಇಲಾಖೆಯೇ ಹೊಣೆ ಹೊತ್ತು ಕೂಡಲೇ ಸರಿಪಡಿಸಬೇಕು ಎಂದು ಯಂಗ್ ಇಂಡಿಯಾ ಇಂಟಿಗ್ರೇಟೆಡ್ ವೆಲ್ಫೇರ್ ಫೌಂಡೇಷನ್ ರಾಜ್ಯಾಧ್ಯಕ್ಷ ಹಾಗೂ ವಕೀಲ ಕೆ. ನರೇಂದ್ರಬಾಬು ಆಗ್ರಹಿಸಿದರು.
ನಗರದ ಕ್ಲಾಕ್ಟ್ವರ್ ಇಮ್ರಾನ್ಪ್ರಾಂಗಣದಲ್ಲಿ ಯಂಗ್ ಇಂಡಿಯಾ ಇಂಟಿಗ್ರೇಟೆಡ್ ವೆಲ್ಫೇರ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ಚೀಟಿಯಲ್ಲಿನ ತಪ್ಪುಗಳ ಕ್ರೋಢೀಕರಣ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಹಣಿ, ಮುಟ್ಯೇಷನ್, ಮತದಾರರ ಚೀಟಿ ಮೊದಲಾದವುಗಳಲ್ಲಿ ಹೆಸರು, ವಿಳಾಸ ಮೊದಲಾದವುಗಳನ್ನು ನಮೂದಿಸುವಲ್ಲಿ ಇಲಾಖೆಯ ಸಿಬ್ಬಂದಿ ವರ್ಗವೇ ತಪ್ಪು ಮಾಡಿರುತ್ತಾರೆ. ಆದರೆ ಇವುಗಳ ತಿದ್ದುಪಡಿಗಾಗಿ ಜನ ಕಚೇರಿಗಳನ್ನು ಸುತ್ತಬೇಕಾದ ದುಸ್ಥಿತಿ ನಮ್ಮಲ್ಲಿದೆ. ಕೆಲವೊಮ್ಮೆ ಇವುಗಳ ತಿದ್ದುಪಡಿಗಾಗಿ ಕೋರ್ಟ್, ಕಚೇರಿ ಮೆಟ್ಟಲು ಹತ್ತಬೇಕಾದ ಪರಿಸ್ಥಿತಿಯೂ ಸಾಕಷ್ಟು ಜನಕ್ಕೆ ಒದಗಿ ಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ದಾಖಲಾತಿಗಳಲ್ಲಿ ಆಗಿರಬಹುದಾದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸರ್ಕಾರವೇ ಕಾಲಕಾಲಕ್ಕೆ ಅಲ್ಲಲ್ಲಿ ಶಿಬಿರಗಳನ್ನು ಏರ್ಪಡಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ತಿದ್ದುಪಡಿಗೆ ಆದೇಶ ಹೊರಡಿಸುವುದು ಅಗತ್ಯ ಎಂದರು.
ಮತದಾರರ ಗುರ್ತಿನ ಚೀಟಿಗಳಲ್ಲಿ ಇಲಾಖೆಯ ಸಿಬ್ಬಂದಿ ವರ್ಗ ಮಾಡಿರುವ ತಪ್ಪುಗಳಿಂದಾಗಿ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಲು ಪಾಸ್ಪೋರ್ಟ್ ಕೊಡುತ್ತಿಲ್ಲ. ಇವುಗಳ ತಿದ್ದುಪಡಿ ಆಗದಿದ್ದಲ್ಲಿ ಜೀವನದುದ್ದಕ್ಕೂ ಇದೇ ತಪ್ಪುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಹೀಗಿರುವಾಗ ಇಂತಹ ಮತದಾರರ ಚೀಟಿ ವಿತರಿಸಿ ಆದ ಅನುಕೂಲವಾದರೂ ಏನು ಇದುವರೆಗೂ ಸಾಕಷ್ಟು ಬಾರಿ ಮತದಾರರ ಗುರ್ತಿನ ಚೀಟಿ ತಿದ್ದುಪಡಿಗೆ ನಮೂನೆ 8 ಅಡಿಯಲ್ಲಿ ಅರ್ಜಿಗಳನ್ನು ಇಲಾಖಾ ಕಚೇರಿಗೆ ನೀಡಿ ಏನೊಂದೂ ಅನುಕೂಲವಾಗಿಲ್ಲ. ಆದ್ದರಿಂದ ಮುಂಚಿತವಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಶಿಬಿರದ ಮಾಹಿತಿಯನ್ನು ನೀಡಿ, ಅನುಮತಿ ಪಡೆದು ಮತದಾರರ ಗುರ್ತಿನ ಚೀಟಿಗಳಲ್ಲಿ ಆಗಿರಬಹುದಾದ ತಪ್ಪುಗಳನ್ನು ಕ್ರೋಡೀಕರಿಸಿ ಇಲಾಖಾ ಕಚೇರಿಗೆ ತಿದ್ದುಪಡಿಗೆ ನೀಡಲಾಗುವುದು. ಆಸಕ್ತರು ಕೋಲಾರದ ವೆಂಕಟೇಶ್ವರ ಟಾಕೀಸ್ ಎಡ ಭಾಗದಲ್ಲಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಯಂಗ್ ಇಂಡಿಯಾ ಇಂಟಿಗ್ರೇಟೆಡ್ ವೆಲ್ಫೇರ್ ಫೌಂಡೇಷನ್ ಕಚೇರಿಗೆ ಸಂಪರ್ಕಿಸಬಹುದು. ಇಲ್ಲವೇ 9480421145ಗೆ ಕರೆ ಮಾಡಬಹುದು ಎಂದರು.
ಸಮಾಜ ಸೇವಕ ಎಂ. ಇಮ್ರಾನ್ ಮಾತನಾಡಿ ಮತದಾರರ ಚೀಟಿಗಳಲ್ಲಿ ಸಾಕಷ್ಟು ತಪ್ಪುಗಳು ಕಂಡು ಬಂದಿವೆ. ಭಾವಚಿತ್ರ ತಪ್ಪಾಗಿ ಬೇರೊಬ್ಬರದ್ದು ಬಂದಿರುತ್ತದೆ. ಕನ್ನಡದಲ್ಲಿ ಒಂದು ಹೆಸರು ದಾಖಲಾಗಿದ್ದರೆ, ಇಂಗ್ಲೀಷಿನಲ್ಲಿ ಇನ್ನೊಂದು ಹೆಸರು ಬಂದಿರುತ್ತದೆ. ವಯಸ್ಸು ತಪ್ಪಾಗಿರುತ್ತದೆ. ವಿಳಾಸ ಅಸಮರ್ಪಕವಾಗಿರುತ್ತದೆ. ಮತದಾರರ ಗುರ್ತಿನ ಚೀಟಿ ಕೇವಲ ಮತ ಚಲಾವಣೆಗೆ ಮಾತ್ರ ಇರದೇ ಪ್ರತಿಯೊಂದಕ್ಕೂ ಫೋಟೋ ಐಡೆಂಟಿಟಿ ಆಗಿರುವುದರಿಂದ ಈ ಎಲ್ಲಾ ಮಾಹಿತಿಗಳು ಸರಿಯಾಗಿ ಹಾಗೂ ಸತ್ಯವಾಗಿರುವುದು ಅತ್ಯಗತ್ಯ ಎಂದು ತಿಳಿಸಿದರು. ದರ್ಗಾ ಮೊಹಲ್ಲಾದ ಮುಖಂಡರಾದ ಮುಜೀಬ್, ಯಾಸೀರ್ ಅರಾಫತ್, ಅಮ್ಜದ್ ಆಲಿ, ಇರ್ಫಾನ್, ಷೇಬುಲ್ಲಾ ಷರೀಫ್, ಅಸ್ಲಾಂ ಪಾಷ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

