ಕೋಲಾರ

ಹಳೇ ದ್ವೇಷ: ಕಟ್ಟುತ್ತಿದ್ದ ಮನೆಯನ್ನೇ ಕೆಡವಿದರು!

Published On :

ಚಿಂತಾಮಣಿ: ರಾಜಕೀಯ ದುರುದ್ದೇಶದಿಂದ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಕಿಡಿಗೇಡಿಗಳ ಗುಂಪೊಂದು ಮಾರಕಾಸ್ತ್ರಗಳನ್ನು ಹಿಡಿದು ನೆಲಸಮ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಸಿಬಿ ವಾಹನ ಸಮೇತ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ 31ನೇ ವಾರ್ಡ್‌ನ ತಿಮ್ಮಸಂದ್ರ ಗ್ರಾಮದ ಮುನಿರಾಜು ಎಂಬಾತ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಸೇರಿದ ಕಟ್ಟಡದ ಮೋಲ್ಡಿಂಗ್ ಹಾಕುತ್ತಿರುವಾಗ ಅದೇ ಗ್ರಾಮದ ನಾಗೇಶ ಎಂಬಾತ ಗುಂಪಿನೊಂದಿಗೆ ಬಂದು ಮನೆ ಕಟ್ಟದಂತೆ ಕೊಲೆ ಬೆದರಿಕೆ ಹಾಕಿದ್ದಾನೆ.
 ನಂತರ ರಾತ್ರಿ ವೇಳೆ ಗೋಪಸಂದ್ರ ಗ್ರಾಮದ ರವಿ ಎಂಬವರಿಗೆ ಸೇರಿದ ಜೆಸಿಬಿ ಯಂತ್ರದ ಮೂಲಕ ಕಟ್ಟಡವನ್ನು ನೆಲಸಮ ಮಾಡಿ ಪರಾರಿಯಾಗಿದ್ದಾನೆ. ನಂತರ ಮಾಲೀಕರು ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯ ಒದಗಿಸಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು.
ತಿಮ್ಮಸಂದ್ರ ಗ್ರಾಮದ ಮುನಿರಾಜು ಹಾಗೂ ನಾಗೇಶ್ ಇಬ್ಬರಿಗೂ ನಿವೇಶನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು. ಆದರೆ ಕಳೆದ ವಾರ ನಿವೇಶನ ಮೇಲಿದ್ದ ದಾವೆಯನ್ನು ಹಿಂಪಡೆಯಲು ನ್ಯಾಯಾಲಯದ ತೀರ್ಪಿನ ಮೇರೆಗೆ ಮುನಿರಾಜು 20/17 ನಿವೇಶನದಲ್ಲಿ ಮನೆ ಕಟ್ಟಡ ನಿರ್ಮಾಣಗೊಳಿಸುತ್ತಿದ್ದರು.
 ಆಗ ನಾಗೇಶ್ ತನ್ನ ಬೆಂಬಲಿಗರೊಂದಿಗೆ ಮಾರಕಾಸ್ತ್ರ ಹಿಡಿದು ನಾಗಭೂಷಣ್, ಬಾಲು, ಮುನಿರಾಜ, ರತ್ನಮ್ಮ, ಲಕ್ಷ್ಮೀದೇವಮ್ಮ ಎಂಬುವರೊಂದಿಗೆ ಏಕಾಏಕಿ ಜೆಸಿಬಿ ಮೂಲಕ ಮನೆ ನೆಲಸಮ ಮಾಡಿರುವುದಾಗಿ ಅನ್ಯಾಯಕ್ಕೊಳಗಾದ ಮುನಿರಾಜು ಪೊಲೀಸರಿಗೆ ವಿವರಿಸಿದ್ದಾನೆ. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಡ್ಡ ಹೋದ ಮನೆ ಮಾಲೀಕರಾದ ಮುನಿರಾಜು ತಾಯಿ ರಾಮಕ್ಕ, ತಂದೆ ಮುನಿಯಪ್ಪನ ಮೇಲೆ ಈ ಗುಂಪು ಮಾರಣಾಂತಕ ಹಲ್ಲೆ ಮಾಡಿದೆ.
ಅಲ್ಲದೆ, ವೆಂಕಟಲಕ್ಷ್ಮಮ್ಮ ಇತರರನ್ನು ಮನೆಯಲ್ಲೇ ಕೂಡಿ ಹಾಕಿ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದೆ. ತೀವ್ರ ಗಾಯಗೊಂಡ ಇಬ್ಬರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನೆಲಸಮ ಮಾಡಿದ ಜೆಸಿಬಿ ಯಂತ್ರ ಸಮೇತ ಚಾಲಕ ವಿಜಯ್ ಎಂಬಾತನನ್ನು ಬಂಧಿಸಿ ವಿಚಾರಣೆಯನ್ನು ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.